ಗರಿಮಾ ಚೌಧರಿ
ಭಾರತದಲ್ಲಿ ಜೂಡೊ ಕ್ರೀಡೆ ಅಷ್ಟೇನೂ ಜನಪ್ರಿಯವಲ್ಲ. ಆದರೆ ಈ ಕ್ರೀಡೆಯಲ್ಲಿ ಈ ಸಲ ಲಂಡನ್ ಒಲಿಂಪಿಕ್ಸ್‌ನಲ್ಲಿ ಗರಿಮಾ ಚೌಧರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮೀರತ್‌ನ 22 ವರ್ಷ ವಯಸ್ಸಿನ ಗರಿಮಾ ವಿವಿಧ ರಾಷ್ಟ್ರೀಯ ಕೂಟಗಳಲ್ಲಿ ಕಳೆದೊಂದು ದಶಕದಿಂದ ಹರಿಯಾಣ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಜೂಡೊ ಬಗ್ಗೆ ಆಕರ್ಷಿತರಾಗಿ ಅದರಲ್ಲಿ ಅಭ್ಯಾಸದಲ್ಲಿ ತೊಡಗಿದ್ದವರು.
ಇವರಿಗೆ 2004ರಲ್ಲಿ ಜೀವನ್ ಶರ್ಮಾ ಎಂಬ ಕೋಚ್ ಸಿಕ್ಕಿದರು. ಅಲ್ಲಿಂದ ಈವರೆಗೆ ಗರಿಮಾ ಹಿಂತಿರುಗಿ ನೋಡಿದ್ದೇ ಇಲ್ಲ. ಹತ್ತಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ 2004ರಲ್ಲಿ ನಡೆದ ಕಾಮನ್‌ವೆಲ್ತ್ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಇವರು ಪಾಲ್ಗೊಂಡಿದ್ದರು. 2006ರಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು. 2007 ಮತ್ತು 2008 ಹಾಗೂ 2009ರಲ್ಲಿ ಇವರು ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದುಕೊಂಡರು. ಕಳೆದ ವರ್ಷ ನಡೆದ ಸಮರ ಕಲೆಗಳ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿಯೂ ಇವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಇದೇ ವರ್ಷ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಏಳನೇ ಸ್ಥಾನ ಗಳಿಸಿದರು. ಹೀಗಾಗಿ 63ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಗರಿಮಾ ಅಲ್ಲಿ ಪದಕಕ್ಕಾಗಿ ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸಲಿದ್ದಾರೆ.
ಭಾರತ ಜೂಡೊದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ತೊಂಬಿದೇವಿ ಮತ್ತು ದಿವ್ಯಾಶರ್ಮ ಪೈಪೋಟಿ ನಡೆಸಿ ನಿರಾಸೆಗೊಂಡಿದ್ದರು. ಈ ಸಲ ಗರಿಮಾ ಅವರಿಗೆ ಅದೃಷ್ಟ ಒಲಿಯಬಹುದೇ ?
ಡಾನ್ ಥಾಮ್ಸನ್
`ಗಾರ್ಡಿಯನ್~ ಪತ್ರಿಕೆಯ 2006 ಅಕ್ಟೋಬರ್ 5ರ ಸಂಚಿಕೆಯಲ್ಲಿ ಕ್ರೀಡಾ ಸಾಧಕನೊಬ್ಬನ ಬಗ್ಗೆ ಶ್ರದ್ಧಾಂಜಲಿ ಸ್ವರೂಪದ ಲೇಖನವೊಂದು ಪ್ರಕಟಗೊಂಡಿದ್ದು ಕುತೂಹಲಕರವಾಗಿತ್ತು. ಸಾಮಾನ್ಯ ಮನುಷ್ಯನೊಬ್ಬ ತನ್ನ ಮನಸ್ಸಿಗೆ ತೋಚಿದ ರೀತಿಯಲ್ಲಿ ತನಗಿಷ್ಟದ ಕ್ರೀಡೆಯೊಂದರಲ್ಲಿ ಅಭ್ಯಾಸ ನಡೆಸಿ ಒಲಿಂಪಿಕ್ಸ್ ಚಿನ್ನ ಗೆದ್ದುದು ಮಹತ್ತರ ಸಂಗತಿಯಾಗಿದೆ. ಅಂತಹ ಸಾಧಕ ಡಾನ್ ಥಾಮ್ಸನ್ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ `ನಿನ್ನೆ~ ಸಾವನ್ನಪ್ಪಿದ್ದಾರೆ ಎಂದು ಆ ಪತ್ರಿಕೆಯಲ್ಲಿ ವರದಿಯಾಗಿತ್ತು.
ಡಾನ್ ಥಾಮ್ಸನ್ ಒಲಿಂಪಿಕ್ಸ್‌ನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇವರು 1960ರಲ್ಲಿ ಚಿನ್ನ ಗೆದ್ದ ಸಾಹಸಿ. ಆ ಒಲಿಂಪಿಕ್ಸ್‌ನಲ್ಲಿ ಬ್ರಿಟನ್‌ಗೆ ಅಥ್ಲೆಟಿಕ್ಸ್‌ನಿಂದ ಬಂದ ಏಕೈಕ ಚಿನ್ನ ಕೂಡಾ ಅದೇ ಆಗಿತ್ತು.
ವೆಲಿಂಗ್ಟನ್‌ನಲ್ಲಿ ಹುಟ್ಟಿ (20-1-1933) ಬೆಳೆದ ಇವರು ಇನ್ಸೂರೆನ್ಸ್ ಕಂಪೆನಿಯೊಂದರ ಕಚೇರಿಯಲ್ಲಿ ಗುಮಾಸ್ತನಾಗಿ ದುಡಿಯುತ್ತಿದ್ದರು. ಇವರಿಗೆ ಇದ್ದಕ್ಕಿದ್ದಂತೆ ವೇಗದ ಓಟಗಾರನಾಗಬೇಕೆನಿಸಿ, ತಮ್ಮಷ್ಟಕ್ಕೆ ತಾವೇ ಅಭ್ಯಾಸ ನಡೆಸತೊಡಗಿದರು. ಆಗ ಅಪಘಾತವೊಂದರಲ್ಲಿ ಗಾಯಾಳುವಾದ್ದರಿಂದ, ಓಡುವ ಬದಲು ನಡೆಯತೊಡಗಿದರು. ಕೊನೆಗೆ ನಡಿಗೆಯಲ್ಲಿಯೇ ವೇಗ ಕಂಡುಕೊಳ್ಳುವ ಅಭ್ಯಾಸದಲ್ಲಿ ತೊಡಗಿದರು.
1960ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲೂ ಆಯ್ಕೆಯಾದರು. ರೋಮ್‌ನಲ್ಲಿ ಆಗ 30 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಉಷ್ಣಾಂಶವಿತ್ತು. ಅದಕ್ಕೆ ಹೊಂದಿಕೊಳ್ಳಲಿಕ್ಕಾಗಿ ಥಾಮ್ಸನ್ ಅವರು ಮನೆಯ ಕೊಠಡಿಯೊಂದರ ಉಷ್ಣಾಂಶವನ್ನೇ 38 ಸೆಂಟಿಗ್ರೇಡ್‌ನಲ್ಲಿರುವಷ್ಟು ಮಾಡಿಕೊಂಡು ಅದರೊಳಗೆ ಅಭ್ಯಾಸ ನಡೆಸಿದ್ದರು.
ಇವರು ಮೆಲ್ಬರ್ನ್ ಒಲಿಂಪಿಕ್ಸ್‌ನ ನಡಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೂರು ಮೈಲು ನಡೆದಿದ್ದಾಗಲೇ ಕುಸಿದು ಬಿದ್ದ್ದದರು. ಈ ಎಲ್ಲಾ ದಟ್ಟ ಅನುಭವದೊಂದಿಗೆ ರೋಮ್‌ಗೆ ಸಂಪೂರ್ಣ ಸಿದ್ಧರಾಗಿ ತೆರಳಿದ್ದರು. ಅಲ್ಲಿ ಅದಾಗಲೇ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಸ್ವೀಡನ್‌ನ ಜಾನ್ ಲಂಗೈನ್ ಸೆಣಸಾಟಕ್ಕೆ ನಿಂತಿದ್ದರು.
ಆ ಸ್ಪರ್ಧೆಯಲ್ಲಿ ಥಾಮ್ಸನ್ 4ಗಂಟೆ 25ನಿಮಿಷ 30ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರೆ, ಜಾನ್ 4ಗಂಟೆ 25ನಿಮಿಷ 47 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಥಾಮ್ಸನ್‌ಗೆ ಚಿನ್ನ ಸಂಭ್ರಮ.
ಇವರು ಆ ನಂತರ ನಿರಂತರವಾಗಿ ಒಂದಿಲ್ಲಾ ಒಂದು ನಡಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದರು. ಇವರಿಗೆ 58 ವರ್ಷ ವಯಸ್ಸಾಗಿದ್ದಾಗ ಕೂಡಾ ಮ್ಯೋರಥಾನ್ ಓಟದ ಸ್ಪರ್ಧೆಯೊಂದರಲ್ಲಿ ಇಂಗ್ಲೆಂಡನ್ನು ಪ್ರತಿನಿಧಿಸಿದ್ದುದು ವಿಶೇಷ.
ಇತಿಹಾಸದ ಪುಟಗಳಿಂದ
ಇಟಲಿಗೂ ಆಧುನಿಕ ಒಲಿಂಪಿಕ್ಸ್‌ಗೂ ಆದಿಯಿಂದಲೂ ಸಂಬಂಧ. 1908ರ ಒಲಿಂಪಿಕ್ ಕೂಟವನ್ನು ರೋಮ್ ನಗರದಲ್ಲಿಯೇ ನಡೆಸಲು ಸಿದ್ಧತೆಗಳು ನಡೆದಿದ್ದವು. ಆದರೆ ವೆಸೂವಿಯಸ್ ಜ್ವಾಲಾಮುಖಿ ಮಾಡಿದ ಅನಾಹುತದಿಂದಾಗಿ ಇಟಲಿ ಕೈಚೆಲ್ಲಿ ಕುಳಿತಿತ್ತು. ಹೀಗಾಗಿ ಆ ಸಲ ಬ್ರಿಟನ್ ಆತಿಥ್ಯ ವಹಿಸಿತ್ತು. ಇಟಲಿಯ ರೋಮ್ ನಗರದಲ್ಲಿ 1960ರಲ್ಲಿ ಬಲು ದೊಡ್ಡಮಟ್ಟದಲ್ಲಿಯೇ ಒಲಿಂಪಿಕ್ ಕೂಟ ನಡೆಯಿತು. ಆ ಸಲ 83 ದೇಶಗಳ 5,338 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 17 ಕ್ರೀಡೆಗಳ 150 ಸ್ಪರ್ಧೆಗಳಲ್ಲಿ ಸೆಣಸಾಟ ನಡೆದವು.
ಭಾರತದ ಮಟ್ಟಿಗೆ ಆ ಕೂಟ ನೆನಪಲ್ಲಿ ಉಳಿಯುವಂತಹದ್ದು. ಏಕೆಂದರೆ 1928ರಿಂದ ನಿರಂತರವಾಗಿ ಆರು ಸಲ ಚಿನ್ನದ ಪದಕ ಗೆಲ್ಲುತ್ತಾ ಬಂದಿದ್ದ ನಮ್ಮ ಹಾಕಿ ತಂಡ ಅದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಸೋತು ರಜತ ಪದಕಕ್ಕೆ ತೃಪ್ತಿ ಪಡುವಂತಾಯಿತು. ಅಮೆರಿಕಾದ ಬ್ಯಾಸ್ಕೆಟ್‌ಬಾಲ್ ತಂಡ ಸತತ ಐದನೇ ಸಲ ಚಿನ್ನದ ಪದಕವನ್ನು ಉಳಿಸಿಕೊಂಡಿತು.
ಸೋವಿಯತ್ ಒಕ್ಕೂಟ ಅಲ್ಲಿಯೂ ಅಮೆರಿಕ್ಕೆ ಸೆಡ್ಡು ಹೊಡೆಯಿತು. ಸೋವಿಯತ್ 43 ಚಿನ್ನವೂ ಸೇರಿದಂತೆ 103 ಪದಕಗಳನ್ನು ಗೆದ್ದರೆ, ಅಮೆರಿಕ 34 ಚಿನ್ನವೂ ಸೇರಿದಂತೆ 71 ಪದಕಗಳನ್ನು ಗಳಿಸಿತು. ಆತಿಥೇಯ ಇಟಲಿ ಮಾತ್ರ 13 ಚಿನ್ನದ ಪದಕಗಳೂ ಸೇರಿದಂತೆ 36 ಪದಕಗಳನ್ನು ಪಡೆಯಿತು.
ಆವರೆಗೆ ಬ್ರಿಟಿಷರ ಸುಪರ್ದಿಯಲ್ಲಿದ್ದ ಸಿಂಗಪುರ ಅದೇ ಮೊದಲ ಬಾರಿಗೆ ರೋಮ್‌ನಲ್ಲಿ ಪ್ರತ್ಯೇಕ ಧ್ವಜದೊಂದಿಗೆ ಪಾಲ್ಗೊಂಡಿದ್ದೊಂದು ವಿಶೇಷ. ಬಾಕ್ಸಿಂಗ್ ತಾರೆ ಮಹಮದಾಲಿ ಅದೇ ಕೂಟದ ಲೈಟ್ ಹೆವಿವೇಟ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದು. ಮಹಿಳಾ ಜಿಮ್ನೋಸ್ಟಿಕ್ಸ್‌ನ 16 ಪದಕಗಳಲ್ಲಿ 15ನ್ನು ಸೋವಿಯತ್ ತಂಡವೇ ಗೆದ್ದುಕೊಂಡಿದ್ದೊಂದು ವಿಶೇಷ.
ಅಮೆರಿಕ ತಂಡವು ವೇಗದ ಓಟಕ್ಕೆ ಸಂಬಂಧಿಸಿದಂತೆ 1928ರಿಂದಲೂ ಚಿನ್ನವನ್ನೇ ಗೆಲ್ಲುತ್ತಾ ಬಂದಿತ್ತು. ಆ ಕೂಟದಲ್ಲಿ ಅದಕ್ಕೆ ಧಕ್ಕೆ ಉಂಟಾಯಿತು. 100ಮೀ. ಓಟದಲ್ಲಿ ಜರ್ಮನಿಯ ಅರ್ಮಿನ್ ಹ್ಯಾರಿ (10.2ಸೆ.) ಮತ್ತು 200ಮೀ. ಓಟದಲ್ಲಿ ಇಟಲಿಯ ಲಿವಿಯೊ ಬೆರುಟಿ (20.5ಸೆ.) ಮೊದಲಿಗರಾಗಿ ಗುರಿ ಮುಟ್ಟಿದ್ದರು.
ಬಲ್ಗೇರಿಯಾ
ಬಲ್ಗೇರಿಯಾ ದೇಶದ ಜಿಮ್ನೋಸ್ಟಿಕ್‌ಪಟುವೊಬ್ಬರು 1896ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಮೊದಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ 1920ರವರೆಗೆ ಮತ್ತೆ ಈ ದೇಶ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ. 1923ರಲ್ಲಿ ಬಲ್ಗೇರಿಯಾ ಒಲಿಂಪಿಕ್ ಸಮಿತಿ ಹುಟ್ಟು ಪಡೆಯಿತು. 1924ರಲ್ಲಿ ಈ ದೇಶದ ತಂಡ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ಆ ಸಲ ಮತ್ತು 1928ರಲ್ಲಿ ಯಾವುದೇ ಪದಕ ಗೆಲ್ಲಲು ಬಲ್ಗೇರಿಯಾ ಶಕ್ತವಾಗಲಿಲ್ಲ. ಆದರೆ 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಈ ಕೂಟದಲ್ಲಿ ಬಲ್ಗೇರಿಯಾ ಮೊದಲ ಪದಕ ಗೆದ್ದಿತು.
ನಂತರ ಸಾಕಷ್ಟು ಸುಧಾರಿಸಿದ ಈ ದೇಶ 1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ 5 ಪದಕಗಳನ್ನು ಗೆದ್ದಿತು. 1972ರ ಮ್ಯೂನಿಕ್ ಕೂಟದಲ್ಲಿ 6ಚಿನ್ನ ಸೇರಿದಂತೆ 21 ಪದಕ ಗೆದ್ದರೆ, ಮಾಂಟ್ರಿಯಲ್‌ನಲ್ಲಿ 22 ಪದಕ, ಮಾಸ್ಕೊದಲ್ಲಿ 41 ಪದಕಗನ್ನು ಗೆದ್ದಿತ್ತು. ಆದರೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕೇವಲ ಒಂದು ಚಿನ್ನವೂ ಸೇರಿದಂತೆ 5 ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಯಿತು. ಈ ದೇಶ ಈವರೆಗೆ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಒಟ್ಟು 50.
ಬಲ್ಗೇರಿಯಾದಲ್ಲಿ ಕುಸ್ತಿ ಸಾಕಷ್ಟು ಜನಪ್ರಿಯ ಕ್ರೀಡೆಯಾಗಿದ್ದು, 16 ಚಿನ್ನವೂ ಸೇರಿದಂತೆ 67 ಪದಕಗಳನ್ನು ಗೆದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ 36 ಪದಕಗಳನ್ನು ಗಳಿಸಿದೆ. ಅಥ್ಲೆಟಿಕ್ಸ್‌ನಲ್ಲಿ 18 ಪದಕಗಳನ್ನು ಪಡೆದಿದೆ.
ಈ ಸಲ ಲಂಡನ್‌ನಲ್ಲಿ ಪುರುಷರ ಹೈಜಂಪ್‌ನಲ್ಲಿ ವಿಕ್ಟರ್ ನಿನೊವ್, ಜಿಮ್ನೋಸ್ಟಿಕ್ಸ್‌ನಲ್ಲಿ ಯಾರ್ಡನ್ ಯೆವ್‌ಚೆವ್, ವೇಗದ ಓಟಗಾರ್ತಿ ಇವೆಟಾ ಲಲೋವಾ ಗಮನಾರ್ಹ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ.
====
ದಕ್ಷಿಣ ಆಫ್ರಿಕಾದ ವರ್ಣ ಭೇದ ನೀತಿಯನ್ನು ಖಂಡಿಸಿ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಆ ದೇಶಕ್ಕೆ ಅರವತ್ತರ ದಶಕದಲ್ಲಿ ಬಹಿಷ್ಕಾರ ಹಾಕಿತ್ತು.
`ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಆದರೆ ಇದನ್ನೇ ಮನಸ್ಸಿನ್ಲ್ಲಲಿಟ್ಟುಕೊಂಡು ಒತ್ತಡಕ್ಕೆ ಒಳಗಾಗುವುದಿಲ್ಲ~
-ವಿಜೇಂದರ್ ಸಿಂಗ್, ಬಾಕ್ಸರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.