ADVERTISEMENT

ಒಲಿಂಪಿಕ್ ಜ್ಯೋತಿ ಹೊತ್ತಿಸುವ ತಾಲೀಮು

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ಪ್ರಾಚೀನ ಒಲಿಂಪಿಯಾ, ಗ್ರೀಸ್ (ರಾಯಿಟರ್ಸ್): ಸೂರ್ಯ ಕಿರಣಗಳ ಪ್ರಖರತೆ ಕಡಿಮೆಯೇನು ಇರಲಿಲ್ಲ. ಅವುಗಳಿಗೆ ಮುಖಮಾಡಿ ಹಿಡಿದ ನಿಮ್ನ ಮಸೂರ ಕನ್ನಡಿಯಲ್ಲಿ ಸೂಸಿಬಿಟ್ಟ ದಟ್ಟ ಕಿರಣದಿಂದ ಹೊತ್ತಿತು ಜ್ಯೋತಿ.

ಪುರಾತನ ಡಾರಿಕ್ ಮಂದಿರದ ಪ್ರಾಂಗಣದಲ್ಲಿ ಸೇರಿದ್ದ ಸಾವಿರಾರು ವಿದೇಶಿ ಪ್ರವಾಸಿಗರು ಕಣ್ಣರಳಿಸಿ ಆ ಕ್ಷಣಕ್ಕೆ ಸಾಕ್ಷಿಯಾದರು. ಉರಿಬಿಸಿಲಿನಲ್ಲೂ ತಣ್ಣನೆಯ ಅನುಭವ ಅವರಿಗೆ. ಇತಿಹಾಸದಲ್ಲಿ ಓದಿದ್ದ, ಕಲ್ಪಿಸಿಕೊಂಡಿದ್ದ ಚಿತ್ರವೊಂದು ಅವರ ಕಣ್ಣೆದುರು ಅನಾವರಣಗೊಂಡಿತ್ತು.

ಲಂಡನ್ ಒಲಿಂಪಿಕ್ ಕೂಟದ ಜ್ಯೋತಿಯನ್ನು ಒಲಿಂಪಿಕ್ ಮೂಲ ನೆಲೆಯಾದ ಇಲ್ಲಿ ಬೆಳಗಿಸುವ ಸಾಂಪ್ರದಾಯಿಕ ಸಮಾರಂಭದ ಕೊನೆಯ ತಾಲೀಮು ಬುಧವಾರ ನಡೆಯಿತು. ಗ್ರೀಕ್ ನಟಿ ಇನೊ ಮೆನೆಗಾಕಿ ಅವರು ನಿಮ್ನ ಮಸೂರದಲ್ಲಿ ಸೂರ್ಯ ಕಿರಣ ಹಿಡಿದು ಜ್ಯೋತಿ ಬೆಳಗಿಸಿದರು. ಅದು ತಾಲೀಮು ಆಗಿದ್ದರೂ ಅಧಿಕೃತ ಸಮಾರಂಭದಂತೆಯೇ ನಡೆಯಿತು.

ಹವಾಮಾನ ಇಲಾಖೆಯು ಮೊದಲೇ ತಿಳಿಸಿದ್ದಂತೆ ಸೂರ್ಯ ಮೋಡಗಳಿಲ್ಲದ ಆಗಸದಲ್ಲಿ ಪ್ರಜ್ವಲಿಸಿದ್ದರಿಂದ ಅಂತಿಮ ತಯಾರಿಗೆ ಅಡ್ಡಿಯಾಗಲಿಲ್ಲ. ಗುರುವಾರ ಅಧಿಕೃತ ಸಮಾರಂಭ ನಡೆಯಲಿದೆ. ಆಗಲೂ ಇಂಥದೇ ವಾತಾವರಣ ಇರುತ್ತದೆ ಎನ್ನುವುದು ಸಂಘಟಕರು ನಿರಾತಂಕವಾಗಿ ಇರುವಂತೆ ಮಾಡಿದೆ.

ಈ ಬಾರಿಯ ಸಮಾರಂಭದಲ್ಲಿ ವಿಶೇಷವೊಂದಿದೆ ಎನ್ನುವುದು ತಾಲೀಮು ಸಂದರ್ಭದಲ್ಲಿಯೇ ಬಹಿರಂಗವಾಯಿತು. ಮೊಟ್ಟ ಮೊದಲ ಬಾರಿಗೆ ಪುರುಷ ಅರ್ಚಕರು ನಗಾರಿಯ ಸದ್ದಿಗೆ ಹೆಜ್ಜೆ ಹಾಕಿ ಕುಣಿದಿದ್ದು ಗಮನ ಸೆಳೆದ ಅಂಶ. ನಗಾರಿ ಸದ್ದು ಹಾಗೂ ನೃತ್ಯದ ಅಬ್ಬರದ ನಡುವೆಯೇ ಪ್ರಧಾನ ಅರ್ಚಕಿಯ ಪೋಷಾಕು ತೊಟ್ಟಿದ್ದ ಮೆನೆಗಾಕಿ ಅವರು ಜ್ಯೋತಿ ಹೊತ್ತಿಸಲು ಹೆಚ್ಚು ಹೊತ್ತು ಬೇಕಾಗಲೇ ಇಲ್ಲ. ಐದು ಸೆಕೆಂಡುಗಳಲ್ಲಿ ಸೂರ್ಯ ಕಿರಣಗಳು ಬೆಂಕಿಯಾಗಿ ಪರಿವರ್ತನೆಗೊಂಡವು.

ತಾಲೀಮು ಸುಗಮವಾಗಿ ನಡೆದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಸಂಘಟಕರು `ಕಾರ್ಯಕ್ರಮ ಸಂಯೋಜನೆಯು ಅತ್ಯಂತ ವ್ಯವಸ್ಥಿತವಾಗಿದೆ~ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.