ADVERTISEMENT

ಕಣ್ಣೀರಿಟ್ಟ ಕ್ರಿಕೆಟಿಗರು

ಕ್ಷಮೆ ಕೇಳಿದ ಸ್ಟೀವ್‌ ಸ್ಮಿತ್‌, ವಾರ್ನರ್‌, ಬ್ಯಾಂಕ್ರಾಫ್ಟ್‌

ಏಜೆನ್ಸೀಸ್
Published 29 ಮಾರ್ಚ್ 2018, 19:35 IST
Last Updated 29 ಮಾರ್ಚ್ 2018, 19:35 IST
ಸಿಡ್ನಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾದ ಆಟಗಾರ ಸ್ಟೀವ್‌ ಸ್ಮಿತ್ ಕಣ್ಣೀರಿಟ್ಟರು. -ಎಎಫ್‌ಪಿ ಚಿತ್ರಗಳು
ಸಿಡ್ನಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾದ ಆಟಗಾರ ಸ್ಟೀವ್‌ ಸ್ಮಿತ್ ಕಣ್ಣೀರಿಟ್ಟರು. -ಎಎಫ್‌ಪಿ ಚಿತ್ರಗಳು   

ಸಿಡ್ನಿ: ‘ನನ್ನಿಂದ ಬಹುದೊಡ್ಡ ತಪ್ಪಾಗಿದೆ. ನನ್ನ ಬೇಜವಾಬ್ದಾರಿಯಿಂದಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ತಲೆ ತಗ್ಗಿಸುವಂತಾಗಿದೆ. ಇದಕ್ಕಾಗಿ ಬಹಿರಂಗವಾಗಿ ಕ್ಷಮೆ ಕೋರುತ್ತೇನೆ. ದಯವಿಟ್ಟು ಈ ಘಟನೆಯನ್ನು ಮರೆತುಬಿಡಿ’ ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ ಕಣ್ಣೀರಿಟ್ಟಿದ್ದಾರೆ.

‘ನನ್ನಿಂದಾದ ತಪ್ಪಿಗೆ ದೊಡ್ಡ ಶಿಕ್ಷೆಯಾಗಿದೆ. ಅದನ್ನು ಅನುಭವಿಸಲು ಸಿದ್ಧನಾಗಿದ್ದೇನೆ. ಈ ಘಟನೆ ನಮ್ಮ ಹಾಗೆ ಇತರೆ ಕ್ರಿಕೆಟಿಗರಿಗೂ ದೊಡ್ಡ ಪಾಠವಾಗಿದೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆ’ ಎಂದು ಸ್ಮಿತ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಹೋದ ವಾರ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮತ್ತು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಿಂದ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ. ತಂಡದ ಆಟಗಾರ ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಅವರಿಗೆ ಒಂಬತ್ತು ತಿಂಗಳು ನಿಷೇಧ ಹೇರಲಾಗಿದೆ. ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಮತ್ತು ಐಪಿಎಲ್ ಬಗ್ಗೆ ಬಿಸಿಸಿಐ ಬುಧವಾರ ಈ ಮೂವರು ಆಟಗಾರರ ಶಿಕ್ಷೆಯನ್ನು ಪ್ರಕಟಿಸಿತ್ತು.

ADVERTISEMENT

‘ಚೆಂಡು ವಿರೂಪಗೊಳಿಸಲು ಪ್ರಚೋದನೆ ನೀಡಿದ್ದು ಕ್ಷಮಿಸಲಾರದಂತಹ ತಪ್ಪು. ಮೊದಲ ಬಾರಿಗೆ ನನ್ನಿಂದ ಈ ಲೋಪವಾಗಿದೆ. ಇದಕ್ಕಾಗಿ ಸಹ ಆಟಗಾರರನ್ನು ದೂರಲು ಇಚ್ಛಿಸುವುದಿಲ್ಲ. ನಾನು ತಂಡದ ನಾಯಕನಾಗಿದ್ದವನು. ಹೀಗಾಗಿ ಪ್ರಕರಣದ ಸಂಪೂರ್ಣ ಹೊಣೆಯನ್ನು ಹೊರುತ್ತೇನೆ. ಈ ಘಟನೆಯಿಂದ ಆಸ್ಟ್ರೇಲಿಯಾದ ಜನ ತಲೆ ತಗ್ಗಿಸುವಂತಾಗಿದೆ. ಅಭಿಮಾನಿಗಳ ಮನಸ್ಸಿಗೆ ನೋವಾಗಿದೆ. ಇದಕ್ಕಾಗಿ ಎಲ್ಲರ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.

ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಅವರೂ ಕ್ಷಮೆಯಾಚಿಸಿದ್ದಾರೆ.

‘ನಮ್ಮ ತಪ್ಪಿನಿಂದ ಆಸ್ಟ್ರೇಲಿಯಾದ ಕ್ರಿಕೆಟ್‌ಗೆ ಭಾರಿ ನಷ್ಟವಾಗಿದೆ. ಕ್ರಿಕೆಟ್‌ ನನ್ನ ಉಸಿರು. ಎಳವೆಯಿಂದಲೇ ಇದರಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದೆ. ನಂತರ ಹಂತ ಹಂತವಾಗಿ ವಿಶೇಷ ಕೌಶಲಗಳನ್ನು ಕಲಿತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇನ್ನು ಮುಂದೆ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆದು ಈ ನೋವು ಮರೆಯಲು ಯತ್ನಿಸುತ್ತೇನೆ’ ಎಂದು ವಾರ್ನರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

‘ನನ್ನಿಂದ ಪ್ರಮಾದವಾಗಿದೆ. ಇದಕ್ಕಾಗಿ ಪಶ್ಚಾತಾಪ ಪಡುತ್ತಿದ್ದೇನೆ. ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ತೆಗೆದುಕೊಂಡಿರುವ ಕ್ರಮಕ್ಕೆ ಬದ್ಧನಾಗಿದ್ದು ಶಿಕ್ಷೆ ಅನುಭವಿಸಲು ತಯಾರಾಗಿದ್ದೇನೆ’ ಎಂದು ಬ್ಯಾಂಕ್ರಾಫ್ಟ್‌ ಹೇಳಿದ್ದಾರೆ.

‘ಸ್ಯಾಂಡ್‌ ಪೇಪರ್‌ ಬಳಸಿ ಚೆಂಡು ವಿರೂಪಗೊಳಿಸಿಲ್ಲ ಎಂದು ಆರಂಭದಲ್ಲಿ ಸುಳ್ಳು ಹೇಳಿದ್ದೆ. ಚೆಂಡಿಗೆ ಹಾನಿ ಮಾಡಿದ ನಂತರ ಏನೂ ಗೊತ್ತಿಲ್ಲದವನಂತೆ ನಡೆದುಕೊಂಡಿದ್ದೆ. ನನ್ನಿಂದ ಆಸ್ಟ್ರೇಲಿಯಾದ ಕ್ರಿಕೆಟ್‌ಗೆ ಕಳಂಕ ಮೆತ್ತಿಕೊಳ್ಳುವಂತಾಗಿದೆ’ ಎಂದಿದ್ದಾರೆ.

‘ಕಠಿಣ ಪರಿಶ್ರಮದಿಂದ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಗಳಿಸಿದ್ದೆ. ಈಗಾಗಿರುವ ತಪ್ಪಿನಿಂದ ಸುಮ್ಮನೆ ಸ್ಥಾನ ಕಳೆದುಕೊಳ್ಳುವಂತಾಯಿತು. ಕ್ರಿಕೆಟ್‌ ಬದುಕಿನಲ್ಲಿ ಇದುವರೆಗೂ ಯಾವುದೇ ತಪ್ಪು ಮಾಡಿರಲಿಲ್ಲ. ನನ್ನಿಂದ ‘ಸಭ್ಯರ ಆಟಕ್ಕೆ’ ಕಳಂಕ ಮೆತ್ತಿಕೊಂಡಿತಲ್ಲ ಎಂಬ ನೋವು ಕಾಡುತ್ತಿದೆ. ಈ ಘಟನೆಯಿಂದ ಹೊರ ಬರಲು ತುಂಬಾ ಸಮಯ ಬೇಕಾಗುತ್ತದೆ. ರಾಷ್ಟ್ರೀಯ ತಂಡಕ್ಕೆ ಮರಳಲು ಇನ್ನು ಮುಂದೆ ಬಹಳಷ್ಟು ಶ್ರಮಪಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ವಾರ್ನರ್‌ ಕೆಟ್ಟ ವ್ಯಕ್ತಿಯಲ್ಲ’
ಕ್ರೈಸ್ಟ್‌ಚರ್ಚ್‌, ನ್ಯೂಜಿಲೆಂಡ್‌: ‘ಡೇವಿಡ್‌ ವಾರ್ನರ್‌ ತುಂಬಾ ಒಳ್ಳೆಯ ವ್ಯಕ್ತಿ. ವಾರ್ನರ್‌ ಮತ್ತು ಸ್ಮಿತ್‌ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ಸಿಲುಕಿದ್ದು ಬೇಸರದ ವಿಷಯ. ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಕ್ರಿಕೆಟ್‌ ಆಸ್ಟ್ರೇಲಿಯಾ ವಿಧಿಸಿರುವ ಕಠಿಣ ಶಿಕ್ಷೆಯನ್ನು ಅನುಭವಿಸುವುದಾಗಿ ಹೇಳಿದ್ದಾರೆ. ಈ ಘಟನೆ ಎಲ್ಲಾ ಕ್ರಿಕೆಟಿಗರಿಗೂ ಪಾಠವಾಗಲಿದೆ’ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ನುಡಿದಿದ್ದಾರೆ.

‘ವಿಶ್ವ ಶ್ರೇಷ್ಠರೆನಿಸಿದ ಇಬ್ಬರು ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದು ನಾಚಿಕೆಯ ವಿಷಯ. ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಇಂತಹ ಪ್ರಕರಣಗಳು ಕಡಿಮೆಯಾಗಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ಹೇಳಿದ್ದಾರೆ.

‘ಗೆಲುವಿಗಾಗಿ ಅಡ್ಡದಾರಿ ಹಿಡಿಯಬಾರದು’
‘ಕ್ರಿಕೆಟ್‌ ಸಭ್ಯರ ಆಟ. ಇದನ್ನು ವೃತ್ತಿಪರವಾಗಿ ಸ್ವೀಕರಿಸಿದವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳಿರಬಾರದು ಎಂಬುದು ನನ್ನ ಭಾವನೆ. ಈಗ ಆಗಿರುವುದು ಒಂದು ಕೆಟ್ಟ ಘಟನೆ. ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆಯಾಗಿದೆ. ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಂಡು ಕ್ರಿಕೆಟ್‌ನ ಘನತೆಯನ್ನು ಎತ್ತಿ ಹಿಡಿದಿದ್ದಾರೆ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘ಎಲ್ಲರಿಗೂ ಗೆಲುವು ತುಂಬಾ ಮುಖ್ಯ. ಇದಕ್ಕಾಗಿ ನಾವು ಯಾವ ಮಾರ್ಗ ಅನುಸರಿಸುತ್ತೇವೆ ಎನ್ನುವುದು ಅದಕ್ಕಿಂತಲೂ ಮುಖ್ಯವಾಗುತ್ತದೆ’ ಎಂದು ಸಚಿನ್‌ ಹೇಳಿದ್ದಾರೆ.

ದಿಗ್ಗಜರ ಸಮಿತಿ ರಚಿಸಲು ಐಸಿಸಿ ಚಿಂತನೆ
ನವದೆಹಲಿ:
ಕ್ರಿಕೆಟ್‌ ಘನತೆಗೆ ಕುಂದು ತರುವ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನಿರ್ಧರಿಸಿದೆ. ಇದಕ್ಕಾಗಿ ಹಿರಿಯ ಕ್ರಿಕೆಟಿಗರ ಸಮಿತಿ ನೇಮಿಸಲು ಐಸಿಸಿ ಚಿಂತನೆ ನಡೆಸಿದೆ.

‘ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದೆ ಈ ರೀತಿಯ ಘಟನೆಗಳು ಜರುಗಬಾರದು. ಈ ಉದ್ದೇಶದಿಂದಲೇ ಹಿರಿಯ ಕ್ರಿಕೆಟಿಗರ ಸಮಿತಿ ರಚಿಸಲು ಆಲೋಚಿಸಿದ್ದೇವೆ. ಈ ಸಮಿತಿ ತಪ್ಪಿತಸ್ಥರಿಗೆ ಯಾವ ಬಗೆಯ ಶಿಕ್ಷೆ ನೀಡಬೇಕೆಂದು ನಿರ್ಧರಿಸಲಿದೆ’ ಎಂದು ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ಹೇಳಿದ್ದಾರೆ.

‘ಎಲ್ಲಾ ತಂಡಗಳಿಗೂ ಗೆಲುವು ಮುಖ್ಯ. ಅದಕ್ಕಾಗಿ ಅಡ್ಡದಾರಿ ಹಿಡಿಯಬಾರದು. ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರು ಯಾರೆ ಆಗಿದ್ದರೂ ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ’ ಎಂದಿದ್ದಾರೆ.

ಮುಂದಿನ ತಿಂಗಳು ಕೋಲ್ಕತ್ತದಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಸಮಿತಿ ರಚಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಸಮಿತಿಯಲ್ಲಿ ಆಸ್ಟ್ರೇಲಿಯಾದ ಅಲನ್‌ ಬಾರ್ಡರ್‌, ಭಾರತದ ಅನಿಲ್‌ ಕುಂಬ್ಳೆ ಸೇರಿದಂತೆ ಕೆಲ ಹಿರಿಯ ಆಟಗಾರರು ಇರಲಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.