ADVERTISEMENT

ಕಬಡ್ಡಿ: ಕರ್ನಾಟಕದ ಬಾಲಕರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST
ಕಬಡ್ಡಿ: ಕರ್ನಾಟಕದ ಬಾಲಕರಿಗೆ ಪ್ರಶಸ್ತಿ
ಕಬಡ್ಡಿ: ಕರ್ನಾಟಕದ ಬಾಲಕರಿಗೆ ಪ್ರಶಸ್ತಿ   

ಧಾರವಾಡ: ಕರ್ನಾಟಕದ ಬಾಲಕರ ತಂಡ 57ನೇ ರಾಷ್ಟ್ರೀಯ 17 ವರ್ಷದೊಳಗಿನವರ ಕಬಡ್ಡಿ ಟೂರ್ನಿಯಲ್ಲಿ ಶುಕ್ರವಾರ ಹರಿಯಾಣ ತಂಡವನ್ನು 19-17ರಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ನಗರದ ಎನ್.ಎ. ಮುತ್ತಯ್ಯ ಸ್ಮಾರಕ ಪೊಲೀಸ್ ವಸತಿ ಶಾಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ 13-6ರಿಂದ ಸುಸ್ಥಿತಿಯಲ್ಲಿದ್ದ ಕರ್ನಾಟಕ ತಂಡ, ದ್ವಿತೀಯಾರ್ಧದ ಆಟದಲ್ಲಿ ಪಂದ್ಯದ ಮೇಲಿನ ಹಿಡಿತವನ್ನು ಕಳೆದುಕೊಂಡು ಆತಂಕದ ಸ್ಥಿತಿ ತಲುಪಿತ್ತು. ರೆಫ್ರಿ ಅಂತಿಮ ಸೀಟಿ ಊದಿದಾಗ ಎರಡು ಪಾಯಿಂಟ್ ಅಂತರದಿಂದ ಮುಂದಿದ್ದ ಕರ್ನಾಟಕ ತಂಡದ ಆಟಗಾರರು ಸಂಭ್ರಮದಿಂದ ಮೈದಾನದ ತುಂಬಾ ಕುಣಿದಾಡಿದರು.

ಛತ್ತೀಸ್‌ಗಡ ತಂಡ 33-14ರಿಂದ ತಮಿಳುನಾಡು ತಂಡದ ವಿರುದ್ಧ ಜಯಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಮೂರ್ತಿ (ಕರ್ನಾಟಕ) ಉತ್ತಮ ರೈಡರ್, ಅಮಿತ್ (ಹರಿಯಾಣ) ಉತ್ತಮ ಕ್ಯಾಚರ್ ಮತ್ತು ಹಿತೇಶ್ (ಛತ್ತೀಸ್‌ಗಡ) ಉತ್ತಮ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.

ADVERTISEMENT

ಬಾಲಕರ ವಿಭಾಗದಲ್ಲಿ ಸೋತ ನಿರಾಸೆಯನ್ನು ಹರಿಯಾಣ ತಂಡ ಬಾಲಕಿಯರ ವಿಭಾಗದಲ್ಲಿ ಮರೆಯಿತು. ಹರಿಯಾಣ 14-3 ಅಂತರದಿಂದ ಕರ್ನಾಟಕ ತಂಡಕ್ಕೆ ಸೋಲುಣಿಸಿತು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.