ADVERTISEMENT

ಕರ್ನಾಟಕ ತಂಡಕ್ಕೆ ಎರಡನೇ ಜಯ

ಕ್ರಿಕೆಟ್: ಮಿಂಚಿದ ರಾಹುಲ್; ಶರತ್ ಪ್ರಭಾವಿ ಬೌಲಿಂಗ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2013, 19:59 IST
Last Updated 15 ಫೆಬ್ರುವರಿ 2013, 19:59 IST
ಕರ್ನಾಟಕ ತಂಡಕ್ಕೆ ಎರಡನೇ ಜಯ
ಕರ್ನಾಟಕ ತಂಡಕ್ಕೆ ಎರಡನೇ ಜಯ   

ವಾಸ್ಕೊ ಡಿ ಗಾಮ, ಗೋವಾ (ಪಿಟಿಐ): ಆರಂಭಿಕ ಬ್ಯಾಟ್ಸ್‌ಮನ್  ಕೆ.ಎಲ್.ರಾಹುಲ್ (86) ಹಾಗೂ ವೇಗಿ ಎಚ್.ಎಸ್.ಶರತ್ (40ಕ್ಕೆ4) ಅವರ ಗಮನಾರ್ಹ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿದ್ದಾರೆ.

ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಮ್ಮ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡದವರು 52 ರನ್‌ಗಳಿಂದ ಕೇರಳ ಎದುರು ಗೆದ್ದರು. ರಾಜ್ಯ ತಂಡ ನೀಡಿದ 323 ರನ್‌ಗಳಿಗೆ ಉತ್ತರವಾಗಿ ಕೇರಳ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 270 ರನ್ ಗಳಿಸಿತು.

ಸವಾಲಿನ ಗುರಿ ಎದುರು ಕೇರಳ ಆರಂಭದಲ್ಲಿಯೇ ಕುಸಿತ ಕಂಡಿತು. ಇದಕ್ಕೆ ಕಾರಣ ಶರತ್. ಅವರ ಮೊದಲ ಸ್ಪೆಲ್‌ನ ದಾಳಿಗೆ ಸಿಲುಕಿದ ಕೇರಳ 32 ರನ್‌ಗಳಿಗೆ ಕೇವಲ 3 ವಿಕೆಟ್ ಕಳೆದುಕೊಂಡಿತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾದರು. ಆದರೆ ಗೆಲುವಿನ ಗೆರೆ ದಾಟಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡಕ್ಕೆ ರಾಹುಲ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 123 ಎಸೆತಗಳಲ್ಲಿ 112 ರನ್ ಸೇರಿಸಿದರು. 98 ಎಸೆತಗಳನ್ನು ಎದುರಿಸಿದ ರಾಹುಲ್ ಒಂದು ಸಿಕ್ಸರ್ ಹಾಗೂ ಆರು ಬೌಂಡರಿ ಗಳಿಸಿದರು. ಮೊದಲ ಪಂದ್ಯದಲ್ಲಿ 169 ರನ್ ಗಳಿಸಿದ್ದ ಉತ್ತಪ್ಪ ಇಲ್ಲಿ ಅರ್ಧ ಶತಕ ಬಾರಿಸಿದರು.

ನಂತರ ಬಂದ ನಾಯಕ ಸ್ಟುವರ್ಟ್ ಬಿನ್ನಿ (60; 55 ಎ.), ಗಣೇಶ್ ಸತೀಶ್ (40; 32 ಎ.) ಹಾಗೂ ಕರುಣ್ ನಾಯರ್ (ಔಟಾಗದೆ 46; 19 ಎ.) ಅವರು ಬಿರುಸಿನ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.

ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ಆರು ವಿಕೆಟ್‌ಗಳಿಂದ ಗೋವಾ ತಂಡವನ್ನು ಮಣಿಸಿತ್ತು. ಈ ತಂಡದವರ ಬಳಿ ಈಗ ಎಂಟು ಪಾಯಿಂಟ್‌ಗಳಿವೆ.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 322 (ಕೆ.ಎಲ್.ರಾಹುಲ್ 86, ರಾಬಿನ್ ಉತ್ತಪ್ಪ 54, ಮನೀಷ್ ಪಾಂಡೆ 25, ಸ್ಟುವರ್ಟ್ ಬಿನ್ನಿ 60, ಗಣೇಶ್ ಸತೀಶ್ 40, ಕರುಣ್ ನಾಯರ್ ಔಟಾಗದೆ 46; ಪಿ.ಪ್ರಶಾಂತ್ 53ಕ್ಕೆ2); ಕೇರಳ: 50 ಓವರ್‌ಗಳಲ್ಲಿ 6 ವಿಕೆಟ್‌ನಷ್ಟಕ್ಕೆ 270 (ರಾಬರ್ಟ್ ಫರ್ನಾಂಡಿಸ್ 55, ಸಚಿನ್ ಬೇಬಿ 61, ರೈಫಿ ಗೋಮೆಜ್ 44, ಕೆ.ಜೆ.ರಾಕೇಶ್ ಔಟಾಗದೆ 41;  ಎಚ್.ಎಸ್.ಶರತ್ 40ಕ್ಕೆ1). ಫಲಿತಾಂಶ: ಕರ್ನಾಟಕ ತಂಡಕ್ಕೆ 52 ರನ್‌ಗಳ ಗೆಲುವು ಹಾಗೂ 4 ಪಾಯಿಂಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.