ADVERTISEMENT

ಕರ್ನಾಟಕ ತಂಡಕ್ಕೆ ನಿರಾಸೆ

ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ರಾಂಚಿ: ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 53ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್‌ ಚಾಂಪಿಯನ್‌­ಷಿಪ್‌ನಲ್ಲಿ ಮೊದಲ ದಿನ ನಿರಾಸೆ ಅನುಭವಿಸಿದರು.

ಶನಿವಾರ ನಡೆದ ಮಹಿಳಾ 400­ಮೀಟರ್ಸ್‌ ಹರ್ಡಲ್ಸ್‌ನಲ್ಲಿ ತಮಿಳು­ನಾಡಿನ ಆರ್‌.ಎಳವರಸಿ (1ನಿಮಿಷ 00.80ಸೆಕೆಂಡು) ಮೊದಲಿಗರಾಗಿ ಗುರಿ ಮುಟ್ಟಿದರೆ, ಕರ್ನಾಟಕದ ಎಂ.ಅರ್ಪಿತಾ ನಿಗದಿತ ದೂರವನ್ನು 1ನಿಮಿಷ 0.3.84ಸೆಕೆಂಡುಗಳಲ್ಲಿ ಕ್ರಮಿಸಿ ಐದನೇಯವರಾಗಿ ಗುರಿ ತಲುಪಿದರು.
ಆದರೆ ಮಹಿಳಾ ವಿಭಾಗದ 800 ಮೀಟರ್ಸ್‌ ಓಟದಲ್ಲಿ ಕರ್ನಾಟಕ ಹೀನಾಯ ಸೋಲು ಕಂಡಿತು.

ರಾಜ್ಯದ ಆರ್‌.ಮಹಾಲಕ್ಷ್ಮಿ ಮತ್ತು ಉಮಾ ಭಾಗ್ಯಲಕ್ಷ್ಮಿ ಫೈನಲ್‌ ತಲು­ಪಲೂ ವಿಫಲರಾದರು. ಮೊದಲ ಹೀಟ್‌ನಲ್ಲಿ ಮಹಾಲಕ್ಷ್ಮಿ (2ನಿ.33.­19ಸೆ.) ಆರನೇಯವರಾಗಿ ಗುರಿ ತಲುಪಿದರೆ, ಇನ್ನೊಂದು ಹೀಟ್‌­ನಲ್ಲಿಯೂ ಉಮಾ ಭಾಗ್ಯಲಕ್ಷ್ಮಿ (2ನಿ.31.07ಸೆ.) ಆರನೇಯವರಾಗಿ ಗುರಿ ತಲುಪಿದರು. ಮೊದಲ ಹೀಟ್‌ನಲ್ಲಿ ಮೊದಲಿಗರಾಗಿ ಗುರಿ ತಲುಪಿದ ರೈಲ್ವೆಯ ಟಿಂಟು ಲೂಕಾ ತೆಗೆದು ಕೊಂಡ ಸಮಯ 2ನಿಮಿಷ 13.52ಸೆಕೆಂಡು.

ಆದರೆ ಕರ್ನಾಟಕದ ಚೇತನ್‌ ಹೈಜಂಪ್‌ನಲ್ಲಿ ಎರಡು ಮೀಟರ್‌ ಜಿಗಿದು ಫೈನಲ್‌ ತಲುಪಿದ್ದಾರೆ.

ಪುರುಷರ ವಿಭಾಗದ 100 ಮೀಟರ್ಸ್‌ ಓಟದ 5ನೇ ಹೀಟ್‌ನಲ್ಲಿ ಓಡಿದ ಕರ್ನಾಟಕದ ವಿ.ಅರುಣ್‌ ಕುಮಾರ್‌ (11.32ಸೆ.) ಮೂರನ­ಯವರಾಗಿ ಗುರಿ ತಲುಪಿದರೆ, 6ನೇ ಹೀಟ್‌ನಲ್ಲಿ ಓಡಿದ ರಾಜ್ಯದ ಸುನೀಶ್‌ ಬಾಬು (11.61ಸೆ.) ಐದನೇಯವರಾಗಿ ಗುರಿ ತಲುಪಿದರು. ಆದರೆ 10ನೇ ಹೀಟ್‌ನಲ್ಲಿ ಓಡಿದ ಜಿ.ಎನ್‌.ಬೋಪಣ್ಣ (10.81ಸೆ.) ಎರಡನೇಯವರಾಗಿ ಗುರಿ ಮುಟ್ಟಿ ಸೆಮಿಫೈನಲ್‌ನಲ್ಲಿ ಓಡಲು ಅರ್ಹತೆ ಗಳಿಸಿದರು.
ಮಹಿಳಾ ವಿಭಾಗದ 100 ಮೀಟರ್ಸ್‌ನ 4ನೇ ಹೀಟ್‌ನಲ್ಲಿ ಓಡಿದ ಕರ್ನಾಟಕದ ಎಚ್.ಎಂ.ಜ್ಯೋತಿ (11.98ಸೆ.) ಮೊದಲಿಗರಾಗಿ ಗುರಿ ತಲುಪಿದ್ದು, ಸೆಮಿಫೈನಲ್‌ನಲ್ಲಿ ಓಡುವ ಅರ್ಹತೆ ಗಳಿಸಿದ್ದಾರೆ.

ಮಹಿಳಾ ವಿಭಾಗದ 5000 ಮೀಟರ್ಸ್‌ ಓಟದಲ್ಲಿ ರೈಲ್ವೆಯ ಎಲ್‌.ಸೂರ್ಯ (16ನಿ.24.58ಸೆ.) ಚಿನ್ನದ ಪದಕ ಗೆದ್ದರು. ರಾಷ್ಟ್ರೀಯ ಮತ್ತು ಕೂಟ ದಾಖಲೆಯನ್ನು ತಮ್ಮ ಹೆಸರಲ್ಲೇ ಹೊಂದಿರುವ ರೈಲ್ವೆಯ ಫ್ರೀಜಾ ಶ್ರೀಧರನ್‌ ಇಲ್ಲಿ ಎರಡನೇ ಸ್ಥಾನ ತಲುಪಲಷ್ಟೇ ತೃಪ್ತರಾಗಬೇಕಾಯಿತು.
ಪುರುಷರ 5000ಮೀ. ಓಟದ ಚಿನ್ನ ಸರ್ವಿಸಸ್‌ನ ಜಿ.ಲಕ್ಷ್ಮಣ್‌ ಪಾಲಾದರೆ, 400 ಮೀಟರ್ಸ್‌ ಹರ್ಡಲ್ಸ್‌ ಚಿನ್ನ ಸರ್ವಿಸಸ್‌ನ ದುರ್ಗೇಶ್‌ ಕುಮಾರ್‌ ಪಾಲ್‌ ಅವರ ಪಾಲಾಯಿತು.

ಮಹಿಳಾ ಲಾಂಗ್‌ಜಂಪ್‌ನಲ್ಲಿ ರೈಲ್ವೆಯ  ಎಂ.ಎ.ಪ್ರಜೂಷಾ 6.25 ಮೀಟರ್ಸ್‌ ದೂರ ಜಿಗಿದು ಬಂಗಾರದ ಸಾಧನೆ ಮಾಡಿದರು. ಮಹಿಳಾ ಶಾಟ್‌ಪಟ್‌ನಲ್ಲಿ ರೈಲ್ವೆಯ ಮನ್‌ಪ್ರೀತ್‌ ಕೌರ್‌ (15.03ಮೀ.) ಚಿನ್ನ ಗೆದ್ದರೆ, ಹಾ್ಯಮರ್‌ ಎಸೆತದಲ್ಲಿ ಪೂನಮ್‌ ದೇವಿ (54.14ಮೀ.) ಬಂಗಾರದ ಸಾಧನೆ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.