ADVERTISEMENT

ಕಾಡಿದ ರಾಯುಡು, ಬಾಡಿದ ಆರ್‌ಸಿಬಿ

ಡಿ.ಗರುಡ
Published 14 ಮೇ 2012, 19:30 IST
Last Updated 14 ಮೇ 2012, 19:30 IST
ಕಾಡಿದ ರಾಯುಡು, ಬಾಡಿದ ಆರ್‌ಸಿಬಿ
ಕಾಡಿದ ರಾಯುಡು, ಬಾಡಿದ ಆರ್‌ಸಿಬಿ   

ಬೆಂಗಳೂರು: ಮಳೆಯಾಟ ಮುಗಿದ ಮೇಲೆ ಮುಂಬೈ ಇಂಡಿಯನ್ಸ್ ಗೆಲುವಿನ ಓಟ...! ಸತತ ಎರಡನೇ ವಿಜಯೋತ್ಸಾಹ. ಜೊತೆಗೆ ಸೇಡು ತೀರಿಸಿಕೊಂಡ ಸಂಭ್ರಮ.

ರಾಯಲ್ ಚಾಲೆಂಜರ್ಸ್ ವಿರುದ್ಧವೇ ಮುಂಬೈನಲ್ಲಿನ ಸೋಲಿನ ನಂತರ ಅಚ್ಚರಿಗೊಳ್ಳುವ ರೀತಿಯಲ್ಲಿ ಪುಟಿದೆದ್ದ ಇಂಡಿಯನ್ಸ್ ಜಯದ ಹಾದಿ ಬಿಡಲಿಲ್ಲ. ಆದರೆ `ಅರ್‌ಸಿಬಿ~ ಮಾತ್ರ ಲಯ ತಪ್ಪಿತು. ಸತತ ನಾಲ್ಕನೇ ಗೆಲುವಿನ ಕನಸಂತೂ ನನಸಾಗಲಿಲ್ಲ. ಮುಂಬೈನಲ್ಲಿ ಇಂಡಿಯನ್ಸ್ ತಂಡವನ್ನು ಮಣಿಸಿ ಬಂದಿದ್ದ ಚಾಲೆಂಜರ್ಸ್ ತನ್ನೂರಲ್ಲಿಯೂ ಅಭಿಮಾನಿಗಳ ಮನ ತಣಿಸುವಲ್ಲಿ ವಿಫಲ.

ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡದಿದ್ದರೆ ನಿರಾಸೆ ಕಾಡುವುದೆನ್ನುವ ಆತಂಕ ಇಲ್ಲಿ ಮತ್ತೊಮ್ಮೆ ನಿಜವಾಯಿತು. ದೊಡ್ಡ ಮೊತ್ತ ಪೇರಿಸಿಟ್ಟು `ಭಜ್ಜಿ~ ಬಳಗವನ್ನು ಒತ್ತಡದಲ್ಲಿಟ್ಟೆವು ಎಂದು ಎದೆಯುಬ್ಬಿಸಿ ನಿಲ್ಲಲು ಆಗಲೇ ಇಲ್ಲ.

ಏಕೆಂದರೆ ಇಂಡಿಯನ್ಸ್ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಸೋಮವಾರದ ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು. ಚಾಲೆಂಜರ್ಸ್‌ಗೆ ಮತ್ತೊಂದು ಜಯ ಒಲಿಯದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಪ್ಲೆಆಫ್ ತಲುಪುವ ಆಸೆಯೂ ದುರ್ಬಲ!

ಆರಂಭದಲ್ಲಿ ಎದುರಾದ ಕಷ್ಟಗಳನ್ನು ಮೆಟ್ಟಿನಿಂತ ವಿಜಯ್ ಮಲ್ಯ ಒಡೆತನದ ತಂಡವು ತನ್ನ ಪಾಲಿನ ಇಪ್ಪತ್ತು ಓವರುಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಪೇರಿಸಿಟ್ಟಿದ್ದು 171 ರನ್. ಆದರೆ ಎದುರಾಳಿ ಇಂಡಿಯನ್ಸ್‌ಗೆ ಈ ಮೊತ್ತ ಕಷ್ಟದ್ದಾಗಿ ಕಾಣಿಸಲೇ ಇಲ್ಲ. `ಟಾಸ್~ ಗೆದ್ದು ಮೊದಲು ಕ್ಷೇತ್ರ ರಕ್ಷಣೆ ಮಾಡುವ ತೀರ್ಮಾನ ಕೈಗೊಂಡಿದ್ದ ಹರಭಜನ್ ಸಿಂಗ್ ತಮ್ಮನ್ನು ತಾವು ಹಳಿದುಕೊಳ್ಳುವ ಪರಿಸ್ಥಿತಿಯಂತೂ ಬರಲೇ ಇಲ್ಲ.

ಎದುರಾಳಿ ಪಡೆಯ ಹಾದಿಯಲ್ಲಿ ಕಲ್ಲುಮುಳ್ಳು ಸುರಿಯಲಿಲ್ಲ ಚಾಲೆಂಜರ್ಸ್ ಬೌಲರ್‌ಗಳು. ಹರಭಜನ್ ಬಳಗದವರು ಆಕ್ರಮಣಕಾರಿ ಹೊಡೆತದ ಸಾಹಸ ಮಾಡಲು ಸುಲಭವಾಗಿ ಅವಕಾಶ ಮಾಡಿಕೊಟ್ಟಿದ್ದೇ ಹೆಚ್ಚು.

ಕೊಹ್ಲಿ ಉಸ್ತುವಾರಿ ನಾಯಕತ್ವದಲ್ಲಿ ಆರ್‌ಸಿಬಿ ಬತ್ತಳಿಕೆಯಲ್ಲಿನ ಬೌಲಿಂಗ್ ಅಸ್ತ್ರಗಳ ಸೂಕ್ತ ಪ್ರಯೋಗ ನಡೆಯಲಿಲ್ಲ. ಕೊನೆಯ ಓವರ್‌ನಲ್ಲಿಯಂತೂ ಕ್ರಿಸ್ ಗೇಲ್ ಕೈಗೆ ಚೆಂಡನ್ನು ನೀಡಿದ್ದಂತೂ ಆಘಾತಕಾರಿ. ಅದೇ ಕಾರಣಕ್ಕೆ ಆರ್‌ಸಿಬಿ ಚಿತ್ತ ನಿರಾಸೆಯ ಪ್ರಪಾತದತ್ತ ಜಾರಿತು. ಇಂಡಿಯನ್ಸ್ 19.4 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್‌ಗಳೊಂದಿಗೆ ಯಶಸ್ಸಿನ ದಡ ಸೇರಿತು.

ಅಂಬಟಿ ರಾಯುಡು (81; 54 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಕೀರನ್ ಪೊಲಾರ್ಡ್ (52; 31 ಎ., 5 ಬೌಂ., 3 ಸಿ.) ಮುರಿಯದ ಆರನೇ ವಿಕೆಟ್‌ನಲ್ಲಿ 122 ರನ್ ಕಲೆಹಾಕಿ ತಮ್ಮ ತಂಡದ ಕಷ್ಟಗಳನ್ನೆಲ್ಲಾ ದೂರ ತಳ್ಳಿಹಾಕಿದರು.
 
ಸಚಿನ್ ತೆಂಡೂಲ್ಕರ್ ಸೊನ್ನೆ ಸುತ್ತಿದ್ದು ಇಂಡಿಯನ್ಸ್ ಚಿಂತೆಯ ಸುಳಿಯಲ್ಲಿ ಸಿಲುಕುವಂತೆ ಮಾಡಲೇ ಇಲ್ಲ. ಪರದಾಡಿದ್ದು ಆತಿಥೇಯ ಚಾಲೆಂಜರ್ಸ್. ಜಹೀರ್ ಖಾನ್ ತಮ್ಮ ಮೂರನೇ ಓವರ್‌ನಲ್ಲಿ ದುಬಾರಿಯಾದಾಗಲೇ ಸೋಲಿನ ಸುಳಿಗಾಳಿ. ನಂತರದ ಓವರ್‌ನಲ್ಲಿ ವಿನಯ್ ಕುಮಾರ್ ಎದುರು ರಾಯುಡು ಅಬ್ಬರಿಸುವ ಸಾಹಸ ಮಾಡಿದಾಗ ಆತಂಕದ ಕಾರ್ಮೋಡ ಇನ್ನಷ್ಟು ದಟ್ಟ.
 
ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪ್ರಭಾವಿ ಬೌಲರ್ ಒಬ್ಬನನ್ನು ಉಳಿಸಿಕೊಳ್ಳದ್ದಂತೂ ಚಾಲೆಂಜರ್ಸ್ ಮಾಡಿದ ದೊಡ್ಡ ತಪ್ಪು. ಕೊನೆಯ ಆರು ಎಸೆತಗಳಲ್ಲಿ `ಭಜ್ಜಿ~ ಬಳಗಕ್ಕೆ ಹದಿನಾಲ್ಕು ರನ್ ಅಗತ್ಯ ಇದ್ದಾಗ ಗೇಲ್ ದಾಳಿ ಬಿಗುವಿನಿಂದ ಕೂಡಿರಲಿಲ್ಲ.

ಆದರೆ ಆರಂಭದಲ್ಲಿ ಆರ್‌ಸಿಬಿ ಬೌಲಿಂಗ್ ಮೊನಚು ಇಂಡಿಯನ್ಸ್ ಮೇಲೆ ಒತ್ತಡ ಹೇರಿದ್ದಂತೂ ನಿಜ. ತೆಂಡೂಲ್ಕರ್ ಎದುರಿಸಿದ ಮೊದಲ ಎಸೆತದಲ್ಲಿಯೇ ಕೊಹ್ಲಿಗೆ ಕ್ಯಾಚಿತ್ತಾಗ ಭಾರಿ ಸಂಭ್ರಮದ ಕೇಕೆ.

ಅಂತರರಾಷ್ಟ್ರೀಯ ಪಂದ್ಯದಲ್ಲಿ `ಲಿಟಲ್ ಚಾಂಪಿಯನ್~ ಔಟಾದರೆ ಕಣ್ಣೀರು ಸುರಿಸುವ ಅಭಿಮಾನಿಗಳು ಇಲ್ಲಿ ತೋರಿದ ವರ್ತನೆ ವಿಚಿತ್ರ. ಇಂಥ ಪ್ರತಿಕ್ರಿಯೆ ಕಾಣುವುದು ಐಪಿಎಲ್ ಪಂದ್ಯದಲ್ಲಿ ಮಾತ್ರ. ಆರ್‌ಸಿಬಿ ಬೆಂಬಲಿಗರೇ ಅಪಾರ ಸಂಖ್ಯೆಯಲ್ಲಿದ್ದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿಯಲ್ಲಿ ಸಚಿನ್ ನಿರ್ಗಮನಕ್ಕೆ ಸಂತಸ ವ್ಯಕ್ತವಾಗಿದ್ದು ಅಚ್ಚರಿಯೇನಲ್ಲ.

ಮೊದಲು ಬ್ಯಾಟ್ ಮಾಡಿದ ಚಾಲೆಂಜರ್ಸ್ ಮಟ್ಟಿಗೆ ರನ್ ಹೊಳೆಹರಿಸುವ ಭಾಗ್ಯದಾತ ಎನಿಸಿರುವ ಗೇಲ್ ಬೇಗ ವಿಕೆಟ್ ಒಪ್ಪಿಸಿದ್ದು ದುರದೃಷ್ಟ. ಬೆನ್ನಲ್ಲಿಯೇ ವಿರಾಟ್ ಕೊಹ್ಲಿ, ನಂತರ ಸೌರಭ್ ತಿವಾರಿ ಕೂಡ ನಿರ್ಗಮನ.

ಆಗ ಪ್ರೇಕ್ಷಕರ ಹೃದಯದಿಂದ ಹೊರಟ ನೋವಿನ ಧ್ವನಿ ಎನ್ನುವಂತೆ ಧ್ವನಿವರ್ಧಕದಲ್ಲಿ `ಕಾಣದಂತೆ ಮಾಯವಾದನೋ ನಮ್ಮ...~ ಎನ್ನುವ ಹಾಡು ಮೊಳಗಿತು. ಆನಂತರ ಆತಿಥೇಯ ತಂಡಕ್ಕೆ ಆಸರೆಯಾಗಿದ್ದು ತಿಲಕರತ್ನೆ ದಿಲ್ಶಾನ್ (47; 50 ಎ., 4 ಬೌಂ., 1 ಸಿ.) ಹಾಗೂ ಅಜೇಯ ಆಟವಾಡಿದ ಮಯಾಂಕ್ ಅಗರ್‌ವಾಲ್ (64; 30 ಎ., 6 ಬೌಂ., 4 ಸಿ.).

ಈ ಎಲ್ಲ ನಾಟಕೀಯ ತಿರುವುಗಳ ನಡುವೆ ಇಂಡಿಯನ್ಸ್‌ನ ಮುನಾಫ್ ಪಟೇಲ್ ಪ್ರಹಸನವೂ ನಡೆಯಿತು. ತಮ್ಮ ಮೂರನೇ ಓವರ್‌ನಲ್ಲಿ ಅವರು ಒಂದರ ಹಿಂದೊಂದು ನೋಬಾಲ್ ಹಾಗೂ ವೈಡ್ ಸರಣಿ ಬೆಳೆಸಿಯೂ ಅಂಪೈರ್ ಜೊತೆಗೇ ಮಾತಿನ ಚಕಮಕಿ ನಡೆಸಿದ್ದು ಕಣ್ಣುಕುಕ್ಕಿದ ಘಟನೆ.

ಕಾಡಿದ ಅರೆ ಕತ್ತಲೆ: ಇಂಡಿಯನ್ಸ್ ಬ್ಯಾಟಿಂಗ್ ನಡೆಸಿದ್ದಾಗ ಹನ್ನೆರಡನೇ ಓವರ್ ಆರಂಭವಾದ ಹೊತ್ತಲ್ಲಿ ಕ್ರೀಡಾಂಗಣದ ನಾಲ್ಕರಲ್ಲಿ ಒಂದು ಕಂಬದ ದೀಪಗಳು ಕಣ್ಣುಮುಚ್ಚಿದವು. ಆಟಗಾರರ ಸುತ್ತಲಿನ ನಾಲ್ಕು ನೆರಳುಗಳು ಮೂರಾಗಿ ಉಳಿದಿದ್ದು ಆಟಕ್ಕೆ ಸ್ವಲ್ಪ ತೊಡಕಾಗಲು ಕಾರಣ. ಮತ್ತೆ ದೀಪ ಹೊತ್ತುವುದು ಸ್ವಲ್ಪ ತಡವಾಯಿತು. ಆದರೆ ಅದಕ್ಕೆ ತಾಂತ್ರಿಕ ತೊಂದರೆ ಕಾರಣವೆನ್ನುವ ಸ್ಪಷ್ಟನೆ ಕೆಲವೇ ಕ್ಷಣಗಳಲ್ಲಿ ಕೆಎಸ್‌ಸಿಎ ಅಧಿಕಾರಿಗಳಿಂದ ಸಿಕ್ಕಿತು.

ಸ್ಕೋರ್ ವಿವರಃ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 171
ಕ್ರಿಸ್ ಗೇಲ್ ಬಿ ಮುನಾಫ್ ಪಟೇಲ್  06
ತಿಲಕರತ್ನೆ ದಿಲ್ಶಾನ್ ಬಿ ರುದ್ರ ಪ್ರತಾಪ್ ಸಿಂಗ್  47
ವಿರಾಟ್ ಕೊಹ್ಲಿ ರನ್‌ಔಟ್ (ಹರ್ಷೆಲ್ ಗಿಬ್ಸ್)  03
ಸೌರಭ್ ತಿವಾರಿ ಹಿಟ್‌ವಿಕೆಟ್ ಬಿ ಹರಭಜನ್ ಸಿಂಗ್  21
ಎಬಿ ಡಿವಿಲಿಯರ್ಸ್ ಸಿ ಲಸಿತ್ ಮಾಲಿಂಗ ಬಿ ಕೀರನ್ ಪೊಲಾರ್ಡ್  14
ಮಯಾಂಕ್ ಅಗರ್ವಾಲ್ ಔಟಾಗದೆ  64
ಆರ್.ವಿನಯ್‌ಕುಮಾರ್ ರನ್‌ಔಟ್ (ಡ್ವೇನ್ ಸ್ಮಿತ್/ದಿನೇಶ್ ಕಾರ್ತಿಕ್)  01
ಜಹೀರ್ ಖಾನ್ ಔಟಾಗದೆ  01
ಇತರೆ: (ಲೆಗ್‌ಬೈ-2, ವೈಡ್-9, ನೋಬಾಲ್-3)  14
ವಿಕೆಟ್ ಪತನ: 1-8 (ಕ್ರಿಸ್ ಗೇಲ್; 2.2), 2-11 (ವಿರಾಟ್ ಕೊಹ್ಲಿ; 2.4), 3-47 (ಸೌರಭ್ ತಿವಾರಿ; 6.3), 4-87 (ಎಬಿ ಡಿವಿಲಿಯರ್ಸ್; 11.3), 5-133 (ತಿಲಕರತ್ನೆ ದಿಲ್ಶಾನ್; 17.3), 6-134 (ಆರ್.ವಿನಯ್‌ಕುಮಾರ್; 17.5).
ಬೌಲಿಂಗ್: ಮುನಾಫ್ ಪಟೇಲ್ 4-0-54-1 (ನೋಬಾಲ್-3, ವೈಡ್-1), ರುದ್ರ ಪ್ರತಾಪ್ ಸಿಂಗ್ 4-0-23-1 (ವೈಡ್-1), ಲಸಿತ್ ಮಾಲಿಂಗ 4-0-29-0 (ವೈಡ್-2), ಹರಭಜನ್ ಸಿಂಗ್ 3-0-33-1 (ವೈಡ್-1), ಕೀರನ್ ಪೊಲಾರ್ಡ್ 3-0-20-1 (ವೈಡ್-3), ಡ್ವೇನ್ ಸ್ಮಿತ್ 2-0-10-0
ಮುಂಬೈ ಇಂಡಿಯನ್ಸ್: 19.4 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 173
ಹರ್ಷೆಲ್ ಗಿಬ್ಸ್ ರನ್‌ಔಟ್ (ಕೆ.ಪಿ.ಅಪ್ಪಣ್ಣ/ಸೌರಭ್ ತಿವಾರಿ)  02
ಸಚಿನ್ ತೆಂಡೂಲ್ಕರ್ ಸಿ ವಿರಾಟ್ ಕೊಹ್ಲಿ ಬಿ ಜಹೀರ್ ಖಾನ್  00
ರೋಹಿತ್ ಶರ್ಮ ಸಿ ಮತ್ತು ಬಿ ಆರ್.ವಿನಯ್ ಕುಮಾರ್  05
ದಿನೇಶ್ ಕಾರ್ತಿಕ್ ಸಿ ಹರ್ಷಲ್ ಪಟೇಲ್ ಬಿ ಮುತ್ತಯ್ಯ ಮುರಳೀಧರನ್  16
ಅಂಬಟಿ ರಾಯುಡು ಔಟಾಗದೆ  81
ಡ್ವೇನ್ ಸ್ಮಿತ್ ಸಿ ತಿಲಕರತ್ನೆ ದಿಲ್ಶಾನ್ ಬಿ ಹರ್ಷಲ್ ಪಟೇಲ್  06
ಕೀರನ್ ಪೊಲಾರ್ಡ್ ಔಟಾಗದೆ  52
ಇತರೆ: (ಲೆಗ್‌ಬೈ-4, ವೈಡ್-7)  11
ವಿಕೆಟ್ ಪತನ: 1-2 (ಸಚಿನ್ ತೆಂಡೂಲ್ಕರ್; 0.5), 2-4 (ಹರ್ಷೆಲ್ ಗಿಬ್ಸ್; 1.2), 3-19 (ರೋಹಿತ್ ಶರ್ಮ; 3.4), 4-44 (ದಿನೇಶ್ ಕಾರ್ತಿಕ್; 7.5), 5-51 (ಡ್ವೇನ್ ಸ್ಮಿತ್; 8.5).
ಬೌಲಿಂಗ್: ಜಹೀರ್ ಖಾನ್ 4-0-34-1 (ವೈಡ್-2), ಆರ್.ವಿನಯ್ ಕುಮಾರ್ 4-0-36-1 (ವೈಡ್-2), ಹರ್ಷಲ್ ಪಟೇಲ್ 4-0-25-1 (ವೈಡ್-1), ಮುತ್ತಯ್ಯ ಮುರಳೀಧರನ್ 4-0-16-1 (ವೈಡ್-1), ಕೆ.ಪಿ.ಅಪ್ಪಣ್ಣ 1-0-19-0, ಕ್ರಿಸ್ ಗೇಲ್ 2.4-0-39-0 (ವೈಡ್-1).
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 5 ವಿಕೆಟ್‌ಗಳ ಗೆಲುವು.
 ಪಂದ್ಯ ಶ್ರೇಷ್ಠ: ಅಂಬಟಿ ರಾಯುಡು (ಮುಂಬೈ ಇಂಡಿಯನ್ಸ್).   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT