ADVERTISEMENT

ಕುಂಬ್ಳೆ ಮುಂದುವರಿಕೆಗೆ ಬಿಸಿಸಿಐ ಒಲವು

ಪಿಟಿಐ
Published 8 ಜೂನ್ 2017, 20:21 IST
Last Updated 8 ಜೂನ್ 2017, 20:21 IST
ಕುಂಬ್ಳೆ ಮುಂದುವರಿಕೆಗೆ ಬಿಸಿಸಿಐ ಒಲವು
ಕುಂಬ್ಳೆ ಮುಂದುವರಿಕೆಗೆ ಬಿಸಿಸಿಐ ಒಲವು   

ಲಂಡನ್‌: ಅನಿಲ್‌ ಕುಂಬ್ಳೆ  ಅವರನ್ನು ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಯಲ್ಲಿ ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಲವು ತೋರಿದೆ.

ಈ ಸಂಬಂಧ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರು ಕಾರ್ಯದರ್ಶಿ ಅಮಿತಾಭ್‌ ಚೌಧರಿ ಅವರಿಗೆ ಪತ್ರ ಬರೆದಿದ್ದು ವೆಸ್ಟ್‌ ಇಂಡೀಸ್‌ ಸರಣಿ ಮುಕ್ತಾಯದವರೆಗೂ ಕೋಚ್‌ ಹುದ್ದೆಯಲ್ಲಿ ಬದಲಾವಣೆ ಮಾಡದಂತೆ ಸೂಚಿಸಿದ್ದಾರೆ.

ಬಿಸಿಸಿಐ ಆಡಳಿತ ನೋಡಿಕೊಳ್ಳಲು ಸುಪ್ರೀಂಕೋರ್ಟ್‌ನಿಂದ ನೇಮಕವಾಗಿರುವ ವಿನೋದ್‌ ರಾಯ್‌ ಸಾರಥ್ಯದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಈ ವಿಷಯದಲ್ಲಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ADVERTISEMENT

‘ಜೂನ್‌ 26ರಂದು ಬಿಸಿಸಿಐ ವಾರ್ಷಿಕ ಮಹಾಸಭೆ ನಿಗದಿಯಾಗಿದ್ದು ಅಲ್ಲಿಯವರೆಗೂ ಹೋಸ ಕೋಚ್‌ ನೇಮಕ ಪ್ರಕ್ರಿಯೆ ನಡೆಸದಂತೆ ಚೌಧರಿಯವರಿಗೆ ಸೂಚಿಸಿದ್ದೇನೆ’ ಎಂದು ಖನ್ನಾ ಹೇಳಿದ್ದಾರೆ.

‘ಖನ್ನಾ ಅವರು ಬಿಸಿಸಿಐನ ಎಲ್ಲಾ ಸದಸ್ಯರೊಂದಿಗೆ ಮಾತನಾಡಿದ್ದಾರೆ. ವಾರ್ಷಿಕ ಸಭೆಯವರೆಗೂ ಹೊಸ ಕೋಚ್‌ ನೇಮಕ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದೆಂದು ಎಲ್ಲಾ ಸದಸ್ಯರು ಅವರಿಗೆ ತಿಳಿಸಿದ್ದೇವೆ’ ಎಂದು ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ನುಡಿದಿದ್ದಾರೆ.

ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರನ್ನು ಹೊಂದಿರುವ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಕೂಡ ಕುಂಬ್ಳೆ ಮುಂದುವರಿಕೆಗೆ ಒಲವು ತೋರಿದೆ ಎನ್ನಲಾಗಿದೆ.

ಈ ಸಂಬಂಧ ಸಮಿತಿಯ ಸದಸ್ಯರು ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸುವ ಸಾಧ್ಯತೆ ಇದೆ. ಈ ಸಮಿತಿ ರವಿಶಾಸ್ತ್ರಿ ಯವರನ್ನು ತಂಡದ ನಿರ್ದೇಶಕ ಹುದ್ದೆಯಿಂದ ತೆಗೆದು ಹಾಕಿ ಹೋದ ವರ್ಷ ಕುಂಬ್ಳೆ ಅವರನ್ನು ಕೋಚ್‌ ಆಗಿ ನೇಮಕ ಮಾಡಿತ್ತು.

‘ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ತಂಡ ಸೆಮಿಫೈನಲ್‌ ಇಲ್ಲವೇ ಫೈನಲ್‌ ಪ್ರವೇಶಿಸಿದರೆ ಕುಂಬ್ಳೆ ಅವರನ್ನು ಕೋಚ್‌ ಆಗಿ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ. ಕುಂಬ್ಳೆ ಕಾರ್ಯವೈಖರಿ ಸರಿ ಇಲ್ಲ ಎಂದು ನಾಯಕ ಕೊಹ್ಲಿ ಇದುವರೆಗೂ ಯಾರ ಬಳಿಯೂ ದೂರು ನೀಡಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.