ADVERTISEMENT

ಕುಸ್ತಿಪಟುವಿನ ಚಿನ್ನದ ಕನಸು

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST
ಕುಸ್ತಿಪಟುವಿನ ಚಿನ್ನದ ಕನಸು
ಕುಸ್ತಿಪಟುವಿನ ಚಿನ್ನದ ಕನಸು   

ಸೋನೆಪತ್ (ಪಿಟಿಐ): ಬೀಜಿಂಗ್ ಒಲಿಂಪಿಕ್‌ನಲ್ಲಿ ಸಾಧ್ಯವಾಗದ್ದನ್ನು ಲಂಡನ್‌ನಲ್ಲಿ ಸಾಧಿಸಿ ತೋರಿಸಬೇಕು. ಇಂಥದೊಂದು ಮಹದಾಸೆ ಹೊಂದಿದ್ದಾರೆ ಕುಸ್ತಿಪಟು ಯೋಗೇಶ್ವರ ದತ್ತ.

ಇದು ತಮ್ಮ ಕೊನೆಯ ಒಲಿಂಪಿಕ್ ಎಂದು ನಿರ್ಧರಿಸಿರುವ ಅವರು ಕ್ರೀಡಾ ಜೀವನ ಕೊನೆಗೊಳಿಸುವ ಮುನ್ನ ಸ್ವರ್ಣ ಸಂಭ್ರಮದ ಅಲೆಯಲ್ಲಿ ತೇಲುವ ಕನಸು ಕಂಡಿದ್ದಾರೆ. ಬೀಜಿಂಗ್‌ನಲ್ಲಿ ಕಾಡಿದ್ದ ನಿರಾಸೆ ಮತ್ತೊಮ್ಮೆ ಬೆನ್ನತ್ತಲು ಬಿಡುವುದಿಲ್ಲ ಎನ್ನುವ ಛಲದಿಂದ ಲಂಡನ್ ಕಡೆಗೆ ಮುಖಮಾಡಿದ್ದಾರೆ.

ಯೋಗೇಶ್ವರ್ ಮಟ್ಟಿಗೆ ಇದು ಮೂರನೇ ಒಲಿಂಪಿಕ್. 2008ರಲ್ಲಿ ಪದಕದ ಆಸೆ ಈಡೇರುತ್ತದೆ ಎಂದು ನಿರೀಕ್ಷೆ ಮಾಡಿದ್ದರು ದತ್ತ. ಆದರೆ ಕಂಚು ಕೂಡ ದಕ್ಕಲಿಲ್ಲ. ಬೀಜಿಂಗ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ಪಟ್ಟು ಹಾಕಿದ್ದರು. ಆದರೆ ಕೊನೆಯ ಹತ್ತು ಸೆಕೆಂಡುಗಳಲ್ಲಿ ಎಲ್ಲವೂ ವ್ಯತ್ಯಾಸವಾಯಿತು. ಆ ಕಹಿ ನೆನಪಿನ್ನೂ ಅವರನ್ನು ಕಾಡುತ್ತಿದೆ.

ADVERTISEMENT

`ಒಲಿಂಪಿಕ್ ವರ್ಷ ವರ್ಷವೂ ನಡೆಯುವ ಕೂಟವಲ್ಲ. ನಾಲ್ಕು ವರ್ಷಗಳಿಗೊಮ್ಮೆ ತೆರೆಯುವ ಅದೃಷ್ಟದ ಬಾಗಿಲು. ಮೂರನೇ ಬಾರಿಗೆ ನನಗೆ ಈ ಮಹಾ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಮುಂದಿನ ಒಲಿಂಪಿಕ್ ಕೂಟದಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುವ ನಿರೀಕ್ಷೆ ಖಂಡಿತ ಇಲ್ಲ. ಆದ್ದರಿಂದ ಇದು ನನ್ನ ಮಟ್ಟಿಗೆ ಕೊನೆಯ ಒಲಿಂಪಿಕ್ಸ್. ಪದಕ ಗೆಲ್ಲಲು ಸಿಕ್ಕಿರುವ ಅಂತಿಮ ಅವಕಾಶವೂ ಹೌದು~ ಎಂದು ಯೋಗೇಶ್ವರ್ ಹೇಳಿದ್ದಾರೆ.

ಎಸ್‌ಎಐ ಕೇಂದ್ರದಲ್ಲಿ ದೀರ್ಘ ಕಾಲ ತರಬೇತಿ ನಡೆಸಿರುವ ಅವರು `ಈ ಬಾರಿ ದೇಶಕ್ಕೆ ದೊಡ್ಡ ಕೊಡುಗೆ ನೀಡಲು ಬಯಸಿದ್ದೇನೆ. ನಾನು ಪಾಲ್ಗೊಳ್ಳುವ ವಿಭಾಗದಲ್ಲಿ ಸ್ವರ್ಣ ಪದಕವೇ ನನ್ನ ಗುರಿಯಾಗಿದೆ. ಕಳೆದ ಸಾರಿ ದೇಶಕ್ಕೆ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಪದಕವನ್ನು ಗೆದ್ದು ತಂದಿದ್ದರು. ಅದಕ್ಕಿಂತ ಉನ್ನತವಾದ ಸಾಧನೆ ನನ್ನದಾಗಬೇಕು. ಅದೇ ನನ್ನ ಉದ್ದೇಶ~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

29 ವರ್ಷ ವಯಸ್ಸಿನ ದತ್ತ ಅವರು ಒಲಿಂಪಿಕ್ ಸಿದ್ಧತೆಯ ಅಂಗವಾಗಿ ಅಮೆರಿಕಾದಲ್ಲಿ ಕೂಡ ತರಬೇತಿ ಪಡೆದಿದ್ದಾರೆ. ಅಲ್ಲಿನ ಉತ್ತಮ ತಂತ್ರಗಳನ್ನು ಕಲಿಯಲು ಸಾಧ್ಯವಾಯಿತು ಎಂದಿರುವ ಅವರು `ಕೊಲೊರಾಡೊ ಸ್ಪ್ರಿಂಗ್ಸ್‌ನಲ್ಲಿ ತರಬೇತಿ ಪಡೆದಿದ್ದು ಹೆಚ್ಚು ಪ್ರಯೋಜನಕಾರಿ. ಒಲಿಂಪಿಕ್ ಸಂದರ್ಭದಲ್ಲಿ ಲಂಡನ್‌ನಲ್ಲಿ ಇರುವಂಥ ವಾತಾವರಣ ಅಲ್ಲಿನದ್ದು. ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಪೂರ್ವ ತಯಾರಿ ಮಾಡಿಕೊಂಡಂತಾಗಿದೆ~ ಎಂದು ನುಡಿದರು.

`ತರಬೇತಿ ಕಾಲದಲ್ಲಿ ಮುಖ್ಯವಾಗಿ ಕಾಲಿನ ಚಲನೆ ಮೇಲೆ ನಿಯಂತ್ರಣ ಸಾಧಿಸಲು ಗಮನ ನೀಡಲಾಯಿತು. ಜೊತೆಗೆ ಎದುರಾಳಿಯನ್ನು ನೆಲಕ್ಕೆ ಉರುಳಿಸುವ ವಿವಿಧ ಸಾಧ್ಯತೆಗಳ ಬಗ್ಗೆಯೂ ಅಲ್ಲಿ ಸೂಕ್ತ ಮಾರ್ಗದರ್ಶನ ಸಿಕ್ಕಿತು~ ಎಂದು ವಿವರಿಸಿದರು.

ಒಲಿಂಪಿಕ್‌ಗೆ ಮುನ್ನ ಬೆಲಾರಸ್‌ನಲ್ಲಿ ಕೆಲವು ದಿನ ಅಭ್ಯಾಸ ನಡೆಸುವುದಾಗಿ ತಿಳಿಸಿದ ಅವರು `ಇಂಗ್ಲೆಂಡ್ ಹಾಗೂ ಬೆಲಾರಸ್ ಒಂದೇ ಕಾಲಮಾನ ಹೊಂದಿವೆ. ಆದ್ದರಿಂದ ನಿದ್ದೆ ಹಾಗೂ ಅಭ್ಯಾಸದ ಅವಧಿಯನ್ನು ಹೊಂದಿಸಿಕೊಳ್ಳಲು ಈ ಅಲ್ಪಾವಧಿಯ ಅಭ್ಯಾಸ ಸಹಕಾರಿ ಆಗಲಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.