ADVERTISEMENT

ಕೊಕ್ಕೊ: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಬೆಂಗಳೂರು: ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 23ನೇ ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಹೊಂಬೇಗೌಡ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲೀಗ್‌ನಲ್ಲಿ ಕರ್ನಾಟಕ ಇನಿಂಗ್ಸ್ ಹಾಗೂ 14 ಪಾಯಿಂಟ್‌ಗಳಿಂದ ವಿದರ್ಭ ತಂಡವನ್ನು ಸೋಲಿಸಿತು. ವಿದರ್ಭ ತಂಡದವರು ಗಳಿಸಿದ್ದು ಕೇವಲ ನಾಲ್ಕು ಪಾಯಿಂಟ್.

ಆತಿಥೇಯ ತಂಡದವರು ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಇನಿಂಗ್ಸ್ ಹಾಗೂ 9 ಪಾಯಿಂಟ್‌ಗಳಿಂದ ದೆಹಲಿ ಎದುರು ಜಯ ಗಳಿಸಿದರು. ಕರ್ನಾಟಕದ 15 ಪಾಯಿಂಟ್‌ಗಳಿಗೆ ಉತ್ತರವಾಗಿ ದೆಹಲಿ ಕೇವಲ 6 ಪಾಯಿಂಟ್ ಗಳಿಸಿತು.
ಕರ್ನಾಟಕ ಬುಧವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಮಣಿಪುರದ ಸವಾಲು ಎದುರಿಸಲಿದೆ. ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್ ತಂಡಗಳು ಕೂಡ ಎಂಟರ ಘಟ್ಟ ಪ್ರವೇಶಿಸಿವೆ.

ಇದೇ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ಮತ್ತೊಂದು ಗೆಲುವು ಸಾಧಿಸಿದೆ. ಆತಿಥೇಯ ತಂಡದವರು ಲೀಗ್‌ನಲ್ಲಿ ಇನಿಂಗ್ಸ್ ಹಾಗೂ 12 ಪಾಯಿಂಟ್‌ಗಳಿಂದ ಪಂಜಾಬ್ ತಂಡವನ್ನು ಸೋಲಿಸಿದರು. ಕರ್ನಾಟಕ 13 ಪಾಯಿಂಟ್ ಕಲೆಹಾಕಿದರೆ, ಪಂಜಾಬ್ ಗಳಿಸಿದ್ದು ಕೇವಲ 1 ಪಾಯಿಂಟ್.

ಮಹಾರಾಷ್ಟ್ರ ತಂಡದವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ತಂಡದವರು ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಇನಿಂಗ್ಸ್ ಹಾಗೂ ಐದು ಪಾಯಿಂಟ್‌ಗಳಿಂದ  ಪುದುಚೇರಿ ತಂಡವನ್ನು ಸೋಲಿಸಿದರು.

ಫೆಡರೇಷನ್ ಕಪ್ ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಶುಭಾರಂಭ ಮಾಡಿದೆ. ಈ ತಂಡ ನಾಲ್ಕು ಪಾಯಿಂಟ್‌ಗಳಿಂದ ಕೇರಳ ತಂಡವನ್ನು ಸೋಲಿಸಿತು. ಮಹಿಳೆಯರ ವಿಭಾಗದ ಪಂದ್ಯದಲ್ಲಿ ಕೇರಳ ಒಂದು ಪಾಯಿಂಟ್‌ನಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.