ಮೀರ್‌ಪುರ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿರುವ ಭಾರತ ತಂಡ ಅಗತ್ಯವಿರುವ ಆತ್ಮವಿಶ್ವಾಸ ಪಡೆದುಕೊಂಡಿದೆ.
ಮೀರ್‌ಪುರದಲ್ಲಿ ಬುಧವಾರ ನಡೆದ ಎರಡನೇ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ 20 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು.
ಷೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 178 ರನ್ ಗಳಿಸಿದರೆ, ಎದುರಾಳಿ ತಂಡ 6 ವಿಕೆಟ್‌ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಕರ್ಷಕ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ (ಅಜೇಯ 74, 48 ಎಸೆತ, 8 ಬೌಂ) ಮತ್ತು ಸುರೇಶ್ ರೈನಾ (54, 31 ಎಸೆತ, 6 ಬೌಂ, 2 ಸಿಕ್ಸರ್) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ಸೋಮವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕೈಯಲ್ಲಿ ಸೋಲು ಅನುಭವಿಸಿತ್ತು. ಆದ್ದರಿಂದ ಇಂಗ್ಲೆಂಡ್ ವಿರುದ್ಧ ಗೆಲುವು ಅಗತ್ಯವಾಗಿತ್ತು. ಏಕೆಂದರೆ ‘ಮಹಿ’ ಬಳಗ ಶುಕ್ರವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಬುಧವಾರ ದೊರೆತ ಗೆಲುವು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.
ಕೊಹ್ಲಿ, ರೈನಾ ಅಬ್ಬರ: ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಎಯೊನ್ ಮಾರ್ಗನ್ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ರೋಹಿತ್ ಶರ್ಮ (5) ಮತ್ತು ಶಿಖರ್ ಧವನ್ (14) ಉತ್ತಮ ಆರಂಭ ನೀಡಲು ವಿಫಲರಾದರು. ಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಇವರು ಬೇಗನೇ ಔಟಾಗಿದ್ದರು.
ಯುವರಾಜ್ ಸಿಂಗ್ (1) ಕೂಡಾ ಬೇಗನೇ ಪೆವಿಲಿಯನ್‌ಗೆ ಮರಳಿದ ಕಾರಣ ಭಾರತ ಒತ್ತಡಕ್ಕೆ ಒಳಗಾಯಿತು. ಆರು ಓವರ್‌ಗಳ ಕೊನೆಯಲ್ಲಿ ಭಾರತ ಮೂರು ವಿಕೆಟ್‌ಗೆ 39 ರನ್ ಗಳಿಸಿತ್ತು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪ್ರಭುತ್ವ ಮೆರೆದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಇರುವ ಬಳಿಕ ವೇಗವಾಗಿ ರನ್ ಪೇರಿಸಿದರು. ಇವರು ನಾಲ್ಕನೇ ವಿಕೆಟ್‌ಗೆ 8.5 ಓವರ್‌ಗಳಲ್ಲಿ 81 ರನ್ ಕಲೆಹಾಕಿದರು.
ಭಾರತ ಕೊನೆಯ 10 ಓವರ್‌ಗಳಲ್ಲಿ 105 ರನ್ ಕಲೆಹಾಕಿತು. ಕೊಹ್ಲಿ ಮತ್ತು ದೋನಿ ಮುರಿಯದ ಐದನೇ ವಿಕೆಟ್‌ಗೆ 5.1 ಓವರ್‌ಗಳಲ್ಲಿ 51 ರನ್ ಸೇರಿಸಿದರು.ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಉತ್ತಮ ಆರಂಭ ಲಭಿಸಿತು. ಮೈಕಲ್ ಲಂಬ್ (36, 25 ಎಸೆತ) ಮತ್ತು ಅಲೆಕ್ಸ್ ಹೇಲ್ಸ್ (16) ಮೊದಲ ವಿಕೆಟ್‌ಗೆ 43 ರನ್ ಸೇರಿಸಿದರು. ಇವರಿಬ್ಬರು ಅಲ್ಪ ಅಂತರದಲ್ಲಿ ಔಟಾದ ಕಾರಣ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು.
ಮೂಮಿನ್ ಅಲಿ (46, 38 ಎಸೆತ) ಮತ್ತು ಜಾಸ್ ಬಟ್ಲರ್ (30, 18 ಎಸೆತ) ಕೊನೆಯವರೆಗೆ ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ಒಲಿಯಲಿಲ್ಲ. 23 ರನ್‌ಗಳಿಗೆ ಎರಡು ವಿಕೆಟ್ ಪಡೆದ ರವೀಂದ್ರ ಜಡೇಜ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್: ಭಾರತ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 178 (ರೋಹಿತ್ ಶರ್ಮ 5, ಶಿಖರ್ ಧವನ್ 14, ವಿರಾಟ್ ಕೊಹ್ಲಿ ಔಟಾಗದೆ 74, ಯುವರಾಜ್ ಸಿಂಗ್ 1, ಸುರೇಶ್ ರೈನಾ 54, ಮಹೇಂದ್ರ ಸಿಂಗ್ ದೋನಿ ಔಟಾಗದೆ 21, ಕ್ರಿಸ್ ಜೋರ್ಡಾನ್ 37ಕ್ಕೆ 1, ಜೇಡ್ ಡೆರ್ನ್‌ಬಾಕ್ 27ಕ್ಕೆ 1)
ಇಂಗ್ಲೆಂಡ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 158 (ಮೈಕಲ್ ಲಂಬ್ 36, ಅಲೆಕ್ಸ್ ಹೇಲ್ಸ್ 16, ಮೂಮಿನ್ ಅಲಿ 46, ಎಯೊನ್ ಮಾರ್ಗನ್ 16, ಜಾಸ್ ಬಟ್ಲರ್ 30, ರವೀಂದ್ರ ಜಡೇಜ 23ಕ್ಕೆ 2)
ಫಲಿತಾಂಶ: ಭಾರತಕ್ಕೆ 20 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.