ಕೇಪ್ ಟೌನ್ (ಎಎಫ್‌ಪಿ): ಮಿಷೆಲ್ ಜಾನ್ಸನ್ (42ಕ್ಕೆ4) ಹಾಗೂ ರ್‍ಯಾನ್ ಹ್ಯಾರಿಸ್ (63ಕ್ಕೆ3) ಅವರ ಮಾರಕ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರು ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದೆ.
ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ನ 494 ರನ್‌ಗಳಿಗೆ ಉತ್ತರವಾಗಿ ಆತಿಥೇಯ ದಕ್ಷಿಣ ಆಫ್ರಿಕಾ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 82.5 ಓವರ್‌ಗಳಲ್ಲಿ 287 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಆದರೆ ದಕ್ಷಿಣ ಆಫ್ರಿಕಾದ ಮೇಲೆ ಆಸ್ಟ್ರೇಲಿಯಾ ಫಾಲೋಆನ್ ಹೇರಲಿಲ್ಲ. ಬದಲಾಗಿ 207 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಕಾಂಗರೂ ಬಳಗ ಮೂರನೇ ದಿನದಾಟದ ಅಂತ್ಯಕ್ಕೆ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 27 ರನ್ ಗಳಿಸಿದೆ. ಒಟ್ಟಾರೆ 234 ರನ್‌ಗಳ ಮುನ್ನಡೆ ಹೊಂದಿದೆ.
ಇದಕ್ಕೂ ಮೊದಲು ಅಲ್ವಿರೊ ಪೀಟರ್‌ಸನ್ (53; 62ಎ, 8ಬೌಂ) ಹಾಗೂ ಫಾಫ್ ಡು ಪ್ಲೆಸಿಸ್ (67; 135ಎ, 6ಬೌಂ) ಅವರನ್ನು ಹೊರತುಪಡಿಸಿ ಆಫ್ರಿಕಾ ತಂಡದ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತ ಮ ಆಟ ಮೂಡಿಬರಲಿಲ್ಲ. ಹೀಗಾಗಿ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್, 494 ಡಿಕ್ಲೇರ್ಡ್ ಮತ್ತು 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 27 (ಡೇವಿಡ್ ವಾರ್ನರ್ ಬ್ಯಾಟಿಂಗ್ 25): ದ. ಆಫ್ರಿಕಾ: ಮೊದಲ ಇನಿಂಗ್ಸ್ 82.5 ಓವರ್‌ಗಳಲ್ಲಿ 287 ( ಫಾಫ್ ಡು ಪ್ಲೆಸಿಸ್ 67 ; ಮಿಷೆಲ್ ಜಾನ್ಸನ್ 42ಕ್ಕೆ4, ಹ್ಯಾರಿಸ್ 63ಕ್ಕೆ3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.