ADVERTISEMENT

`ಕ್ರಿಕೆಟ್ ಅರ್ಥಮಾಡಿಕೊಳ್ಳುವ ಗೆಳತಿ ಇದ್ದಾಳೆ'

ಮಹಿಳಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಅಲಿಸಾ ಪ್ರೇಮದ ಬಲೆಯಲ್ಲಿ ಸ್ಟಾರ್ಕ್

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2013, 19:59 IST
Last Updated 27 ಫೆಬ್ರುವರಿ 2013, 19:59 IST
ಅಲಿಸಾ ಹೀಲಿ ಹಾಗೂ ಮಿಷೆಲ್ ಸ್ಟಾರ್ಕ್
ಅಲಿಸಾ ಹೀಲಿ ಹಾಗೂ ಮಿಷೆಲ್ ಸ್ಟಾರ್ಕ್   

ಹೈದರಾಬಾದ್: `ಕ್ರಿಕೆಟ್ ಟೂರ್ನಿ ಹಾಗೂ ಸರಣಿಗಳಲ್ಲಿ ಆಡಲು ನಾನು ಸದಾ ಪ್ರವಾಸ ಕೈಗೊಳ್ಳುತ್ತಾ ಇರುತ್ತೇನೆ. ಅದನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯನ್ನೇ ಪತ್ನಿಯಾಗಿ ಹೊಂದಬೇಕು ಎಂಬ ಆಸೆ ಇತ್ತು. ನನ್ನ ಆಟವನ್ನು ಅರ್ಥ ಮಾಡಿಕೊಳ್ಳುವ ಗೆಳತಿ ಸಿಕ್ಕಿದ್ದಾಳೆ. ನನ್ನ ಭಾವಿ ಪತ್ನಿ ಅಲಿಸಾ ಹೀಲಿ ಕೂಡ ಕ್ರಿಕೆಟ್ ಆಡುತ್ತಾಳೆ'

-ಟೆಸ್ಟ್ ಸರಣಿ ಆಡಲು ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಮಿಷೆಲ್ ಸ್ಟಾರ್ಕ್ `ಪ್ರಜಾವಾಣಿ'ಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ಅಲಿಸಾ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡದಲ್ಲಿದ್ದರು. ಈ ಸಂದರ್ಭದಲ್ಲಿ ಪುರುಷರ ತಂಡ ಕೂಡ ಅಭ್ಯಾಸ ಪಂದ್ಯ ಆಡಲು ಚೆನ್ನೈನಲ್ಲಿತ್ತು. ಆಗ ವೇಗಿ ಸ್ಟಾರ್ಕ್ ಮುಂಬೈಗೆ ತೆರಳಿ ಕೆಲ ಪಂದ್ಯ ವೀಕ್ಷಿಸಿದ್ದರು.

ಅಲಿಸಾ ಅವರ ತಂದೆಯ ಸಹೋದರ ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ ಇಯಾನ್ ಹೀಲಿ. 22 ವರ್ಷ ವಯಸ್ಸಿನ ಅಲಿಸಾ ಒಂದು ಟೆಸ್ಟ್, 12 ಏಕದಿನ, 30 ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದಾರೆ. 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕಾಂಗರೂ ಪಡೆ ಚಾಂಪಿಯನ್ ಆಗುವಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು.

22 ವರ್ಷ ವಯಸ್ಸಿನ ಸ್ಟಾರ್ಕ್ ಎಂಟು ಟೆಸ್ಟ್, 18 ಏಕದಿನ ಹಾಗೂ 10 ಟ್ವೆಂಟಿ-20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪುರುಷರ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಭಾರತ ಎದುರು.

ಭಾರತದ ಪ್ರವಾಸದ್ಲ್ಲಲಿ ಮುಂದಿರುವ ಸವಾಲು, ಕ್ರಿಕೆಟ್ ಪ್ರೀತಿ, ಐಪಿಎಲ್‌ನಲ್ಲಿ ಆಡುವ ಆಸೆ, ಗೆಳತಿ ಅಲಿಸಾ, ಸಹೋದರ ಬ್ರೆಂಡನ್ ಸೇರಿದಂತೆ ಹಲವು ವಿಷಯಗಳನ್ನು ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಸ್ಟಾರ್ಕ್ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಕುಟುಂಬದ ಬಗ್ಗೆ ಹೇಳಿ?
ನಮ್ಮದು ಕ್ರೀಡಾ ಮನೆತನ. ತಂದೆ ಕ್ರಿಕೆಟ್ ಕೋಚ್. ಸಹೋದರ ಬ್ರೆಂಡನ್ ಸ್ಟಾರ್ಕ್ ಹೈಜಂಪ್ ಸ್ಪರ್ಧಿ. ಗೆಳತಿ ಅಲಿಸಾ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್. ಪರಸ್ಪರರನ್ನು ಬೆಂಬಲಿಸುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಪರಸ್ಪರ ಅರ್ಥ ಮಾಡಿಕೊಂಡು ಆಡಲು ಸಹಾಯವಾಗುತ್ತಿದೆ.

ಅಲಿಸಾ ಅವರೊಂದಿಗೆ ಪ್ರೀತಿ ಹೇಗೆ ಶುರುವಾಯಿತು?
ನಮ್ಮ ಗೆಳೆತನಕ್ಕೆ ನೆರವಾಗಿದ್ದು ಕ್ರಿಕೆಟ್ ಹಾಗೂ ಟ್ವಿಟರ್. ಅಲಿಸಾ ನ್ಯೂ ಸೌಥ್ ವೇಲ್ಸ್ ಜೂನಿಯರ್ ಮಹಿಳಾ ತಂಡದಲ್ಲಿ ಆಡುತ್ತಿದ್ದಳು. ನಾನು ಕೂಡ ನ್ಯೂ ಸೌಥ್ ವೇಲ್ಸ್ ತಂಡದ ಆಟಗಾರ. ಹಾಗಾಗಿ ಪದೇ ಪದೇ ಭೇಟಿಯಾಗುತ್ತಿದ್ದೆವು. ಬಳಿಕ ಟ್ವಿಟರ್‌ನಲ್ಲಿ ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುವ ಸಂದೇಶ ರವಾನಿಸುತ್ತ್ದ್ದಿದೆವು. ಮೂರು ವರ್ಷಗಳಿಂದ ಪ್ರೀತಿ ಸಾಗಿದೆ.

ಮಹಿಳಾ ವಿಶ್ವಕಪ್ ಗ್ದ್ದೆದ ಸಂಭ್ರಮವನ್ನು ಅಲಿಸಾ ನಿಮ್ಮಂದಿಗೆ ಹಂಚಿಕೊಂಡಿದ್ದು ಹೇಗೆ?
ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಭಾರತ ಪ್ರವಾಸ ಕೈಗೊಂಡಿದ್ದ ಕಾರಣ ವಿಶ್ವಕಪ್ ಟೂರ್ನಿ ವೀಕ್ಷಿಸಲು ನಾನು ಮುಂಬೈಗೆ ತೆರಳಿದ್ದೆ. ಅಲಿಸಾಳೊಂದಿಗೆ ಹೆಚ್ಚಿನ ಸಮಯ ಕಳೆದೆ. ಅಭ್ಯಾಸ ಪಂದ್ಯ ಇದ್ದ ಕಾರಣ ಫೈನಲ್ ವೀಕ್ಷಿಸಲು ಸಾಧ್ಯವಾಗಲಿಲ್ಲ. ಪ್ರಶಸ್ತಿ ಜಯಿಸಿದ ಗೆಳತಿ ಅಲಿಸಾ ಹಾಗೂ ಇನ್ನುಳಿದ ಆಟಗಾರ್ತಿಯರಿಗೆ ಮೊಬೈಲ್ ಮೂಲಕವೇ ಅಭಿನಂದನೆ ಹೇಳಿದೆ. ನಾವಿಬ್ಬರು ಜೊತೆಗಿದ್ದಾಗ ಕ್ರಿಕೆಟ್ ಬಗ್ಗೆ ಮಾತನಾಡುವುದು ಕಡಿಮೆ. ಅದಕ್ಕಿಂತ ಬೋರಿನ ವಿಷಯ ಮತ್ತೊಂದಿಲ್ಲ.  

ವಿವಾಹ ಯಾವಾಗ?
ರಿಂಗ್ ಬದಲಾಯಿಸಿಕೊಂಡಿದ್ದೇವೆ. ಅಲನ್ ಬಾರ್ಡರ್ ಪದಕ ಪ್ರದಾನ ಸಮಾರಂಭದಲ್ಲಿ `ದಂಪತಿ'ಯಾಗಿ ನಾವು ಪಾಲ್ಗೊಂಡಿದ್ದೆವು. ಶೀಘ್ರದಲ್ಲಿ ವಿವಾಹವಾಗಲಿದ್ದೇವೆ.

ಸಹೋದರ ಬ್ರೆಂಡನ್ ಸ್ಟಾರ್ಕ್ ಬಗ್ಗೆ ಹೇಳಿ?
ಸಹೋದರ ಬ್ರೆಂಡನ್ ಸ್ಟಾರ್ಕ್ ಹೈಜಂಪ್‌ನಲ್ಲಿ ಯುವ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ್ದಾನೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದಾನೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕು ಎಂಬುದು ಆತನ ಗುರಿ.

 ಐಪಿಎಲ್ ಟೂರ್ನಿಯಲ್ಲಿ  ಏಕೆ ಆಡುತ್ತಿಲ್ಲ?
ಉಳಿದ ಎಲ್ಲಾ ಆಟಗಾರರಂತೆ ಐಪಿಎಲ್‌ನಲ್ಲಿ ಆಡುವ ಆಸೆ ನನಗೂ ಇದೆ. ಆದರೆ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಮೊದಲ ಸ್ಥಾನ ಗಟ್ಟಿಮಾಡಿಕೊಳ್ಳಬೇಕು. ಉತ್ತಮ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಸ್ವಲ್ಪ ಸಮಯ ಕಳೆದು ಐಪಿಎಲ್‌ನಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಈ ಸಂಬಂಧ ನನ್ನ ಮ್ಯಾನೇಜರ್, ಕುಟುಂಬ ಹಾಗೂ ಗೆಳತಿಯೊಂದಿಗೆ ಚರ್ಚಿಸಿದ್ದೇನೆ. ಹಾಗಾಗಿಯೇ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದೆ.

ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿ ಬಗ್ಗೆ ಹೇಳಿ?
ಉಭಯ ತಂಡಗಳ ನಡುವಿನ ಸರಣಿ ಇತ್ತೀಚಿನ ದಿನಗಳಲ್ಲಿ ತುಂಬಾ ಆಸಕ್ತಿ ಕೆರಳಿಸುತ್ತಿದೆ. ಆದರೆ ವೇಗದ ಬೌಲರ್‌ಗಳಿಗೆ ಈ ಸರಣಿ ತುಂಬಾ ಸವಾಲಿನದ್ದು. ಏಕೆಂದರೆ ಇಲ್ಲಿಯ ಪಿಚ್‌ಗಳು ವೇಗಿಗಳಿಗೆ ಸಹಾಯ ನೀಡುವುದಿಲ್ಲ ಎಂಬುದು ನಮಗೆ ಗೊತ್ತಿದೆ. ವಿಶೇಷವೆಂದರೆ ನಮ್ಮ ತಂಡದ ಸಾಮರ್ಥ್ಯ ವೇಗ. ಸ್ಪಿನ್ನರ್‌ಗಳನ್ನು ಭಾರತದವರು ಚೆನ್ನಾಗಿ ಎದುರಿಸುತ್ತಾರೆ. ಹಾಗಾಗಿ ಆರು ಮಂದಿ ವೇಗದ ಬೌಲರ್‌ಗಳೊಂದಿಗೆ ನಾವು ಇಲ್ಲಿಗೆ ಬಂದಿದ್ದೇವೆ.

ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಯಾರು ಕಠಿಣ?
ಸಚಿನ್, ಸೆಹ್ವಾಗ್‌ಗೆ ಬೌಲಿಂಗ್ ಮಾಡುವುದು ಸವಾಲಿನ ವಿಷಯ. ತೆಂಡೂಲ್ಕರ್ ವಿಕೆಟ್ ಪಡೆಯುವುದು ಎ್ಲ್ಲಲಾ ಬೌಲರ್‌ಗಳ ಕನಸು. ಆದರೆ ನಾನು ಒಬ್ಬ ಆಟಗಾರನನ್ನು ಗುರಿ ಇಟ್ಟುಕೊಂಡು ಅಂಗಳಕ್ಕಿಳಿಯುವುದಿಲ್ಲ. ಉಳಿದ   ಬ್ಯಾಟ್ಸ್‌ಮನ್‌ಗಳು ಕೂಡ ಅಪಾಯಕಾರಿಯಾಗಬಲ್ಲರು.

ಎಡಗೈ ವೇಗದ ಬೌಲರ್ ಆಗಿರುವ ನಿಮ್ಮ ಪ್ರಮುಖ ಬಲವೇನು?
ಈಗ ಭಾರತ ಪ್ರವಾಸಕ್ಕೆ ಬಂದಿರುವ ಆಸ್ಟ್ರೇಲಿಯಾ ತಂಡದಲ್ಲಿ ನಾನೇ ಚಿಕ್ಕ ವಯಸ್ಸಿನವ. ಕಲಿಯಬೇಕಾದ್ದು ತುಂಬಾ ಇದೆ. ಇಲ್ಲಿಯ ಹವಾಗುಣಕ್ಕೆ ಹೊಂದಿಕೊಂಡು ಬೌಲ್ ಮಾಡುವುದು ಅಷ್ಟು ಸುಲಭವಲ್ಲ. ಎಡಗೈ ವೇಗಿಯಾಗಿರುವುದೇ ನನ್ನ ಬಲ. ರಿವರ್ಸ್ ಸ್ವಿಂಗ್‌ನ ಉಪಯೋಗ ಪಡೆದುಕೊಳ್ಳಬೇಕು. ಭಾರತದ ಬ್ಯಾಟ್ಸ್‌ಮನ್‌ಗಳು ಎಡಗೈ ವೇಗಿಗಳ ಎದುರು ಅಷ್ಟೊಂದು ಯಶಸ್ಸು ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.