ADVERTISEMENT

ಕ್ರಿಕೆಟ್: ಜಿಂಬಾಬ್ವೆ ತಂಡಕ್ಕೆ ಸ್ಮರಣೀಯ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 19:30 IST
Last Updated 8 ಆಗಸ್ಟ್ 2011, 19:30 IST
ಕ್ರಿಕೆಟ್: ಜಿಂಬಾಬ್ವೆ ತಂಡಕ್ಕೆ ಸ್ಮರಣೀಯ ಗೆಲುವು
ಕ್ರಿಕೆಟ್: ಜಿಂಬಾಬ್ವೆ ತಂಡಕ್ಕೆ ಸ್ಮರಣೀಯ ಗೆಲುವು   

ಹರಾರೆ (ಎಪಿ): ಆರು ವರ್ಷಗಳ ಬಿಡುವಿನ ಬಳಿಕ ಆಡಿದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವಿನ ಸಂಭ್ರಮ ಆಚರಿಸಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಜಿಂಬಾಬ್ವೆ 130 ರನ್‌ಗಳ ಜಯ ಸಾಧಿಸಿತು.

ಗೆಲುವಿಗೆ 375 ರನ್‌ಗಳ ಗುರಿ ಪಡೆದ ಬಾಂಗ್ಲಾ ತಂಡ ಅಂತಿಮ ದಿನವಾದ ಸೋಮವಾರ 57.3 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲೌಟಾಯಿತು. ಕೈಲ್ ಜಾರ್ವಿಸ್ (61ಕ್ಕೆ 4) ಮತ್ತು ಕ್ರಿಸ್ ಮೊಫು (51ಕ್ಕೆ 3) ಅವರು ಆತಿಥೇಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

3 ವಿಕೆಟ್‌ಗೆ 123 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಬಾಂಗ್ಲಾ ಯಾವುದೇ ಹಂತದಲ್ಲೂ ಎದುರಾಳಿ ತಂಡಕ್ಕೆ ಬೆದರಿಕೆ ಹುಟ್ಟಿಸಲಿಲ್ಲ. ಉತ್ತಮ ಆರಂಭ ಪಡೆದಿದ್ದ ಮೊಹಮ್ಮದ್ ಅಶ್ರಫುಲ್ (39) ಅವರನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಬ್ರಯನ್ ವಿಟೋರಿ ಜಿಂಬಾಬ್ವೆಗೆ ಮೊದಲ `ಬ್ರೇಕ್~ ನೀಡಿದರು.

ಆ ಬಳಿಕ ಒಂದೊಂದೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಹೋದ ಬಾಂಗ್ಲಾ ಸೋಲಿನ ಹಾದಿ ಹಿಡಿಯಿತು. ಕೊನೆಯಲ್ಲಿ ಅಬ್ದುಲ್ ರಜಾಕ್ (43, 17 ಎಸೆತ, 5 ಬೌಂ, 3 ಸಿಕ್ಸರ್) ಅವರ ಅಬ್ಬರದ ಆಟ ತಂಡದ ಸೋಲಿನ ಅಂತರವನ್ನು ಅಲ್ಪ ತಗ್ಗಿಸಿತು.

ಮೊದಲ ಇನಿಂಗ್ಸ್‌ನಲ್ಲಿ 71 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 105 ರನ್ ಗಳಿಸಿದ ಜಿಂಬಾಬ್ವೆ ತಂಡದ ನಾಯಕ ಬ್ರೆಂಡನ್ ಟೇಲರ್ ಅರ್ಹವಾಗಿ `ಪಂದ್ಯಶ್ರೇಷ್ಠ~ ಪ್ರಶಸ್ತಿ ಪಡೆದರು. ಜಿಂಬಾಬ್ವೆ ತಂಡ 2005 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ದೂರನಿಲ್ಲುವ ನಿರ್ಧಾರ ಕೈಗೊಂಡಿತ್ತು. ಆ ಬಳಿಕ ನಿಗದಿತ ಓವರ್‌ಗಳ ಪಂದ್ಯದಲ್ಲಿ ಮಾತ್ರ ಪಾಲ್ಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್:
ಜಿಂಬಾಬ್ವೆ: ಮೊದಲ ಇನಿಂಗ್ಸ್ 370 ಮತ್ತು ಎರಡನೇ ಇನಿಂಗ್ಸ್ 92 ಓವರ್‌ಗಳಲ್ಲಿ 5 ವಿಕೆಟ್‌ಗೆ 291 ಡಿಕ್ಲೇರ್ಡ್.

ಬಾಂಗ್ಲಾದೇಶ: ಮೊದಲ ಇನಿಂಗ್ಸ್ 287 ಮತ್ತು ಎರಡನೇ ಇನಿಂಗ್ಸ್ 57.3 ಓವರ್‌ಗಳಲ್ಲಿ 244 (ತಮೀಮ್ ಇಕ್ಬಾಲ್ 43, ಮೊಹಮ್ಮದ್ ಅಶ್ರಫುಲ್ 39, ಅಬ್ದುಲ್ ರಜಾಕ್ 43, ಕೈಲ್ ಜಾರ್ವಿಸ್ 61ಕ್ಕೆ 4, ಕ್ರಿಸ್ ಮೊಫು 51ಕ್ಕೆ 3, ಎಲ್ಟಾನ್ ಚಿಗುಂಬುರಾ 50ಕ್ಕೆ 2).

ಫಲಿತಾಂಶ: ಜಿಂಬಾಬ್ವೆಗೆ 130 ರನ್ ಗೆಲುವು ಹಾಗೂ ಸರಣಿ ಜಯ; ಪಂದ್ಯಶ್ರೇಷ್ಠ: ಬ್ರೆಂಡನ್ ಟೇಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.