ADVERTISEMENT

ಕ್ರಿಕೆಟ್: ತಂಡ ಸೇರಿಕೊಂಡ ಪ್ರಗ್ಯಾನ್ ಓಜಾ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 19:30 IST
Last Updated 8 ಆಗಸ್ಟ್ 2011, 19:30 IST
ಕ್ರಿಕೆಟ್: ತಂಡ ಸೇರಿಕೊಂಡ ಪ್ರಗ್ಯಾನ್ ಓಜಾ
ಕ್ರಿಕೆಟ್: ತಂಡ ಸೇರಿಕೊಂಡ ಪ್ರಗ್ಯಾನ್ ಓಜಾ   

ಬರ್ಮಿಂಗ್‌ಹ್ಯಾಮ್ (ಪಿಟಿಐ): ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಬದಲಿಗೆ ಸ್ಥಾನ ಪಡೆದಿರುವ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಎಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ತುಂಬಾ ಹೊತ್ತು ಅಭ್ಯಾಸ ನಡೆಸಿದರು.

ಕ್ರೀಡಾಂಗಣಕ್ಕೆ ಆಗಮಿಸಿದ ಕೋಚ್ ಡಂಕನ್ ಫ್ಲೆಚರ್ ಮೊದಲು ಪಿಚ್ ಪರಿಶೀಲನೆ ನಡೆಸಿದರು. ಅಷ್ಟು ಮಾತ್ರವಲ್ಲದೇ, ಪಿಚ್ ಕ್ಯೂರೇಟರ್ ಸ್ಟೀವ್ ರೋಸ್ ಜೊತೆ ಸಮಾಲೋಚನೆ ನಡೆಸಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧ ವಾರ ಇಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್ ತಂಡದ ಆಯ್ಕೆದಾರ   ಆ್ಯಷ್ಲೆ ಜೈಲ್ಸ್ ಪ್ರಕಾರ ಎಜ್‌ಬಾಸ್ಟನ್ ಪಿಚ್ ಸ್ಪಿನ್ ಹಾಗೂ ರಿವರ್ಸ್ ಸ್ವಿಂಗ್‌ಗೆ ನೆರವಾಗಲಿದೆ.

ಭಾರತ ತಂಡದ ಉಳಿದ ಆಟಗಾ ರರು ಸ್ವಲ್ಪ ಹೊತ್ತು ಫುಟ್‌ಬಾಲ್ ಆಡುವ ಮೂಲಕ ದೈಹಿಕ ಕಸರತ್ತು ನಡೆಸಿದರು. ಆದರೆ ಅವರಲ್ಲಿ ಎಂದಿನ ಉತ್ಸಾಹ ಕಾಣಿಸಲಿಲ್ಲ.   ಲಾರ್ಡ್ಸ್ ಹಾಗೂ ನಾಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯಗಳಲ್ಲಿ ಎದುರಾದ ಭಾರಿ ಅಂತರದ ಸೋಲು ಆಟಗಾರರ ದೇಹಭಾಷೆಯಲ್ಲಿ ಬದಲಾವಣೆಗೆ ಕಾರಣವಾಗಿದೆ.

ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ರಾಹುಲ್ ದ್ರಾವಿಡ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಸಚಿನ್ ತೆಂಡೂಲ್ಕರ್ ಫೀಲ್ಡಿಂಗ್ ಕೋಚ್ ಟ್ರೆವೋರ್ ಪೆನ್ನಿ ಮಾರ್ಗದರ್ಶನದಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸಿದರು. ಭಾನುವಾರ ಇಲ್ಲಿ ಮಳೆಯಾಗಿದ್ದು, ಚಳಿಯ ವಾತಾವರಣ ನಿರ್ಮಾಣವಾಗಿದೆ.

4-0ರಲ್ಲಿ ಜಯ: ಇಂಗ್ಲೆಂಡ್ ತಂಡದವರು ಎಂ.ಎಸ್.ದೋನಿ ಪಡೆ ಎದುರು 4-0ರಲ್ಲಿ ಟೆಸ್ಟ್ ಸರಣಿ ಜಯಿಸಲಿದ್ದಾರೆ ಎಂದು ಮಾಜಿ ನಾಯಕ ಮೈಕಲ್ ವಾನ್ ಭವಿಷ್ಯ ನುಡಿದಿದ್ದಾರೆ.

`ಜಹೀರ್ ಖಾನ್ ಸರಣಿಯಿಂದ ಹೊರಬಿದ್ದಿರುವುದು ಭಾರತಕ್ಕೆ ಮತ್ತೊಂದು ಆಘಾತ ನೀಡಿದೆ. ಜಹೀರ್ ಇಲ್ಲದೇ ಭಾರತದ ಉಳಿದ ಬೌಲರ್‌ಗಳಿಗೆ ಇಂಗ್ಲೆಂಡ್ ತಂಡದ 20 ವಿಕೆಟ್ ಪಡೆಯಲು ಅಸಾಧ್ಯ~ ಎಂದು ಅವರು ತಿಳಿಸಿದ್ದಾರೆ. ಈ ಪರಿಸ್ಥಿತಿಗೆ ಐಪಿಎಲ್ ಕಾರಣ ಎಂದು ವಾನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಆರ್‌ಪಿಗೆ ಸ್ಥಾನ ನೀಡಿ:  ಎಸ್.ಶ್ರೀಶಾಂತ್ ಬದಲಿಗೆ ಎಡಗೈ ವೇಗಿ ಆರ್.ಪಿ.ಸಿಂಗ್‌ಗೆ ಮುಂದಿನ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂದು ಪಾಕ್‌ತಂಡದ ಮಾಜಿ ನಾಯಕ ವಾಸೀಮ್ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.