ವೆಲಿಂಗ್ಟನ್: ಅಲ್ವಿರೊ ಪೀಟರ್ಸನ್ (156) ಹಾಗೂ ಜೀನ್ ಪಾಲ್ ಡುಮಿನಿ (103) ಅವರ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡದವರು ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರಿ ಮೊತ್ತ ಪೇರಿಸಿದ್ದಾರೆ.
ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ 148.4 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 474 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ 25 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 65 ರನ್ ಗಳಿಸಿದೆ.
ಆತಿಥೇಯ ತಂಡದ ಮಾರ್ಕ್ ಗಿಲೆಸ್ಪಿ ಆರು ವಿಕೆಟ್ ಪಡೆದು ಗಮನ ಸೆಳೆದರಾದರೂ ಎದುರಾಳಿ ತಂಡದ ಭರ್ಜರಿ ಮೊತ್ತಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅಲ್ವಿರೊ ಹಾಗೂ ಡುಮಿನಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 200 ರನ್ ಕಲೆಹಾಕಿದರು.
335 ಎಸೆತಗಳನ್ನು ಎದುರಿಸಿದ ಅಲ್ವಿರೊ ಒಂದು ಸಿಕ್ಸರ್ ಹಾಗೂ 19 ಬೌಂಡರಿ ಬಾರಿಸಿದರು. ಅವರು ಭರ್ತಿ 503 ನಿಮಿಷ ಕ್ರೀಸ್‌ನಲ್ಲಿದ್ದರು. ಡುಮಿನಿ ಅವರ 186 ಎಸೆತಗಳ ಇನಿಂಗ್ಸ್‌ನಲ್ಲಿ 13 ಬೌಂಡರಿಗಳಿದ್ದವು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 148.4 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 474 ಡಿಕ್ಲೇರ್ಡ್ (ಅಲ್ವಿರೊ ಪೀಟರ್ಸನ್ 156, ಹಾಶೀಮ್ ಆಮ್ಲಾ 63, ಜೀನ್ ಪಾಲ್ ಡುಮಿನಿ 103, ಮಾರ್ಕ್ ಬೌಷರ್ 46; ಕ್ರಿಸ್ ಮಾರ್ಟಿನ್ 95ಕ್ಕೆ2, ಮಾರ್ಕ್ ಗಿಲೆಸ್ಪಿ 113ಕ್ಕೆ6); ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 25 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 65 (ಡೇನಿಯಲ್ ಫ್ಲಿನ್ ಬ್ಯಾಟಿಂಗ್ 35, ಮಾರ್ಟಿನ್ ಗುಪ್ಟಿಲ್ ಬ್ಯಾಟಿಂಗ್28).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.