ADVERTISEMENT

ಕ್ರೀಡಾ ಲೋಕದ ದಿಗ್ಗಜರ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2011, 19:30 IST
Last Updated 26 ಜೂನ್ 2011, 19:30 IST
ಕ್ರೀಡಾ ಲೋಕದ ದಿಗ್ಗಜರ ಭೇಟಿ
ಕ್ರೀಡಾ ಲೋಕದ ದಿಗ್ಗಜರ ಭೇಟಿ   

ಲಂಡನ್ (ಪಿಟಿಐ): ಆಧುನಿಕ ಕ್ರೀಡಾಲೋಕದ ಇಬ್ಬರು ದಿಗ್ಗಜರು ಭೇಟಿಯಾದ ಅಪೂರ್ವ ಕ್ಷಣಕ್ಕೆ ಆಲ್ ಇಂಗ್ಲೆಂಡ್ ಕ್ಲಬ್ ಶನಿವಾರ ಸಾಕ್ಷಿಯಾಯಿತು. ಟೆನಿಸ್ ಲೋಕದ ಮಿನುಗುತಾರೆ ರೋಜರ್ ಫೆಡರರ್ ಹಾಗೂ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಪರಸ್ಪರ ಭೇಟಿಯಾದರು.

ಭಾರತದ ಬ್ಯಾಟ್ಸ್‌ಮನ್ 16 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರ ಅಭಿಮಾನಿ ಕೂಡಾ ಹೌದು. ಸ್ವಿಸ್ ಆಟಗಾರ ಕ್ರಿಕೆಟ್ ಬಗ್ಗೆ ಹೊಂದಿರುವ ಜ್ಞಾನ ಸಚಿನ್ ಅವರಿಗೆ ಅಲ್ಪ ಅಚ್ಚರಿ ಉಂಟುಮಾಡಿದೆ.

ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಸಚಿನ್ ಪತ್ನಿ ಅಂಜಲಿ ಜೊತೆ ಇಲ್ಲಿಗೆ ಆಗಮಿಸಿದ್ದರು. ಅವರು  ಫೆಡರರ್ ಹಾಗೂ ಅರ್ಜೆಂಟೀನಾದ ಡೇವಿಡ್ ನಲ್ಬಾಂಡಿಯನ್ ನಡುವಿನ ಪಂದ್ಯವನ್ನು ವೀಕ್ಷಿಸಿದರು.

ಈ ಪಂದ್ಯದ ಬಳಿಕ ಕ್ರೀಡಾ ಲೋಕದ ಇಬ್ಬರು ಶ್ರೇಷ್ಠ ಆಟಗಾರರ ಭೇಟಿ ನಡೆದಿದೆ. ಸಚಿನ್ ಹಾಗೂ ಫೆಡರರ್ ಸುಮಾರು ಒಂದು ಗಂಟೆಯ ಕಾಲ ಪರಸ್ಪರ ಮಾತುಕತೆ ನಡೆಸಿದರು. ಮಾತ್ರವಲ್ಲ ಜೊತೆಯಾಗಿ ಫೋಟೋಗೆ ಪೋಸ್ ನೀಡಿದರು.

`ವಿಂಬಲ್ಡನ್‌ನ ರಾಯಲ್    ಬಾಕ್ಸ್‌ನ ಬಾಲ್ಕನಿಯಲ್ಲಿ ಸುಮಾರು ಒಂದು ಗಂಟೆಯನ್ನು ರೋಜರ್ ಫೆಡರರ್ ಜೊತೆ ವ್ಯಯಿಸಿದೆ. ಎಂತಹ ವಿನಯವಂತ ಆತ! ಫೆಡರರ್ ಕ್ರಿಕೆಟ್ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ~ ಎಂದು ಸಚಿನ್ `ಟ್ವಿಟರ್~ನಲ್ಲಿ ಬರೆದಿದ್ದಾರೆ.

ಸಚಿನ್ ಜೊತೆಗಿನ ಭೇಟಿಯ ವಿಷಯವನ್ನು ಫೆಡರರ್ `ಫೇಸ್‌ಬುಕ್~ನಲ್ಲಿ ತಿಳಿಸಿದ್ದಾರೆ. `ಇಂದು ವಿಶೇಷ ದಿನ. ಒಂದು ಒಳ್ಳೆಯ ಪಂದ್ಯವನ್ನಾಡಿದೆ. ಆ ಬಳಿಕ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತು~ ಎಂದಿದ್ದಾರೆ.

ಮಾಸ್ಟರ್ ಬ್ಲಾಷ್ಟರ್ ಸಚಿನ್ ತೆಂಡೂಲ್ಕರ್ ಅವರು ಪ್ರತಿ ವರ್ಷ ಈ ಪ್ರತಿಷ್ಠಿತ ಟೆನಿಸ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಆಲ್ ಇಂಗ್ಲೆಂಡ್ ಕ್ಲಬ್‌ಗೆ ಆಗಮಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.