ADVERTISEMENT

ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ರಾಹುಲ್ ಅಜೇಯ ಶತಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2013, 19:59 IST
Last Updated 26 ಫೆಬ್ರುವರಿ 2013, 19:59 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ವಿಶಾಖಪಟ್ಟಣ (ಪಿಟಿಐ): ಕೆ.ಎಲ್. ರಾಹುಲ್ (104) ಗಳಿಸಿದ ಅಜೇಯ ಶತಕದ ನೆರವಿನಿಂದ ಉತ್ತರ ಪ್ರದೇಶ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಕರ್ನಾಟಕ ತಂಡದವರು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಎಸಿಎ- ವಿಡಿಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಉತ್ತರ ಪ್ರದೇಶ 45.2 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟಾಯಿತು. ಎಚ್.ಎಸ್. ಶರತ್ (46ಕ್ಕೆ 3) ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಲ್ಲಿನ ಪಿಚ್‌ನಲ್ಲಿ ಬ್ಯಾಟಿಂಗ್ ಕಷ್ಟಕರವಾದರೂ ಕರ್ನಾಟಕ  47.3 ಓವರ್‌ಗಳಲ್ಲಿ 3 ವಿಕೆಟ್‌ಗೆ 197 ರನ್ ಗಳಿಸಿ ಜಯ ಸಾಧಿಸಿತು. ಗುರುವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಆರ್. ವಿನಯ್ ಕುಮಾರ್ ಬಳಗ ಬಂಗಾಳ ವಿರುದ್ಧ ಪೈಪೋಟಿ ನಡೆಸಲಿದೆ.

ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ರಾಬಿನ್ ಉತ್ತಪ್ಪ (12) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ರಾಹುಲ್ ಮತ್ತು ಗಣೇಶ್ ಸತೀಶ್ (53, 90 ಎಸೆತ, 5 ಬೌಂ) ಎರಡನೇ ವಿಕೆಟ್‌ಗೆ 119 ರನ್ ಸೇರಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ತಾಳ್ಮೆಯ ಆಟವಾಡಿದ ರಾಹುಲ್ 152 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಮನೀಷ್ ಪಾಂಡೆ 18 ರನ್ ಗಳಿಸಿ ಔಟಾದರು. ರಾಹುಲ್ ಹಾಗೂ ಸಿ.ಎಂ. ಗೌತಮ್ (3) ಗೆಲುವಿನ ವ್ಯವಹಾರ ಪೂರ್ಣಗೊಳಿಸಿದರು.

ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ನಾಯಕನ ಈ ನಿರ್ಧಾರವನ್ನು ತಂಡದ ಬೌಲರ್‌ಗಳು ಸಮರ್ಥಿಸಿಕೊಂಡರು. ಶರತ್, ವಿನಯ್ ಹಾಗೂ ಮಿಥುನ್ ಶಿಸ್ತಿನ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಮೊಹಮ್ಮದ್ ಕೈಫ್ (37) ಉತ್ತರ ಪ್ರದೇಶ ತಂಡದ `ಗರಿಷ್ಠ ಸ್ಕೋರರ್' ಎನಿಸಿಕೊಂಡರೆ, ನಾಯಕ ಸುರೇಶ್ ರೈನಾ 13 ರನ್‌ಗಳಿಸಿ ಔಟಾದರು. ಶರತ್‌ಗೆ ಉತ್ತಮ ಸಾಥ್ ನೀಡಿದ ಕೆ.ಪಿ. ಅಪ್ಪಣ್ಣ 42 ರನ್‌ಗಳಿಗೆ ಎರಡು ವಿಕೆಟ್ ಪಡೆದರು.

ಅಸ್ಸಾಂಗೆ ಜಯ: ಮಂಗಳವಾರ ನಡೆದ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಸ್ಸಾಂ ತಂಡ ನಾಲ್ಕು ವಿಕೆಟ್‌ಗಳಿಂದ ಮಧ್ಯಪ್ರದೇಶ ವಿರುದ್ಧ ಅಚ್ಚರಿಯ ಗೆಲುವು ಪಡೆಯಿತು.

ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ 48.4 ಓವರ್‌ಗಳಲ್ಲಿ 210 ರನ್‌ಗಳಿಗೆ ಆಲೌಟಾಯಿತು. ಅಸ್ಸಾಂ 45.5 ಓವರ್‌ಗಳಲ್ಲಿ 6 ವಿಕೆಟ್‌ಗೆ 211 ರನ್ ಗಳಿಸಿ ಜಯ ಸಾಧಿಸಿತು. ಅಜೇಯ 97 ರನ್ ಗಳಿಸಿದ ಶಿವ ಶಂಕರ್ ರಾಯ್ ಗೆಲುವಿನ ರೂವಾರಿ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ಉತ್ತರ ಪ್ರದೇಶ: 45.2 ಓವರ್‌ಗಳಲ್ಲಿ 194 (ಪ್ರಶಾಂತ್ ಗುಪ್ತಾ 34, ಮೊಹಮ್ಮದ್ ಕೈಫ್ 37, ಸುರೇಶ್ ರೈನಾ 13, ಆರಿಷ್ ಆಲಂ 26, ಆಕಾಶ್‌ದೀಪ್ ನಾಥ್ 29, ಎಚ್.ಎಸ್. ಶರತ್ 46ಕ್ಕೆ 3, ಕೆ.ಪಿ. ಅಪ್ಪಣ್ಣ 42ಕ್ಕೆ 2, ಆರ್. ವಿನಯ್ ಕುಮಾರ್ 23ಕ್ಕೆ 1, ಅಭಿಮನ್ಯು ಮಿಥುನ್ 34ಕ್ಕೆ 1, ಗಣೇಶ್ ಸತೀಶ್ 23ಕ್ಕೆ 1) ಕರ್ನಾಟಕ: 47.3 ಓವರ್‌ಗಳಲ್ಲಿ 3 ವಿಕೆಟ್‌ಗೆ 197 (ಕೆ.ಎಲ್. ರಾಹುಲ್ ಔಟಾಗದೆ 104, ರಾಬಿನ್ ಉತ್ತಪ್ಪ 12, ಗಣೇಶ್ ಸತೀಶ್ 53, ಮನೀಷ್ ಪಾಂಡೆ 18, ಇಮ್ತಿಯಾಜ್ ಅಹ್ಮದ್ 52ಕ್ಕೆ 2)

ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್ ಜಯ; ಕ್ವಾರ್ಟರ್ ಫೈನಲ್ ಪ್ರವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.