ADVERTISEMENT

ಕ್ವಾರ್ಟರ್ ಫೈನಲ್‌ಗೆ ಗ್ರೀಸ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST

ವಾರ್ಸಾ (ರಾಯಿಟರ್ಸ್): ಅಧಿಕಾರಯುತ ಪ್ರದರ್ಶನ ನೀಡಿದ ಗ್ರೀಸ್ ಮತ್ತು ಜೆಕ್ ಗಣರಾಜ್ಯ ತಂಡಗಳು ಯೂರೊ -2012 ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು. ಅಂತಿಮ ಪಂದ್ಯದಲ್ಲಿ ಸೋಲು ಅನುಭವಿಸಿದ ರಷ್ಯಾ ಹಾಗೂ ಆತಿಥೇಯ ಪೋಲೆಂಡ್ ಟೂರ್ನಿಯಿಂದ ಹೊರಬಿತ್ತು.

ವಾರ್ಸಾದ ನ್ಯಾಷನಲ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ `ಎ~ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಗ್ರೀಸ್ 1-0 ಗೋಲಿನಿಂದ ರಷ್ಯಾ ತಂಡವನ್ನು ಮಣಿಸಿತು. ರೋಕ್ಲಾದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಜೆಕ್ ಗಣರಾಜ್ಯ ಇದೇ ಅಂತರದಲ್ಲಿ ಪೋಲೆಂಡ್ ವಿರುದ್ಧ ಜಯ ಪಡೆಯಿತು.

ಒಟ್ಟು ಆರು ಪಾಯಿಂಟ್ ಕಲೆಹಾಕಿದ ಜೆಕ್ ಗಣರಾಜ್ಯ ತಂಡ `ಎ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಎಂಟರಘಟ್ಟ ಪ್ರವೇಶಿಸಿದರೆ, ನಾಲ್ಕು ಪಾಯಿಂಟ್ ಪಡೆದ ಗ್ರೀಸ್ ಎರಡನೇ ತಂಡವಾಗಿ ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿತು. ರಷ್ಯಾದ ಬಳಿ ನಾಲ್ಕು ಪಾಯಿಂಟ್‌ಗಳಿದ್ದರೂ, ಮೂರನೇ ಸ್ಥಾನಕ್ಕೆ ಕುಸಿತ ಕಂಡು ಟೂರ್ನಿಯಿಂದ ಹೊರಬಿತ್ತು. ಎರಡು ಪಾಯಿಂಟ್ ಕಲೆಹಾಕಿದ ಪೋಲೆಂಡ್ ಕೂಡಾ ನಿರ್ಗಮಿಸಿತು.

ರಷ್ಯಾ ತಂಡ ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಗಿಟ್ಟಿಸುತ್ತಿತ್ತು. ಆದರೆ ಗ್ರೀಸ್ ಅದಕ್ಕೆ ಅವಕಾಶ ನೀಡಲಿಲ್ಲ. ಪಂದ್ಯದ ಮೊದಲಾರ್ಧದ ಹೆಚ್ಚುವರಿ ಅವಧಿಯಲ್ಲಿ (45+2) ನಾಯಕ ಗಿಗೋಸ್ ಕರಾಗೊನಿಸ್ ಅವರು ಗ್ರೀಸ್ ತಂಡಕ್ಕೆ ಗೆಲುವಿನ ಗೋಲು ತಂದಿತ್ತರು.

2004 ರಲ್ಲಿ ಚಾಂಪಿಯನ್ ಆಗಿದ್ದ ಗ್ರೀಸ್ ಮೊದಲ ಎರಡು ಪಂದ್ಯಗಳಲ್ಲಿ ಕೇವಲ ಒಂದು ಪಾಯಿಂಟ್ ಕಲೆಹಾಕಿತ್ತು. ಮಾತ್ರವಲ್ಲ ಈ ತಂಡ ನಾಕೌಟ್ ಹಂತ ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿತಲ್ಲದೆ, ಬಲಿಷ್ಠ ರಷ್ಯಾವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.

`ಈ ರಾತ್ರಿಯನ್ನು ಮರೆಯಲು ಸಾಧ್ಯವಿಲ್ಲ. ಇದು ನಮಗೆ ವಿಶೇಷವಾದುದು. ಗ್ರೀಕ್ ಜನತೆಗೆ ಸಂತಸದ ಕ್ಷಣ ಇದು~ ಎಂದು  ಕರಾಗೊನಿಸ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ. `ಡ್ರಾ ಸಾಧಿಸುವುದು ನಮ್ಮ ಉದ್ದೇಶ ಆಗಿರಲಿಲ್ಲ. ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿದಿದ್ದೆವು. ಆದರೆ ನಮ್ಮ ಲೆಕ್ಕಾಚಾರ ತಲೆಕೆಳಗಾಯಿತು. ಸೋಲು ಅನುಭವಿಸಿದರೂ ನಾವು ಮೊದಲ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ~ ಎಂದು ರಷ್ಯಾದ ಕೋಚ್ ಡಿಕ್ ಅಡ್ವೊಕಾಟ್ ನುಡಿದಿದ್ದಾರೆ.

ಪೋಲೆಂಡ್‌ಗೆ ನಿರಾಸೆ: ರೋಕ್ಲಾದಲ್ಲಿ ನಡೆದ ಪಂದ್ಯದಲ್ಲಿ ಪೋಲೆಂಡ್ ಸೋಲು ಅನುಭವಿಸಿದ ಕಾರಣ ಆತಿಥೇಯ ದೇಶದ ಅಭಿಮಾನಿಗಳು ನಿರಾಸೆಯಲ್ಲಿ ಮುಳುಗಿದರು. ಪೆಟ್ರ್ ಜಿರಾಸೆಕ್ 72ನೇ ನಿಮಿಷದಲ್ಲಿ ಜೆಕ್ ಗಣರಾಜ್ಯ ತಂಡಕ್ಕೆ ಗೆಲುವಿನ ಗೋಲು ತಂದಿತ್ತರು.

ಗೋಲು ಗಳಿಸುವ ಹಲವು ಅತ್ಯುತ್ತಮ ಅವಕಾಶಗಳನ್ನು ಕಳೆದುಕೊಂಡ ಪೋಲೆಂಡ್ ಸೋಲಿನ ಹಾದಿ ಹಿಡಿಯಿತು. ಕಳೆದ ಎರಡು ಪಂದ್ಯಗಳಲ್ಲೂ ಪೋಲೆಂಡ್ ಇದೇ ಸಮಸ್ಯೆ ಎದುರಿಸಿತ್ತು. ಪಂದ್ಯದ ಮೊದಲ ಅವಧಿಯ ಆಟ ಮಳೆಯಲ್ಲೇ ನಡೆಯಿತು. ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಪೋಲೆಂಡ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.
 

ಈ ಕಾರಣ ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿತು. ಆದರೆ ಎದುರಾಳಿ ತಂಡದ ಗೋಲ್‌ಕೀಪರ್ ಹಾಗೂ ಡಿಫೆಂಡರ್‌ಗಳು ತಡೆಗೋಡೆಯಾಗಿ ಪರಿಣಮಿಸಿದರು.

1976 ರಲ್ಲಿ ಯೂರೊ ಚಾಂಪಿಯನ್ ಆಗಿದ್ದ ಜೆಕ್ ಗಣರಾಜ್ಯ ತಂಡ ಕೂಡಾ ಮೇಲಿಂದ ಮೇಲೆ ಗೋಲು ಗಳಿಸುವ ಪ್ರಯತ್ನ ನಡೆಸಿತು. 72ನೇ ನಿಮಿಷದಲ್ಲಿ ಜೆಕ್ ತಂಡ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾಯಿತು. ಮಿಲಾನ್ ಬಾರೊಸ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಜಿರಾಸೆಕ್ ಎದುರಾಳಿ ಗೋಲಿ ಟೈಟಾನ್ ಅವರನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಇಂದಿನ ಪಂದ್ಯ

ADVERTISEMENT

ಕ್ರೊವೇಷಿಯ-ಸ್ಪೇನ್ (ಸಿ ಗುಂಪು)

ಇಟಲಿ-ಐರ್ಲೆಂಡ್ (ಸಿ ಗುಂಪು)

ಭಾರತೀಯ ಕಾಲಮಾನ

ಮಧ್ಯರಾತ್ರಿ: 12.15ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.