ADVERTISEMENT

ಗುಡುಗಿದ ಗೇಲ್, ನಡುಗಿದ ರೈಡರ್ಸ್

ಯುಗಾದಿ ದಿನ ಆರ್‌ಸಿಬಿಗೆ ಬೆಲ್ಲ, ಗೌತಮ್ ಗಂಭೀರ್ ಬಳಗಕ್ಕೆ ಬೇವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಬೆಂಗಳೂರು: ಕ್ರಿಸ್ ಗೇಲ್ ಅಬ್ಬರಕ್ಕೆ ಮತ್ತೊಂದು ತಂಡ ಕೊಚ್ಚಿಕೊಂಡು ಹೋಗಿದೆ. ಈ ಬಾರಿ ಚಚ್ಚಿಸಿಕೊಂಡದ್ದು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್). ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ವೆಸ್ಟ್ ಇಂಡೀಸ್‌ನ ಆಟಗಾರನ ದರ್ಬಾರ್ ಮುಂದುವರಿದಿದೆ.

ಗೇಲ್ (ಅಜೇಯ 85, 50 ಎಸೆತ, 4 ಬೌಂ, 9 ಸಿಕ್ಸರ್) ಕಟ್ಟಿದ ಸುಂದರ ಇನಿಂಗ್ಸ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗುರುವಾರ ಒಲಿದದ್ದು ಎಂಟು ವಿಕೆಟ್‌ಗಳ ಗೆಲುವು. ಯುಗಾದಿಯ ರಜೆಯಿದ್ದ ಕಾರಣ ನಿರೀಕ್ಷೆಯಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣ ತುಂಬಿ ತುಳುಕಿತ್ತು. ಗೇಲ್ ಎಲ್ಲರಿಗೂ ಬೆಲ್ಲದ ಸಿಹಿ ನೀಡಿದರೆ, ಕೋಲ್ಕತ್ತಕ್ಕೆ ಮರೆಯಲಾಗದ ಕಹಿ ಅನುಭವ ಉಂಟಾಗಿದೆ.

ಗೌತಮ್ ಗಂಭೀರ್ ನೇತೃತ್ವದ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕಲೆಹಾಕಿದ 154 ರನ್‌ಗಳು ಗೇಲ್ ಅಬ್ಬರದ ಮುಂದೆ ಸಣ್ಣದಾಗಿ ಕಂಡಿತು. ಆರ್‌ಸಿಬಿ 2 ವಿಕೆಟ್‌ಗೆ 158 ರನ್ ಗಳಿಸಿ ಜಯ ಸಾಧಿಸಿದಾಗ ಇನ್ನೂ 15 ಎಸೆತಗಳು ಬಾಕಿಯಿದ್ದವು.

30 ಸಾವಿರಕ್ಕೂ ಅಧಿಕ ಮಂದಿ ಒಕ್ಕೊರಲಿನಿಂದ `ವಿ ವಾಂಟ್ ಸಿಕ್ಸರ್' ಎಂದು ಕೇಳಿದಾಗ ಗೇಲ್ ಸುಮ್ಮನಿರಲಿಲ್ಲ. ಒಂದಲ್ಲ... ಎರಡಲ್ಲ... ಒಟ್ಟು ಒಂಬತ್ತು ಸಿಕ್ಸರ್‌ಗಳನ್ನು ಸಿಡಿಸಿದರು. ಹೆಚ್ಚು ಕಡಿಮೆ ಎಲ್ಲ ಸ್ಟ್ಯಾಂಡ್‌ಗಳಲ್ಲಿದ್ದ ಪ್ರೇಕ್ಷಕರಿಗೆ ಚೆಂಡನ್ನು ಹತ್ತಿರದಿಂದ ನೋಡುವ ಅದೃಷ್ಟ ದೊರೆಯಿತು. ಗೇಲ್ ಇಡೀ ಅಂಗಳವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಂತೆ ಭಾಸವಾಗುತಿತ್ತು. ತಮ್ಮ ಎದೆಯ ಎತ್ತರದಲ್ಲಿ ಬರುತ್ತಿದ್ದ ಚೆಂಡುಗಳನ್ನೂ ಲೀಲಾಜಾಲವಾಗಿ ಗ್ಯಾಲರಿಗೆ ಕಳುಹಿಸುತ್ತಿದ್ದರು.

ಮುಂಬೈ ಇಂಡಿಯನ್ಸ್ ವಿರುದ್ಧವೂ ಗೇಲ್ ಇಂತಹದೇ ಸ್ಫೋಟಕ ಇನಿಂಗ್ಸ್ ಕಟ್ಟಿದ್ದರು. ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ ಮಯಂಕ್ ಅಗರ್‌ವಾಲ್ (6) ಅವರನ್ನು ಬೇಗನೇ ಕಳೆದುಕೊಂಡಿತು. ಜಾಕ್ ಕಾಲಿಸ್ ಎಸೆದ ನಾಲ್ಕನೇ ಓವರ್ ಮೇಡನ್ ಆಯಿತು. ಸುನಿಲ್ ನಾರಾಯಣ್ ಮುಂದಿನ ಓವರ್‌ನಲ್ಲಿ  2 ರನ್ ಮಾತ್ರ ನೀಡಿದರು.

ಇದರಿಂದ ಚಾಲೆಂಜರ್ಸ್ ಐದು ಓವರ್‌ಗಳ ಕೊನೆಗೆ ಒಂದು ವಿಕೆಟ್‌ಗೆ 21 ರನ್ ಗಳಿಸಿತ್ತು. ಈ ಹಂತದಲ್ಲಿ ರೈಡರ್ಸ್ ಗೆಲುವಿನ ಕನಸು ಕಾಣತೊಡಗಿದ್ದು ನಿಜ. ಆದರೆ ಆರನೇ ಓವರ್ ಬಳಿಕ ರನ್ ಹರಿಯತೊಡಗಿತು. ರ‌್ಯಾನ್ ಮೆಕ್‌ಲಾರೆನ್ ಎಸೆದ ಈ ಓವರ್‌ನಲ್ಲಿ ಕೊಹ್ಲಿ ಎರಡು ಬೌಂಡರಿ ಗಿಟ್ಟಿಸಿದರೆ, ಗೇಲ್ ಎರಡು ಸಿಕ್ಸರ್ ಸಿಡಿಸಿದರು. ಆ ಓವರ್‌ನಲ್ಲಿ 22 ರನ್‌ಗಳು ಬಂದವು. ಪಂದ್ಯ ಆರ್‌ಸಿಬಿಯತ್ತ ವಾಲಿತು.

ಗೇಲ್ ಮತ್ತು ಕೊಹ್ಲಿ (35, 27 ಎಸೆತ, 4 ಬೌಂ, 2 ಸಿಕ್ಸರ್) ಎರಡನೇ ವಿಕೆಟ್‌ಗೆ 6.4 ಓವರ್‌ಗಳಲ್ಲಿ 63 ಸೇರಿಸಿದರು. ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಕೊಹ್ಲಿ ಅವರು ಗಂಭೀರ್ ಮಾತಿನ ಚಕಮಕಿ ನಡೆಸಿದ್ದು, ವಾತಾವರಣವನ್ನು ಮತ್ತಷ್ಟು ಬೆಚ್ಚಗಾಗಿಸಿತು.

ಕೊನೆಯ ಐದು ಓವರ್‌ಗಳಲ್ಲಿ ಆರ್‌ಸಿಬಿಗೆ 38 ರನ್‌ಗಳು ಬೇಕಿದ್ದವು. ಕಾಲಿಸ್ ಎಸೆದ 16ನೇ ಓವರ್‌ನಲ್ಲಿ 17 ರನ್ ಕಲೆಹಾಕಿದ ಗೇಲ್ ಗೆಲುವನ್ನು ಖಚಿತಪಡಿಸಿಕೊಂಡರು. ಗೇಲ್ ಹಾಗೂ ಎಬಿ ಡಿವಿಲಿಯರ್ಸ್ (ಅಜೇಯ 22) ಮುರಿಯದ ಮೂರನೇ ವಿಕೆಟ್‌ಗೆ 83 ರನ್ (51 ಎಸೆತ) ಜೊತೆಯಾಟ ನೀಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಲ್ ಮತ್ತು ಕೊಹ್ಲಿ ಸರದಿಯಂತೆ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೇಲ್ (ಅಜೇಯ 92) ಮಿಂಚಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ಎದುರು ಕೊಹ್ಲಿ (ಅಜೇಯ 93) `ಕಮಾಲ್' ತೋರಿದ್ದರು. ಇದೀಗ ಮತ್ತೆ ಗೇಲ್ ಸಿಡಿದು ನಿಂತಿದ್ದಾರೆ.

ಗಂಭೀರ್ ಆಸರೆ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನೈಟ್ ರೈಡರ್ಸ್ ಆಟಗಾರರಿಂದ ಅಬ್ಬರದ ಪ್ರದರ್ಶನ ಕಂಡುಬರಲಿಲ್ಲ. ಗೌತಮ್ ಗಂಭೀರ್ 59 (46 ಎಸೆತ, 7 ಬೌಂ, 1 ಸಿಕ್ಸರ್) ತೋರಿದ ಹೋರಾಟದಿಂದಾಗಿ ತಂಡದ ಮೊತ್ತ 150ರ ಗಡಿದಾಟಿತು.

ಮನ್ವಿಂದರ್ ಬಿಸ್ಲಾ (1) ಅವರನ್ನು ಬೇಗನೇ ಪೆವಿಲಿಯನ್‌ಗಟ್ಟಿದ ಮೋಸೆಸ್ ಹೆನ್ರಿಕ್ಸ್ ಆರ್‌ಸಿಬಿಗೆ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಗಿದ್ದರು. ಎರಡನೇ ವಿಕೆಟ್‌ಗೆ ಗಂಭೀರ್ ಮತ್ತು ಕಾಲಿಸ್ (16) ನಡುವೆ 7.1 ಓವರ್‌ಗಳಲ್ಲಿ 51 ರನ್‌ಗಳ ಜೊತೆಯಾಟ ಮೂಡಿಬಂತು. ಆ ಬಳಿಕ ಗಂಭೀರ್ ಮೂರನೇ ವಿಕೆಟ್‌ಗೆ ಯೂಸುಫ್ ಪಠಾಣ್ (27 ರನ್, 17 ಎಸೆತ, 3 ಬೌಂ, 1 ಸಿಕ್ಸರ್) ಜೊತೆ 41 ರನ್ ಸೇರಿಸಿದರು.

ಪಠಾಣ್ ತಾವೆದುರಿಸಿದ ಮೊದಲ ಮೂರು ಎಸೆತಗಳನ್ನು ಬೌಂಡರಿಗಟ್ಟಿ ಅಪಾಯದ ಸೂಚನೆ ನೀಡಿದ್ದರಾದರೂ, ಹೆಚ್ಚು ಹೊತ್ತು ನಿಲ್ಲಲಿಲ್ಲ. ಕಾಲಿಸ್ ಮತ್ತು ಪಠಾಣ್ ಪರಿಸ್ಥಿತಿಗೆ ಹೊಂದಿಕೊಂಡ ಸಂದರ್ಭದಲ್ಲೇ ಔಟಾದದ್ದು ರೈಡರ್ಸ್‌ಗೆ ಹಿನ್ನಡೆ ಉಂಟುಮಾಡಿತು. ಇದರಿಂದ ಗಂಭೀರ್‌ಗೆ ಮತ್ತೊಂದು ಬದಿಯಲ್ಲಿ ಒತ್ತಡದಲ್ಲೇ ಆಡಬೇಕಾಯಿತು.

16ನೇ ಓವರ್ ಕೊನೆಗೊಂಡಾಗ ತಂಡ ಮೂರು ವಿಕೆಟ್‌ಗೆ 123 ರನ್ ಗಳಿಸಿತ್ತು. ಆದರೆ ಅಂತಿಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಹೋಯಿತು. ಇದರಿಂದ ರನ್‌ವೇಗ ಹೆಚ್ಚಿಸಲು ಆಗಲಿಲ್ಲ.

ಆರ್‌ಸಿಬಿ ಫೀಲ್ಡಿಂಗ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಓವರ್ ಥ್ರೋ ಮೂಲಕ ಎದುರಾಳಿಗೆ ಎರಡು ಬೌಂಡರಿಗಳನ್ನು ನೀಡಿತು. ಆದರೆ ತಂಡ ಗೆದ್ದ ಕಾರಣ ಈ ಲೋಪ ಎದ್ದುಕಾಣಲಿಲ್ಲ.

ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 154
ಮನ್ವಿಂದರ್ ಬಿಸ್ಲಾ ಸಿ ರಾಹುಲ್ ಬಿ ಮೋಸೆಸ್ ಹೆನ್ರಿಕ್ಸ್  01
ಗೌತಮ್ ಗಂಭೀರ್ ಸಿ ಮತ್ತು ಬಿ ಆರ್. ವಿನಯ್ ಕುಮಾರ್ 59
ಜಾಕ್ ಕಾಲಿಸ್ ಸಿ ಹೆನ್ರಿಕ್ಸ್ ಬಿ. ಆರ್. ವಿನಯ್ ಕುಮಾರ್  16
ಯೂಸುಫ್ ಪಠಾಣ್ ಸಿ ವಿನಯ್ ಬಿ ಮೋಸೆಸ್ ಹೆನ್ರಿಕ್ಸ್  27
ಮನೋಜ್ ತಿವಾರಿ ಸಿ ಡಿವಿಲಿಯರ್ಸ್ ಬಿ ಆರ್.ಪಿ. ಸಿಂಗ್  23
ಎಯೊನ್ ಮಾರ್ಗನ್ ಸಿ ಕ್ರಿಸ್ಟಿಯನ್ (ಸಬ್) ಆರ್.ಪಿ. ಸಿಂಗ್ 02
ರಜತ್ ಭಾಟಿಯಾ ಬಿ ಆರ್.ಪಿ. ಸಿಂಗ್  13
ರ‌್ಯಾನ್ ಮೆಕ್‌ಲಾರೆನ್ ರನೌಟ್  02
ಪ್ರದೀಪ್ ಸಾಂಗ್ವಾನ್ ಔಟಾಗದೆ  04
ಸುನಿಲ್ ನಾರಾಯಣ್ ಔಟಾಗದೆ  01
ಇತರೆ: (ಲೆಗ್‌ಬೈ-3, ನೋಬಾಲ್-1, ವೈಡ್-2)  06
ವಿಕೆಟ್ ಪತನ: 1-3 (ಬಿಸ್ಲಾ; 0.6), 2-54 (ಕಾಲಿಸ್: 8.1), 3- 95 (ಪಠಾಣ್; 12.5), 4-124 (ಗಂಭೀರ್; 16.2), 5-132 (ಮಾರ್ಗನ್; 17.2), 6-135 (ತಿವಾರಿ; 17.6), 7-149 (ಮೆಕ್‌ಲಾರೆನ್; 19.2), 8-149 (ಭಾಟಿಯಾ; 19.3)
ಬೌಲಿಂಗ್: ಮೋಸೆಸ್ ಹೆನ್ರಿಕ್ಸ್ 4-0-24-2, ಆರ್.ಪಿ. ಸಿಂಗ್ 4-0-27-3, ಜೈದೇವ್ ಉನದ್ಕತ್ 4-0-34-0, ಮುತ್ತಯ್ಯ ಮುರಳೀಧರನ್ 4-0-30-0, ಆರ್. ವಿನಯ್ ಕುಮಾರ್ 4-0-36-2
ರಾಯಲ್ ಚಾಲೆಂಜರ್ಸ್ ಬೆಂಗಳೂರು: 17.3 ಓವರ್‌ಗಳಲ್ಲಿ
2 ವಿಕೆಟ್‌ಗೆ 158
ಕ್ರಿಸ್ ಗೇಲ್ ಔಟಾಗದೆ  85
ಮಯಂಕ್ ಅಗರ್‌ವಾಲ್ ಸಿ ಬಿಸ್ಲಾ ಬಿ ರ‌್ಯಾನ್ ಮೆಕ್‌ಲಾರೆನ್ 06
ವಿರಾಟ್ ಕೊಹ್ಲಿ ಸಿ ಮಾರ್ಗನ್ ಬಿ ಲಕ್ಷ್ಮಿಪತಿ ಬಾಲಾಜಿ  35
ಎಬಿ ಡಿವಿಲಿಯರ್ಸ್ ಔಟಾಗದೆ  22
ಇತರೆ: (ನೋಬಾಲ್-2, ವೈಡ್-8)  10
ವಿಕೆಟ್ ಪತನ: 1-12 (ಮಯಂಕ್; 2.3), 2-75 (ವಿರಾಟ್‌ಕೊಹ್ಲಿ; 9.1)
ಬೌಲಿಂಗ್: ರ‌್ಯಾನ್ ಮೆಕ್‌ಲಾರೆನ್ 3-0-34-1, ಜಾಕ್ ಕಾಲಿಸ್ 4-1-30-1, ಸುನಿಲ್ ನಾರಾಯಣ್ 4-0-17-0, ಲಕ್ಷ್ಮಿಪತಿ ಬಾಲಾಜಿ 3.3-033-1, ಪ್ರದೀಪ್ ಸಾಂಗ್ವಾನ್ 2-0-34-0, ರಜತ್ ಭಾಟಿಯಾ 1-0-10-0
ಫಲಿತಾಂಶ: ಆರ್‌ಸಿಬಿಗೆ 8 ವಿಕೆಟ್ ಗೆಲುವು, ಪಂದ್ಯಶ್ರೇಷ್ಠ: ಗೇಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT