ADVERTISEMENT

ಗೆದ್ದ ತಂಡ ಸೆಮಿಫೈನಲ್‌ಗೆ

ಇಂದು ವಿಂಡೀಸ್-ದಕ್ಷಿಣ ಆಫ್ರಿಕಾ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ಕಾರ್ಡಿಫ್ (ಪಿಟಿಐ): ಇದು ಅಕ್ಷರಶಃ ಕ್ವಾರ್ಟರ್ ಫೈನಲ್ ಹೋರಾಟ. ಇಲ್ಲಿ ಗೆದ್ದ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಲಿದೆ. ಅಂಥ ಸವಾಲಿನೊಳಗೆ ಬಂದಿಯಾಗಿರುವ ತಂಡಗಳೆಂದರೆ   ವೆಸ್ಟ್‌ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ.

ಸೋಫಿಯಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ `ಬಿ' ಗುಂಪಿನ ಪಂದ್ಯದಲ್ಲಿ ವಿಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ಈ ಗುಂಪಿನಿಂದ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಹಾಗಾಗಿ ಸೆಮಿಫೈನಲ್‌ನ ಇನ್ನೊಂದು ಸ್ಥಾನಕ್ಕಾಗಿ ವಿಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ತಂಡಗಳು ತಲಾ ಒಂದು ಪಂದ್ಯದಲ್ಲಿ ಜಯಿಸಿವೆ.

ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿರುವ ಸೋಲುಕಂಡಿದ್ದ ದಕ್ಷಿಣ ಆಫ್ರಿಕಾ ನಂತರ ಪಾಕ್ ಎದುರು ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದೆ. ಮೊದಲ ಎರಡು ಪಂದ್ಯ ತಪ್ಪಿಸಿಕೊಂಡಿದ್ದ ವೇಗಿ ಡೇಲ್ ಸ್ಟೇಯ್ನ ಅಭ್ಯಾಸ ಶುರು ಮಾಡಿದ್ದಾರೆ. ಅವರು ಪಕ್ಕೆಲುಬು ನೋವಿನ ಕಾರಣ ಹೊರಗುಳಿದಿದ್ದರು. `ಮಾಡು ಇಲ್ಲವೇ ಮಡಿ' ಎನಿಸಿರುವ ಈ ಪಂದ್ಯಕ್ಕೆ ಸ್ಟೇಯ್ನ ಲಭ್ಯರಾಗುವ ನಿರೀಕ್ಷೆ ಇದೆ.

ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲನದಿಂದ ಕೂಡಿದೆ. ಹಾಶೀಮ್ ಆಮ್ಲಾ, ನಾಯಕ ಎಬಿ ಡಿವಿಲಿಯರ್ಸ್, ಫಾಫ್ ಡು ಪ್ಲೆಸಿಸ್ ಹಾಗೂ ಜೀನ್ ಪಾಲ್ ಡುಮಿನಿ ಅವರಂಥ ಸಮರ್ಥ ಬ್ಯಾಟ್ಸ್‌ಮನ್‌ಗಳಿದ್ದಾರೆ.

ಬೌಲಿಂಗ್‌ನಲ್ಲಿ ಸೊಸೊಬೆ, ರ‍್ಯಾನ್ ಹ್ಯಾರಿಸ್ ಇದ್ದಾರೆ. ಸ್ಟೇಯ್ನ ಕಣಕ್ಕಿಳಿದರೆ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ.

ಭಾರತ ವಿರುದ್ಧ ಸೋತು, ಪಾಕಿಸ್ತಾನ ಎದುರು ಗೆದ್ದಿರುವ ಕೆರಿಬಿಯನ್ ಬಳಗ ಅಪಾಯಕಾರಿ ತಂಡ. ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಪಂದ್ಯಕ್ಕೆ ತಿರುವು ನೀಡಬಲ್ಲ ಬ್ಯಾಟ್ಸ್‌ಮನ್. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಅವರ ಜಾದೂ ನಡೆದಿರಲಿಲ್ಲ.

ಈ ತಂಡದ ಆಲ್‌ರೌಂಡರ್ ಡರೆನ್ ಸಮಿ ಕೂಡ ಅಪಾಯಕಾರಿ ಬ್ಯಾಟ್ಸ್‌ಮನ್. ಕೀರನ್ ಪೊಲಾರ್ಡ್ ಬಿರುಸಿನ ಆಟವಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಭಾರತ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅವರು ತೋರಿದ ಪ್ರದರ್ಶನವೇ ಅದಕ್ಕೆ ಸಾಕ್ಷಿ. ಬೌಲಿಂಗ್‌ನಲ್ಲಿ ಆಫ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರ ಮೇಲೆ ತಂಡ ಹೆಚ್ಚು ನಂಬಿಕೆ ಇಟ್ಟಿದೆ.

ತಂಡಗಳು ಇಂತಿವೆ:
ದಕ್ಷಿಣ ಆಫ್ರಿಕಾ: ಎ.ಬಿ. ಡಿವಿಲಿಯರ್ಸ್ (ನಾಯಕ), ಹಾಶಿಮ್ ಆಮ್ಲಾ, ಫರ್ಹಾನ್ ಬೆಹರ್ಡಿಯನ್, ಜೇನ್ ಪಾಲ್ ಡುಮಿನಿ, ಫಾಫು ಡು ಪ್ಲೆಸಿಸ್, ಕಾಲಿನ್ ಇನ್‌ಗ್ರಾಮ್, ರೊರಿ ಕ್ಲೈನ್‌ವೆಲ್ಟ್, ರ‍್ಯಾನ್ ಮೆಕ್‌ಲಾರೆನ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕೆಲ್, ಅಲ್ವಿರೊ ಪೀಟರ್ಸನ್, ರಾಬಿನ್ ಪೀಟರ್ಸನ್, ಆ್ಯರನ್ ಫಂಗಿಸೊ, ಡೇಲ್ ಸ್ಟೇಯ್ನ ಮತ್ತು ಲೊವೊಬೊ ಸೊಸೊಬೆ.

ವೆಸ್ಟ್‌ಇಂಡೀಸ್: ಡ್ವೇನ್ ಬ್ರಾವೊ (ನಾಯಕ), ಕ್ರಿಸ್   ಗೇಲ್, ಜಾನ್ಸನ್ ಚಾರ್ಲ್ಸ್, ಡರೆನ್ ಬ್ರಾವೊ, ಮಾರ್ಲೊನ್ ಸ್ಯಾಮುಯೆಲ್ಸ್, ಕೀರನ್ ಪೊಲಾರ್ಡ್, ರಾಮನರೇಶ್ ಸರವಣ, ಡರೆನ್ ಸಮಿ, ಕೆಮರ್ ರೋಚ್, ಸುನಿಲ್ ನಾರಾಯಣ್, ರವಿ ರಾಂಪಾಲ್, ದೆನೇಶ್ ರಾಮ್ದಿನ್, ಟಿನೊ ಬೆಸ್ಟ್ ಮತ್ತು ಡೆವೋನ್ ಸ್ಮಿತ್.
  
ಪಂದ್ಯ ಆರಂಭ: ಮಧ್ಯಾಹ್ನ 3.00ಕ್ಕೆ.         (ಭಾರತೀಯ ಕಾಲಮಾನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.