ಕೋಲ್ಕತ್ತ: ರಣಜಿ ಮತ್ತು ಇರಾನಿ ಕಪ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಕರ್ನಾಟಕ ತಂಡ ಮಂಗಳವಾರ ನಡೆಯಲಿರುವ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗುಜರಾತ್ ಸವಾಲನ್ನು ಎದುರಿಸಲಿದೆ. ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದರೂ, ಉತ್ತಮ ಪ್ರದರ್ಶನ ತೋರಿತ್ತು. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದಿತ್ತು.
ಫೈನಲ್‌ನಲ್ಲಿ ತಮಿಳುನಾಡು ಎದುರು ಸೋಲು ಕಂಡಿತ್ತು. ಈಗಾಗಲೇ ಎರಡು ಪ್ರಶಸ್ತಿ (ರಣಜಿ ಮತ್ತು ಇರಾನಿ ಕಪ್) ಜಯಿಸಿರುವ ಕರ್ನಾಟಕ ವರ್ಷದ ದೇಶಿಯ ಋತುವಿನಲ್ಲಿ ಮೂರನೇ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಈ ಸಲದ ರಣಜಿಯಲ್ಲಿ ಕರ್ನಾಟಕ ಮತ್ತು ಗುಜರಾತ್ ಮುಖಾಮುಖಿಯಾಗಿದ್ದವು. ಬೆಂಗಳೂರಿನಲ್ಲಿ ನಡೆದಿದ್ದ ಆ ಪಂದ್ಯ ಡ್ರಾ ಆಗಿತ್ತು.
ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕರ್ನಾಟಕ ತಂಡ ವಿಜಯ್ ಹಜಾರೆ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಅದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂ ಗಣದಲ್ಲಿ ಅಭ್ಯಾಸ ನಡೆಸಿತ್ತು.
ತಪ್ಪು ತಿದ್ದಿಕೊಂಡಿದ್ದೇನೆ: ‘ರಣಜಿಯಲ್ಲಿ ತೋರಿದ ಪ್ರದರ್ಶನವನ್ನು ಸುಬ್ಬಯ್ಯ ಪಿಳ್ಳೈ ಟೂರ್ನಿಯಲ್ಲಿ ನೀಡಲು ಸಾಧ್ಯವಾಗಲಿಲ್ಲ. ರನ್ ಗಳಿಸುವಲ್ಲಿ ಎಲ್ಲಿ ಎಡವಿದ್ದೇನೆ ಎನ್ನುವುದು ಗೊತ್ತಾಗಿದೆ. ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ. ಸಾಕಷ್ಟು ಅಭ್ಯಾಸವನ್ನೂ ಮಾಡಿದ್ದೇನೆ’ ಎಂದು ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಹೇಳಿದರು.
‘ಪ್ರಜಾವಾಣಿ’ ಜೊತೆ ಮಾತನಾಡಿದ ರಾಹುಲ್, ‘ರಣಜಿ ಟೂರ್ನಿಯಲ್ಲಿ ತೋರಿದ ಹಾಗೆ ಇಲ್ಲಿಯೂ ಪ್ರದರ್ಶನ ತೋರುತ್ತೇವೆ. ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡಿ ಅಭ್ಯಾಸ ನಡೆಸಿದ್ದೇವೆ’ ಎಂದರು. ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ಈ ಸಲದ ರಣಜಿಯಲ್ಲಿ 10 ಪಂದ್ಯಗಳಿಂದ ಒಟ್ಟು 1033 ರನ್ ಕಲೆ ಹಾಕಿದ್ದಾರೆ.
ಹೋದ ವರ್ಷ ವಿಶಾಖ ಪಟ್ಟಣದಲ್ಲಿ ನಡೆದಿದ್ದ ವಿಜಯ ಹಜಾರೆ ಟೂರ್ನಿಯಲ್ಲಿ ದೆಹಲಿ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಅಸ್ಸಾಂ ಎದುರು 75 ರನ್ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.
ಪಂದ್ಯ ಆರಂಭ: ಬೆಳಿಗ್ಗೆ 8.45
ಕ್ವಾರ್ಟರ್ ಫೈನಲ್‌ಗೆ ಸರ್ವೀಸಸ್ ತಂಡ
ರಜತ್ ಪಾಲಿವಾಲ್ (112) ಅವರ ಶತಕದ ನೆರವಿನಿಂದ ಸರ್ವೀಸಸ್ ತಂಡ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಜಾಧವ್‌ಪುರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸರ್ವೀಸಸ್ ತಂಡ ವಿದರ್ಭ ಎದುರು ಒಂದು ವಿಕೆಟ್‌ನ ಗೆಲುವು ಸಾಧಿಸಿತು. ವಿದರ್ಭ 284 ರನ್‌ಗಳ ಸವಾಲಿನ ಗುರಿ ನೀಡಿದ್ದರೂ, ಸರ್ವೀಸಸ್ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆಯಿತು.ಈ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಎದುರು ಪೈಪೋಟಿ ನಡೆಸಲಿದೆ.
ಸಂಕ್ಷಿಪ್ತ ಸ್ಕೋರು: ವಿದರ್ಭ 50 ಓವರ್‌ಗಳಲ್ಲಿ 283ಕ್ಕೆ6. (ಶಲಭ್ ಶ್ರೀವಾತ್ಸವ್ 84, ಉರ್ವೇಶ್ ಪಟೇಲ್‌್ 59, ಅಭಿಷೇಕ್ ಸಕುಜಾ 43ಕ್ಕೆ2). ಸರ್ವೀಸಸ್‌್ 50 ಓವರ್‌ಗಳಲ್ಲಿ 286ಕ್ಕೆ9. (ರಜತ್ ಪಾಲಿವಾಲ್ 112, ಯಶ್‌ಪಾಲ್ ಸಿಂಗ್ 81; ಉಮೇಶ್ ಯಾದವ್ 54ಕ್ಕೆ3). ಫಲಿತಾಂಶ: ಸರ್ವೀಸಸ್‌ಗೆ 1 ವಿಕೆಟ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.