ADVERTISEMENT

ಗೆಲ್ಲುವ ಛಲವಿದೆ...

ಡೇವಿಸ್ ಕಪ್‌ಗೆ ಭಾರತದ ಆಟಗಾರರ ಕಠಿಣ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 18:02 IST
Last Updated 2 ಏಪ್ರಿಲ್ 2013, 18:02 IST
ಡೇವಿಸ್ ಕಪ್ ಟೆನಿಸ್ ಪಂದ್ಯಗಳಿಗೆ ಇನ್ನು ಎರಡು ದಿನಗಳಷ್ಟೇ ಬಾಕಿ. ಅದಕ್ಕಾಗಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಕೋರ್ಟ್‌ನಲ್ಲಿ ಭಾರತ ಹಾಗೂ ಇಂಡೊನೇಷ್ಯಾ ತಂಡಗಳ ಆಟಗಾರರ ತಾಲೀಮು ಮತ್ತಷ್ಟು ವೇಗ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಭಾರತದ ಲಿಯಾಂಡರ್ ಪೇಸ್, ಸೋಮದೇವ್ ದೇವ್‌ವರ್ಮನ್ ಹಾಗೂ ಆಟವಾಡದ ನಾಯಕ ಎಸ್.ಕೆ.ಮಿಶ್ರಾ ತಂತ್ರ ರೂಪಿಸುವಲ್ಲಿ ಮಗ್ನವಾಗಿದ್ದರು.  -ಚಿತ್ರಗಳು: ಆರ್.ಶ್ರೀಕಂಠ ಶರ್ಮ
ಡೇವಿಸ್ ಕಪ್ ಟೆನಿಸ್ ಪಂದ್ಯಗಳಿಗೆ ಇನ್ನು ಎರಡು ದಿನಗಳಷ್ಟೇ ಬಾಕಿ. ಅದಕ್ಕಾಗಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಕೋರ್ಟ್‌ನಲ್ಲಿ ಭಾರತ ಹಾಗೂ ಇಂಡೊನೇಷ್ಯಾ ತಂಡಗಳ ಆಟಗಾರರ ತಾಲೀಮು ಮತ್ತಷ್ಟು ವೇಗ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಭಾರತದ ಲಿಯಾಂಡರ್ ಪೇಸ್, ಸೋಮದೇವ್ ದೇವ್‌ವರ್ಮನ್ ಹಾಗೂ ಆಟವಾಡದ ನಾಯಕ ಎಸ್.ಕೆ.ಮಿಶ್ರಾ ತಂತ್ರ ರೂಪಿಸುವಲ್ಲಿ ಮಗ್ನವಾಗಿದ್ದರು. -ಚಿತ್ರಗಳು: ಆರ್.ಶ್ರೀಕಂಠ ಶರ್ಮ   

ಬೆಂಗಳೂರು: `ಹಿರಿಯ ಆಟಗಾರರಾದ ಸೋಮದೇವ್ ದೇವವರ್ಮನ್, ಲಿಯಾಂಡರ್ ಪೇಸ್ ನಮ್ಮ ಜೊತೆ ಇರುವುದರಿಂದ ಭಾರತ ತಂಡದ ವಿಶ್ವಾಸ ಹೆಚ್ಚಾಗಿದೆ. ಆದ್ದರಿಂದ ಡೇವಿಸ್ ಕಪ್ ಇಂಡೊನೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ನಮ್ಮದೇ' ಎಂದು ಯುವ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ಈ ಆಟಗಾರ 2009ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು. ಉದ್ಯಾನನಗನರಿಯಲ್ಲಿ ಏಪ್ರಿಲ್ 5ರಿಂದ 7ರ ವರೆಗೆ ಏಷ್ಯಾ ಓಸೀನಿಯಾ ಗುಂಪಿನ ಇಂಡೊನೇಷ್ಯಾ ವಿರುದ್ಧದ ಡೇವಿಸ್ ಕಪ್ ಪಂದ್ಯ ನಡೆಯಲಿದೆ. ಆದ್ದರಿಂದ ಮಂಗಳವಾರ ಭಾಂಬ್ರಿ ಕಠಿಣ ಅಭ್ಯಾಸ ನಡೆಸಿದರು.

ಯೂಕಿ ಕಳೆದ ವರ್ಷ ಎಟಿಪಿ ರ‍್ಯಾಂಕಿಂಗ್ ಪಟ್ಟಿಯಲ್ಲಿ 174ನೇ ಸ್ಥಾನ ಪಡೆದಿದ್ದರು. ಇದು ತಮ್ಮ ವೃತ್ತಿ ಜೀವನದಲ್ಲಿ ಪಡೆದ ಶ್ರೇಷ್ಠ ರ‍್ಯಾಂಕಿಂಗ್ ಇದಾಗಿತ್ತು. ಜೂನಿಯರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದ ಭಾಂಬ್ರಿ ಮೊಣಕಾಲು ನೋವಿನಿಂದ ಹಲವು ತಿಂಗಳು ಬಳಲಿದ್ದರು. ಆದ್ದರಿಂದ ಹೆಚ್ಚು ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪ್ರಸ್ತುತ 266ನೇ ರ‍್ಯಾಂಕ್‌ಗೆ ಕುಸಿತ ಕಂಡಿದ್ದಾರೆ.

`ನಾನೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಕಳೆದ ವರ್ಷ ಸಾಕಷ್ಟು ಅವಕಾಶಗಳು ಲಭಿಸಿದ್ದವು. ಆದರೆ, ಗಾಯದ ಸಮಸ್ಯೆ ಬಲವಾಗಿ ಕಾಡಿತು. ಈಗ ಚೇತರಿಸಿಕೊಂಡಿದ್ದೇನೆ. ಕೆಲ ತಿಂಗಳುಗಳಲ್ಲಿ ಮತ್ತೆ ಉತ್ತಮ ರ‍್ಯಾಂಕ್ ಪಡೆಯುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂಡೊನೇಷ್ಯಾ ಎದುರು ಸೋಮದೇವ್ ಮೊದಲ ಸಿಂಗಲ್ಸ್‌ನಲ್ಲಿ ಆಡಿದರೆ, ಯೂಕಿ ಎರಡನೇ ಸಿಂಗಲ್ಸ್‌ನಲ್ಲಿ ಆಡುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡು ಹೊಸದಾಗಿ ಆಡಲು ಆರಂಭಿರುವ ಕಾರಣ ಯೂಕಿ ಎರಡನೇ ಸಿಂಗಲ್ಸ್‌ನಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ.

`ಸೋಮದೇವ್ ಹಾಗೂ ಪೇಸ್ ಅವರು ಮತ್ತೆ ತಂಡಕ್ಕೆ ಮರಳಿದ್ದು ಖುಷಿ ನೀಡಿದೆ. ಈ ವರ್ಷದಲ್ಲಿ ಸೋಮದೇವ್ ಹಲವು ಟೂರ್ನಿಗಳಲ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಅದೇ ರೀತಿಯ ಪ್ರದರ್ಶನ ಇಂಡೊನೇಷ್ಯಾದ ಎದುರು ನೀಡಬೇಕಿದೆ' ಎಂದು ಅವರು ನುಡಿದರು.

ಆಗಮನ: ಭಾರತ ವಿರುದ್ಧ ಡೇವಿಸ್ ಕಪ್ ಪಂದ್ಯವನ್ನಾಡಲು ಇಂಡೊನೇಷ್ಯಾದ ಆಟಗಾರರು ಸೋಮವಾರ ರಾತ್ರಿ ಬೆಂಗಳೂರಿಗೆ ಬಂದರು. ಮಂಗಳವಾರ ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಅಭ್ಯಾಸ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.