ADVERTISEMENT

ಗ್ರ್ಯಾಂಡ್‌ಹೋಮ್‌ ಶತಕ; ನ್ಯೂಜಿಲೆಂಡ್‌ ತಿರುಗೇಟು

ಏಜೆನ್ಸೀಸ್
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST
ಶತಕದ ಸಂಭ್ರಮದಲ್ಲಿ ಕೊಲಿನ್ ಡಿ ಗ್ರ್ಯಾಂಡ್‌ಹೋಮ್‌
ಶತಕದ ಸಂಭ್ರಮದಲ್ಲಿ ಕೊಲಿನ್ ಡಿ ಗ್ರ್ಯಾಂಡ್‌ಹೋಮ್‌   

ವೆಲ್ಲಿಂಗ್ಟನ್‌: ಅಂಗಳದಲ್ಲಿ ಮಿಂಚು ಹರಿಸಿದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ (105 ರನ್) ಅವರ ಚೊಚ್ಚಲ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ.

ಶುಕ್ರವಾರ ನೀಲ್‌ ವಾಗ್ನರ್ (39ಕ್ಕೆ7) ದಾಳಿಯಿಂದ ಎದುರಾಳಿ ತಂಡವನ್ನು ಕೇವಲ 134 ರನ್‌ಗಳಿಗೆ ಕಟ್ಟಿಹಾಕಿದ್ದ ಕಿವೀಸ್ ಪಡೆ ಬ್ಯಾಟಿಂಗ್‌ನಲ್ಲೂ ಪಾರಮ್ಯ ಸಾಧಿಸಿತು. ದಿನದಾಟದ ಅಂತ್ಯಕ್ಕೆ 127 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 447 ರನ್ ಕಲೆಹಾಕಿದೆ. ಒಟ್ಟು 313 ರನ್‌ಗಳ ಮುನ್ನಡೆ ಸಾಧಿಸಿದೆ.

ಮೊದಲ ದಿನ 38 ಓವರ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು 85 ರನ್‌ ಗಳಿಸಿ ಸಂಕಷ್ಟ ಎದುರಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಟಾಮ್‌ ಲಥಾಮ್‌ (37), ಕೇನ್ ವಿಲಿಯಮ್ಸನ್‌ (1) ಬೇಗನೆ ವಿಕೆಟ್ ಒಪ್ಪಿಸಿದ್ದರು.

ADVERTISEMENT

ಶನಿವಾರ ಉತ್ತಮ ಆರಂಭ ಪಡೆದ ಆತಿಥೇಯ ತಂಡ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡು ಆಡಿತು. ಕ್ರೀಸ್‌ನಲ್ಲಿದ್ದ ಜೀತ್ ರಾವಲ್‌ (42) ಅರ್ಧಶತಕದ ಅಂಚಿನಲ್ಲಿ ಇದ್ದಾಗ ಕೇಮರ್ ರಾಚ್‌ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ರಾಸ್‌ ಟೇಲರ್‌ (92) ಕೂಡ ತಮ್ಮ ಹದಿನೇಳನೆಯ ಟೆಸ್ಟ್ ಶತಕ ದಾಖಲಿಸುವಲ್ಲಿ ವಿಫಲರಾದರು. 160 ಎಸೆತಗಳಲ್ಲಿ 10 ಬೌಂಡರಿ ದಾಖಲಿಸಿದ್ದ ಅವರು ರಾಚ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಮೊದಲ ಶತಕ: ಹೆನ್ರಿ ನಿಕೊಲಸ್ (67) ಮತ್ತು ಗ್ರ್ಯಾಂಡ್‌ಹೋಮ್‌ (105) ಉತ್ತಮ ಜೊತೆಯಾಟ ಆಡಿದರು. ನಿಕೊಲಸ್‌ 156 ಎಸೆತಗಳನ್ನು ಎದುರಿಸಿದರೆ, ಗ್ರ್ಯಾಂಡ್‌ಹೋಮ್ ಕೇವಲ 71 ಎಸೆತಗಳಲ್ಲಿ ಶತಕ ದಾಖಲಿಸಿ ಮಿಂಚು ಹರಿಸಿದರು. ಆಲ್‌ರೌಂಡ್‌ ಆಟಗಾರನ ಮೊದಲ ಶತಕ ಇದಾಗಿದೆ. ಇದು ವಿಶ್ವದ ಒಂಬತ್ತನೇ ವೇಗದ ಶತಕ ಕೂಡ ಹೌದು.

ಟಾಮ್ ಬ್ಲಂಡಲ್‌ (57) ಅರ್ಧಶತಕ ದಾಖಲಿಸಿ ಕ್ರೀಸ್‌ನಲ್ಲಿ ಇದ್ದಾರೆ. ವಿಂಡೀಸ್ ತಂಡದ ಕೆಮರ್ ರಾಚ್‌ 19 ಓವರ್‌ಗಳಲ್ಲಿ 73 ರನ್‌ಗಳನ್ನು ನೀಡಿ ಮೂರು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್‌: 45.4 ಓವರ್‌ಗಳಲ್ಲಿ 134. ನ್ಯೂಜಿಲೆಂಡ್‌: 127 ಓವರ್‌ಗಳಲ್ಲಿ 9 ವಿಕೆಟ್‌ಗೆ 447 (ರಾಸ್ ಟೇಲರ್‌ 93, ಹೆನ್ರಿ ನಿಕೊಲಸ್‌ 67, ಕೊಲಿನ್ ಡಿ ಗ್ರ್ಯಾಂಡ್‌ಹೋಮ್‌ 105; ಕೆಮರ್ ರಾಚ್‌ 73ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.