ADVERTISEMENT

ಗ್ರ್ಯಾನ್ ಪ್ರಿ ರೇಸ್‌ಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಗ್ರೇಟರ್ ನೊಯಿಡಾ: ರೇಸ್ ಪ್ರಿಯರ ಬಹುದಿನಗಳ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ಸಾಕಷ್ಟು ಕಾತರ, ಕುತೂಹಲಕ್ಕೆ ಕಾರಣವಾಗಿರುವ ಚೊಚ್ಚಲ `ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್~ ಭಾನುವಾರ ನಡೆಯಲಿದ್ದು, ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಶಕೆಗೆ ನಾಂದಿ ಹಾಡಲಿದೆ.

ಕ್ರಿಕೆಟ್, ಹಾಕಿ ಹಾಗೂ ಇನ್ನಿತರ ಕ್ರೀಡೆಗಳಿಂದ ಜಾಗತಿಕ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ದೇಶ ಇದೀಗ ಮೋಟಾರ್    ಸ್ಪೋರ್ಟ್ಸ್ ವಲಯದಲ್ಲೂ ಸಾಮರ್ಥ್ಯ ತೋರಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಭಾನುವಾರ ನಡೆಯಲಿರುವ ರೇಸ್ ಬಲುದೊಡ್ಡ ಹೆಜ್ಜೆ ಎನಿಸಿದೆ.
 
ಶುಕ್ರವಾರದ ಅಭ್ಯಾಸದ ಅವಧಿ ಹಾಗೂ ಶನಿವಾರ ನಡೆದ ಅರ್ಹತಾ ಸ್ಪರ್ಧೆ ಇಲ್ಲಿನ ರೇಸ್ ಪ್ರಿಯರಿಗೆ ಫಾರ್ಮುಲಾ-1 ಕಾರುಗಳ ಅಬ್ಬರ ಏನೆಂಬುದನ್ನು ತೋರಿಸಿಕೊಟ್ಟಿದೆ. ಬುದ್ಧ ಇಂಟರ್‌ನ್ಯಾಷನಲ್ ಸರ್ಕೀಟ್‌ನಲ್ಲಿ ಭಾನುವಾರ ಇನ್ನಷ್ಟು ರೋಚಕ ದೃಶ್ಯಗಳು ಮೂಡಿಬರುವುದು ಖಚಿತ.

ರೇಸ್‌ನ್ನು ಸುಮಾರು 1.20 ಲಕ್ಷಕ್ಕೂ ಅಧಿಕ ಮಂದಿ ಪ್ರತ್ಯಕ್ಷವಾಗಿ ವೀಕ್ಷಿಸಲಿದ್ದರೆ, ಕೋಟ್ಯಂತರ ಅಭಿಮಾನಿಗಳು ಟಿವಿ ಮೂಲಕ ರೇಸ್‌ನ ರೋಮಾಂಚನ ಪಡೆಯಲಿದ್ದಾರೆ. ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ `ಪೋಲ್ ಪೊಸಿಷನ್~ ಪಡೆದಿದ್ದಾರೆ. ಅಂದರೆ ಭಾನುವಾರ ರೇಸ್‌ನ ಆರಂಭದ ವೇಳೆ ಅವರ ಕಾರು ಮೊದಲ ಸ್ಥಾನದಲ್ಲಿರುತ್ತದೆ. ಶನಿವಾರ ನಡೆದ ಅರ್ಹತಾ ಸ್ಪರ್ಧೆಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ವೆಟೆಲ್ 1 ನಿಮಿಷ 24.178 ಸೆಕೆಂಡ್‌ಗಳ ವೇಗ ಕಂಡುಕೊಂಡರು.

ಮೆಕ್‌ಲಾರೆನ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅರ್ಹತಾ ಹಂತದಲ್ಲಿ (1:24.474) ಎರಡನೇ ಸ್ಥಾನ ಪಡೆದರು. ಆದರೆ ಶುಕ್ರವಾರ `ಫ್ರೀ ಪ್ರಾಕ್ಟೀಸ್~ ವೇಳೆ ನಿಯಮ ಉಲ್ಲಂಘಿಸಿದ್ದಕ್ಕೆ ಅವರಿಗೆ ಮೂರು ಸ್ಥಾನಗಳ ಪೆನಾಲ್ಟಿ ವಿಧಿಸಲಾಗಿತ್ತು. ಈ ಕಾರಣ ಭಾನುವಾರ ಹ್ಯಾಮಿಲ್ಟನ್ ಐದನೆಯವರಾಗಿ ಸ್ಪರ್ಧೆ ಆರಂಭಿಸುವರು. ರೆಡ್ ಬುಲ್ ತಂಡದ ಮಾರ್ಕ್ ವೆಬರ್, ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ, ಮೆಕ್‌ಲಾರೆನ್ ತಂಡದ ಜೆನ್ಸನ್ ಬಟನ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿ ನಿಂತು ರೇಸ್ ಆರಂಭಿಸುವರು.

ಫೆರಾರಿ ತಂಡದ ಫಿಲಿಪ್ ಮಸ್ಸಾ ಹಾಗೂ ಮರ್ಸಿಡಿಸ್ ತಂಡದ ನಿಕೊ ರೋಸ್‌ಬರ್ಗ್ ಬಳಿಕದ ಸ್ಥಾನ ಪಡೆದಿದ್ದಾರೆ. ಸಹರಾ    ಫೋರ್ಸ್ ಇಂಡಿಯಾ ತಂಡದ ಅಡ್ರಿಯಾನ್ ಸುಟಿಲ್ ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಆರಂಭಿಸುವರು. ಇದರಿಂದ ತವರು ನೆಲದಲ್ಲಿ ನಡೆಯುವ ಚೊಚ್ಚಲ ರೇಸ್‌ನಲ್ಲಿ ಫೋರ್ಸ್ ಇಂಡಿಯಾ ತಂಡ ಪಾಯಿಂಟ್ ಗಿಟ್ಟಿಸುವ ಅವಕಾಶ ಹೆಚ್ಚಿದೆ. ಸುಟಿಲ್ ಅರ್ಹತಾ ಹಂತದಲ್ಲಿ 1:26.140 ಸೆ. ವೇಗ ಕಂಡುಕೊಂಡರು. ಇದೇ ತಂಡದ ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ 12ನೇ ಸ್ಥಾನದಿಂದ ಸ್ಪರ್ಧೆಗಿಳಿಯಲಿದ್ದಾರೆ.

ಕಣದಲ್ಲಿರುವ ಭಾರತದ ಏಕೈಕ ಚಾಲಕ, ಹಿಸ್ಪಾನಿಯ ತಂಡವನ್ನು ಪ್ರತಿನಿಧಿಸುತ್ತಿರುವ ನರೇನ್ ಕಾರ್ತಿಕೇಯನ್ 23ನೇ ಸ್ಥಾನದಿಂದ ಸ್ಪರ್ಧೆ ಆರಂಭಿಸುವರು. ಅರ್ಹತಾ ಹಂತದಲ್ಲಿ ಅವರು 22ನೇ ಸ್ಥಾನ ಪಡೆದಿದ್ದರು. ಆದರೆ ಫೆರಾರಿ ತಂಡದ ಮೈಕಲ್ ಶೂಮೇಕರ್‌ಗೆ ಅಡ್ಡಿಪಡಿಸಿದ್ದಕ್ಕೆ ಕಾರ್ತಿಕೇಯನ್‌ಗೆ ಐದು ಸ್ಥಾನಗಳ ಪೆನಾಲ್ಟಿ ವಿಧಿಸಲಾಯಿತು. `ನಾನು ನೀಡಿದ ಪ್ರದರ್ಶನದ ಬಗ್ಗೆ ತೃಪ್ತಿ ಇದೆ. ಸಣ್ಣ ತಪ್ಪು ಸಂಭವಿಸಿದ್ದು ನಿಜ~ ಎಂದು ಕಾರ್ತಿಕೇಯನ್ ಪ್ರತಿಕ್ರಿಯಿಸಿದ್ದಾರೆ. ಆದರೆ ಶೂಮೇಕರ್ ಅಲ್ಪ `ಗರಂ~ ಆದರು. `ಅರ್ಹತೆ ಪಡೆಯುವವರ ಹಾದಿಗೆ ಅಡ್ಡಿಪಡಿಸಬಾರದು~ ಎಂದು ಶೂಮೇಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮೋಟಾರು ರೇಸ್ ವಲಯದಲ್ಲಿ ಎಫ್-1ನ್ನು ಮೀರಿಸುವ ಮತ್ತೊಂದು ರೇಸ್ ಇಲ್ಲ. ವೇಗ, ಕಾರಿನಲ್ಲಿರುವ ತಂತ್ರಜ್ಞಾನ, ಚಾಲಕರ ಕೌಶಲ ಇಲ್ಲಿ ಅತ್ಯುನ್ನತ ಮಟ್ಟದಲ್ಲಿರುತ್ತದೆ. ಆದ್ದರಿಂದ ಭಾರತದ ನೆಲದಲ್ಲಿ ಭಾನುವಾರ ನಡೆಯಲಿರುವ ಚೊಚ್ಚಲ ರೇಸ್ ಅಭಿಮಾನಿಗಳನ್ನು ಹೊಸ ಲೋಕಕ್ಕೆ ಕೊಂಡೊಯ್ಯಲಿದೆ.

ಸಂಘಟಕರಾದ ಜೇಪಿ ಸಮೂಹ ರೇಸ್‌ನ್ನು ಯಶಸ್ವಿಯಾಗಿ ನಡೆಸಲು ಸಕಲ ರೀತಿಯ ಸಿದ್ಧತೆ ನಡೆಸಿದೆ. ರೇಸ್‌ನ ಆರಂಭಕ್ಕೆ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ತಾರೆಯರಾದ ಶಾರೂಖ್ ಖಾನ್, ಅರ್ಜುನ್ ರಾಂಪಾಲ್ ರೇಸ್ ವೀಕ್ಷಿಸಲಿದ್ದಾರೆ.

ಬುದ್ಧ ಇಂಟರ್‌ನ್ಯಾಷನಲ್ ಸರ್ಕೀಟ್

ಭಾನುವಾರ ರೇಸ್ ನಡೆಯಲಿರುವ ಬುದ್ಧ ಇಂಟರ್‌ನ್ಯಾಷನಲ್ ಸರ್ಕೀಟ್ ದೆಹಲಿ ಸಮೀಪದ ಗ್ರೇಟರ್ ನೊಯಿಡಾದಲ್ಲಿದೆ. ಈ ಟ್ರ್ಯಾಕ್‌ನ ಉದ್ದ 5.14 ಕಿ.ಮೀ. ಆಗಿದೆ. ಸ್ಪರ್ಧೆ 60 ಲ್ಯಾಪ್‌ಗಳನ್ನು ಹೊಂದಿದೆ. ಅಂದರೆ ಕಾರುಗಳು ಒಟ್ಟು 308 ಕಿ.ಮೀ ಕ್ರಮಿಸಿದ ಹಾಗಾಗುತ್ತದೆ.
 
16 ತಿರುವುಗಳನ್ನು (ಎಡಭಾಗಕ್ಕೆ 7/ ಬಲಕ್ಕೆ 9) ಒಳಗೊಂಡಿರುವ ಟ್ರ್ಯಾಕ್‌ನ ಅಗಲ ಕನಿಷ್ಠ 18 ಮೀ. ಹಾಗೂ ಗರಿಷ್ಠ 20 ಮೀ. ಆಗಿದೆ. 12 ತಂಡಗಳ 24 ಕಾರುಗಳು ಕಣಕ್ಕಿಳಿಯಲಿವೆ. ಈ ಕಾರುಗಳು ಗಂಟೆಗೆ ಸರಾಸರಿ 210 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. ಕೆಲವೊಮ್ಮೆ ಗರಿಷ್ಠ 320 ಕಿ.ಮೀ ವೇಗವನ್ನು ತಲುಪಲಿದೆ. 
 
 

ADVERTISEMENT

ಮುಖ್ಯಾಂಶಗಳು

-ಮಧ್ಯಾಹ್ನ ಮೂರು ಗಂಟೆಗೆ ರೇಸ್ ಆರಂಭ.

-ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್‌ಗೆ `ಪೋಲ್ ಪೊಸಿಷನ್~.

-ಪಾಯಿಂಟ್ ಗಿಟ್ಟಿಸುವ ವಿಶ್ವಾಸದಲ್ಲಿ ಫೋರ್ಸ್ ಇಂಡಿಯಾ.

-ಎಂಟನೆಯವರಾಗಿ ಸ್ಪರ್ಧೆ ಆರಂಭಿಸಲಿರುವ ಅಡ್ರಿಯಾನ್ ಸುಟಿಲ್.

-ಕ್ರೀಡಾ ಸಚಿವ ಅಜಯ್ ಮಾಕನ್‌ಗೆ ಆಹ್ವಾನ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.