ADVERTISEMENT

ಚಾಂಪಿಯನ್ಸ್ ಲೀಗ್ ಟ್ವೆಂಟಿ-20: ರೈಡರ್ಸ್ ಎದುರಾಳಿ ಆಕ್ಲೆಂಡ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ವಿಶ್ವದ ಕೆಲವು ಅತ್ಯುತ್ತಮ ಟ್ವೆಂಟಿ-20 ಕ್ರಿಕೆಟ್ ತಾರೆಯರು ಪಾಲ್ಗೊಳ್ಳುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಅರ್ಹತಾ ಹಂತದ ಪಂದ್ಯಗಳಿಗೆ ಸೋಮವಾರ ಚಾಲನೆ ಲಭಿಸಲಿದೆ. ಇನ್ನು ಮೂರು ವಾರಗಳ ಕಾಲ ಚುಟುಕು ಕ್ರಿಕೆಟ್‌ನ ಸೊಬಗನ್ನು ಸವಿಯುವ ಅವಕಾಶ ಕ್ರಿಕೆಟ್ ಪ್ರಿಯರಿಗೆ ದೊರೆಯಲಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಪಂದ್ಯಗಳಲ್ಲಿ ರುಹುನಾ ಇಲೆವೆನ್- ಟ್ರಿನಿಡಾಡ್ ಆ್ಯನ್ಡ್ ಟೊಬ್ಯಾಗೊ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್- ಆಕ್ಲೆಂಡ್ ಏಸಸ್ ತಂಡಗಳು ಪೈಪೋಟಿ ನಡೆಸಲಿವೆ.

ಇಂಗ್ಲೆಂಡ್‌ನ ಕೌಂಟಿ ತಂಡಗಳಾದ ಲೀಸ್ಟರ್‌ಷೈರ್ ಮತ್ತು ಸಾಮರ್ಸೆಟ್ ಅರ್ಹತಾ ಹಂತದಲ್ಲಿ ಪಾಲ್ಗೊಳ್ಳುವ ಇನ್ನೆರಡು ತಂಡಗಳಾಗಿವೆ. ಈ ಆರು ತಂಡಗಳಲ್ಲಿ ಮೂರು ತಂಡಗಳು ಪ್ರಧಾನ ಹಂತ ಪ್ರವೇಶಿಸಲಿವೆ. ಟೂರ್ನಿಯ ಪ್ರಧಾನ ಹಂತದ ಪಂದ್ಯಗಳಿಗೆ ಸೆಪ್ಟೆಂಬರ್ 23 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಲಭಿಸಲಿದೆ. ಬೆಂಗಳೂರು ಅಲ್ಲದೆ ಚೆನ್ನೈ ಮತ್ತು ಕೋಲ್ಕತ್ತ ನಗರಗಳು ಪ್ರಧಾನ ಹಂತದ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಸೋಮವಾರ ನಡೆಯುವ ನೈಟ್ ರೈಡರ್ಸ್ ಮತ್ತು ಆಕ್ಲಂಡ್ ಏಸಸ್ ತಂಡಗಳ ನಡುವಿನ ಪಂದ್ಯ ಹೆಚ್ಚಿನ ಪ್ರೇಕ್ಷಕರನ್ನು ಕ್ರೀಡಾಂಗಣದತ್ತ ಸೆಳೆಯುವ ಸಾಧ್ಯತೆಯಿದೆ.

ಕೋಲ್ಕತ್ತ ತಂಡ ಪ್ರಮುಖ ಆಟಗಾರ ಗೌತಮ್ ಗಂಭೀರ್ ಸೇವೆಯನ್ನು ಕಳೆದುಕೊಂಡಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಈ ಕಾರಣ ಅರ್ಹತಾ ಪಂದ್ಯಗಳಲ್ಲಿ ಗಂಭೀರ್ ಆಡುತ್ತಿಲ್ಲ. ರೈಡರ್ಸ್ ತಂಡ ಪ್ರಧಾನ ಹಂತ ಪ್ರವೇಶಿಸಿದರೂ ಅವರ ಸೇವೆ ಲಭಿಸುವ ಸಾಧ್ಯತೆ ಕಡಿಮೆ.

ಗಂಭೀರ್ ಅನುಪಸ್ಥಿತಿಯಿದ್ದರೂ ಕೋಲ್ಕತ್ತ ತಂಡ ಗೆಲುವಿನ ಫೇವರಿಟ್ ಎನಿಸಿಕೊಂಡಿದೆ. ಇಂಗ್ಲೆಂಡ್‌ನ ಎಯೊನ್ ಮಾರ್ಗನ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ಆಸ್ಟ್ರೇಲಿಯದ ಬ್ರೆಟ್ ಲೀ ಅಲ್ಲದೆ ಯೂಸುಫ್ ಪಠಾಣ್, ಮನೋಜ್ ತಿವಾರಿ ಮತ್ತು ಲಕ್ಷ್ಮೀಪತಿ ಬಾಲಾಜಿ ತಂಡದಲ್ಲಿದ್ದಾರೆ. ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕಾಲಿಸ್‌ಗೆ ಲಭಿಸಿದೆ.

ಮತ್ತೊಂದೆಡೆ ಗರೆಥ್ ಹಾಪ್ಕಿನ್ಸ್, ಮಾರ್ಟಿನ್ ಗುಪ್ಟಿಲ್, ಕ್ರಿಸ್ ಮಾರ್ಟಿನ್, ಡೆರಿಲ್ ಟಫಿ ಮತ್ತು ಕೈಲ್ ಮಿಲ್ಸ್ ಮುಂತಾದ ಆಟಗಾರರನ್ನು ಒಳಗೊಂಡ ಆಕ್ಲಂಡ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ದಿನದ ಮೊದಲ ಪಂದ್ಯದಲ್ಲಿ ಶ್ರೀಲಂಕಾದ ರುಹುನಾ ಇಲೆವೆನ್ ಮತ್ತು ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಅಂಡ್ ಟೊಬ್ಯಾಗೊ ತಂಡಗಳು ಎದುರಾಗಲಿವೆ. ಶ್ರೀಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ರುಹುನಾ ತಂಡದ ಪ್ರಧಾನ ಶಕ್ತಿ ಎನಿಸಿದ್ದಾರೆ.

`ನಮ್ಮ ತಂಡದ ಬಲ ಬ್ಯಾಟಿಂಗ್‌ನಲ್ಲಿ ಅಡಗಿದೆ. ಜಯಸೂರ್ಯ ತಂಡದಲ್ಲಿರುವುದು ಅದೃಷ್ಟ. ಅವರು ಸೂಕ್ತ ಸಲಹೆ ನೀಡಲಿದ್ದಾರೆ~ ಎಂದು ತಂಡದ ನಾಯಕ ಮಾಹೇಲ ಉದಾವತ್ತ ನುಡಿದಿದ್ದಾರೆ.

2009 ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಟ್ರಿನಿಡ್ಯಾಡ್ ತಂಡ ಗೆಲುವಿನ ಕನಸು ಕಾಣುತ್ತಿದೆ. ಕೀರನ್ ಪೊಲಾರ್ಡ್ ಈ ತಂಡದ ಪರ ಆಡುತ್ತಿಲ್ಲ. ಅವರು ಮುಂಬೈ ಇಂಡಿಯನ್ಸ್ ಪರ ಆಡಲು ನಿರ್ಧರಿಸಿದ್ದಾರೆ. ಇದರಿಂದ ತಂಡ ಅಲ್ಪ ಹಿನ್ನಡೆ ಅನುಭವಿಸಿರುವುದು ನಿಜ. ಡರೆನ್ ಗಂಗಾ ನೇತೃತ್ವದ ತಂಡದಲ್ಲಿ ಶೆರ್ವಿನ್ ಗಂಗಾ, ಅಡ್ರಿಯಾನ್ ಭರತ್, ದಿನೇಶ್ ರಾಮ್ದಿನ್ ಮತ್ತು ಲೆಂಡ್ಲ್   ಸಿಮಾನ್ಸ್ ಇದ್ದಾರೆ.

ಅರ್ಹತಾ ಹಂತದ ಪಂದ್ಯಗಳ ವೇಳಾಪಟ್ಟಿ:

ಸೆಪ್ಟೆಂಬರ್ 19: ರುಹುನಾ ಇಲೆವೆನ್- ಟ್ರಿನಿಡಾಡ್ ಆ್ಯನ್ಡ್ ಟೊಬ್ಯಾಗೊ (ಸಂಜೆ 4.00 ಕ್ಕೆ ಆರಂಭ)
ಕೋಲ್ಕತ್ತ ನೈಟ್ ರೈಡರ್ಸ್- ಆಕ್ಲೆಂಡ್ ಏಸಸ್ (ರಾತ್ರಿ 8.00ಕ್ಕೆ ಆರಂಭ)
ಸೆಪ್ಟೆಂಬರ್ 20: ಲೀಸ್ಟರ್‌ಷೈರ್- ಟ್ರಿನಿಡಾಡ್ ಆ್ಯನ್ಡ್ ಟೊಬ್ಯಾಗೊ (ಸಂಜೆ 4.00 ಕ್ಕೆ)
ಆಕ್ಲಂಡ್- ಸಾಮರ್ಸೆಟ್ (ರಾತ್ರಿ 8.00ಕ್ಕೆ)

ಸೆಪ್ಟೆಂಬರ್ 21: ಲೀಸ್ಟರ್‌ಷೈರ್- ರುಹುನಾ ಇಲೆವೆನ್ (ಸಂಜೆ 4.00 ಕ್ಕೆ)
ಕೋಲ್ಕತ್ತ ನೈಟ್ ರೈಡರ್ಸ್- ಸಾಮರ್ಸೆಟ್ (ರಾತ್ರಿ 8.00ಕ್ಕೆ)
(ಎಲ್ಲ ಪಂದ್ಯಗಳು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.