ADVERTISEMENT

ಚಿನ್ನಕ್ಕೆ ಕೊರಳೊಡ್ಡಿದ ಮನೋಜ್‌

ಪಿಟಿಐ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಭಾರತದ ಶಿವಥಾಪ ಎದುರಾಳಿಗೆ ಪಂಚ್‌ ಮಾಡಿದ ಕ್ಷಣ –ಪಿಟಿಐ ಚಿತ್ರ
ಭಾರತದ ಶಿವಥಾಪ ಎದುರಾಳಿಗೆ ಪಂಚ್‌ ಮಾಡಿದ ಕ್ಷಣ –ಪಿಟಿಐ ಚಿತ್ರ   

ವಿಶಾಖಪಟ್ಟಣ: ಭಾರತದ ಮನೋಜ್‌ ಕುಮಾರ್‌ ಸತತ ಎರಡನೇ ಬಾರಿಗೆ ಇಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ನಿಖರ ಪಂಚ್ ಹಾಗೂ ಪ್ರಬಲ ಹೊಡೆತಗಳಿಂದ ಗಮನಸೆಳೆದ ಭಾರತದ ಆಟಗಾರ ಪುರುಷರ 69ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ 4–1ರಲ್ಲಿ ದುರ್ಯೋಧನ್ ಸಿಂಗ್‌ ಅವರನ್ನು ಮಣಿಸಿದರು.

ರೈಲ್ವೇಸ್‌ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ (ಆರ್‌ಎಸ್‌ಪಿಬಿ) ಪ್ರತಿನಿಧಿಸಿದ್ದ ಮನೋಜ್‌ ಎದುರಾಳಿಗೆ ಪಾಯಿಂಟ್ಸ್ ಕಲೆಹಾಕಲು ಅವಕಾಶ ನೀಡದೇ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದರು.

ADVERTISEMENT

ಶಿವಥಾಪಗೆ ಬೆಳ್ಳಿ: ಹಾಲಿ ಚಾಂಪಿಯನ್ ಶಿವಥಾಪ ಪುರುಷರ 60ಕೆ.ಜಿ ಲೈಟ್‌ವೇಟ್‌ ವಿಭಾಗದ ಫೈನಲ್‌ನಲ್ಲಿ ಮನೀಷ್ ಕೌಶಿಕ್ ವಿರುದ್ಧ ಸೋತರು.

ಕಿಂಗ್ಸ್‌ ಕಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಆರ್‌ಎಸ್‌ಪಿಬಿಯ ಶ್ಯಾಮ್‌ ಕುಮಾರ್ 49ಕೆ.ಜಿ ವಿಭಾಗದ ಫೈನಲ್‌ನಲ್ಲಿ 3–2ರಲ್ಲಿ ಮಿಜೋರಾಂನ ಲಾಲ್‌ಬಿಯಾಕಿಮಾ ವಿರುದ್ಧ ಜಯದಾಖಲಿಸುವ ಮೂಲಕ ಚಿನ್ನ ಗೆದ್ದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಮನ್‌ದೀಪ್‌ ಜಾಂಗ್ರ ಮೊದಲ ಬಾರಿಗೆ ಇಲ್ಲಿ ಚಿನ್ನ ಗೆದ್ದಿದ್ದಾರೆ. 75ಕೆ.ಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಅವರು 5–0ರಲ್ಲಿ ಮಿಜೋರಾಂನ ವಾನ್‌ಹಿಲ್‌ಪೂನಿಯಾ ವಿರುದ್ಧ ಗೆದ್ದರು.

ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದ ಸತೀಶ್‌ 91ಕೆ.ಜಿ ಹೆವಿವೇಟ್ ವಿಭಾಗದಲ್ಲಿ 5–0ರಲ್ಲಿ ರಲ್ಲಿ ಹರಿಯಾಣದ ಪ್ರವೀಣ್ ಕುಮಾರ್ ಎದುರು ಗೆದ್ದರು.

ಎಸ್‌ಎಸ್‌ಸಿಬಿಯ ಮದನ್‌ ಲಾಲ್‌ 56ಕೆ.ಜಿ ಬಾಂಥಮ್‌ವೇಟ್‌ ವಿಭಾಗದ ಚಿನ್ನ ಗೆದ್ದರು. ಫೈನಲ್‌ನಲ್ಲಿ ಅವರು 3–2ರಲ್ಲಿ ಗೋವಾದ ಸಂತೋಷ್‌ ಹರಿಜನ್ ವಿರುದ್ಧ ಗೆದ್ದರು. 64ಕೆ.ಜಿ ಲೈಟ್ ವೆಲ್ಟರ್‌ವೇಟ್‌ ವಿಭಾಗದಲ್ಲಿ ಎಸ್‌ಎಸ್‌ಸಿಬಿಯ ಧೀರಜ್‌ ರಾಂಗಿ ಚಾಂಪಿಯನ್ ಆದರು. ಮಧ್ಯಪ್ರದೇಶದ ಬಸಂತ್‌ ಥಾಪ್ರ ಎದುರು ಅವರಿಗೆ ವಾಕ್‌ಓವರ್ ಲಭಿಸಿದೆ.

ಮುಖ್ಯಾಂಶಗಳು

* 81ಕೆ.ಜಿ ವಿಭಾಗದಲ್ಲಿ ಮನೀಷ್‌ ಪನ್ವರ್‌ಗೆ ಚಿನ್ನ

* ಸತೀಶ್‌ 91ಕೆ.ಜಿ ಹೆವಿವೇಟ್ ವಿಭಾಗದಲ್ಲಿ ಚಾಂಪಿಯನ್‌

* 52ಕೆ.ಜಿ ವಿಭಾಗದಲ್ಲಿ ಆರ್‌ಎಸ್‌ಪಿಬಿಯ ಸಲ್ಮಾನ್‌ ಶೇಖ್‌ ಚಿನ್ನ ಗೆದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.