ಚೆನ್ನೈ (ಪಿಟಿಐ): ಕೊನೆಯೊಂದು ಓವರ್‌ನಲ್ಲಿ ಗಳಿಸಬೇಕಾಗಿದ್ದು ಎಂಟು ರನ್. ಆಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಜಯದ ದಡ ಸೇರಿಸುವ ಹೊಣೆ ಹೊತ್ತು ನಿಂತಿದ್ದು ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಡ್ವೇನ್ ಬ್ರಾವೊ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಅವರು ನಿರಾಸೆ ಮಾಡಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇದೇ ಅಂಗಳದಲ್ಲಿ ಬೆರಗುಗೊಳ್ಳುವಂಥ ವಿಜಯ ಪಡೆದಿದ್ದ ಸೂಪರ್ ಕಿಂಗ್ಸ್ ಮತ್ತೊಂದು ರೋಚಕ ಗೆಲುವು ಪಡೆಯಿತು. ರಾಜಸ್ತಾನ್ ರಾಯಲ್ಸ್ ಕಷ್ಟ ತಂದೊಡ್ಡುವಂಥ ಸ್ಥಿತಿ. ನಾಯಕ ರಾಹುಲ್ ದ್ರಾವಿಡ್ ಕೊನೆಯ ಓವರ್ ಜವಾಬ್ದಾರಿಯನ್ನು ಸ್ಟುವರ್ಟ್ ಬಿನ್ನಿಗೆ ವಹಿಸಿದರು. ಆಗ ಸೂಪರ್ ಕಿಂಗ್ಸ್ ಬೆಂಬಲಿಗರಲ್ಲಿ ಆತಂಕ. ಆದರೂ ಎಂಟು ರನ್ ಅಸಾಧ್ಯವಲ್ಲ ಎನ್ನುವ ವಿಶ್ವಾಸವೂ ಇತ್ತು.
ಸ್ಟುವರ್ಟ್ ಕೊನೆಯ ಎಸೆತಕ್ಕೆ ಸಜ್ಜಾದಾಗಲಂತೂ ಎರಡು ರನ್ ಗಳಿಸಲೇಬೇಕು ಎನ್ನುವಂಥ ಒತ್ತಡ. `ಮಹಿ~ ತಪ್ಪು ಮಾಡಲಿಲ್ಲ. ಆಕರ್ಷಕವಾಗಿ ಚೆಂಡನ್ನು ಫ್ಲಿಕ್ ಮಾಡಿದರು. ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕೆವೊನ್ ಕೂಪರ್ ಚೆಂಡನ್ನು ತಡೆದು ವಿಕೆಟ್‌ನತ್ತ ಎಸೆಯುವ ಹೊತ್ತಿಗಾಗಲೇ ಎರಡು ರನ್‌ಗಳನ್ನು ದೋನಿ ಹಾಗೂ ಬ್ರಾವೊ ಚುರುಕಾಗಿ ಪೂರ್ಣಗೊಳಿಸಿಯಾಗಿತ್ತು. ಅದರೊಂದಿಗೆ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೂಪರ್ ಕಿಂಗ್ಸ್‌ಗೆ ಏಳು ವಿಕೆಟ್‌ಗಳ ವಿಜಯದ ಸಂಭ್ರಮ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಏಳು ಪಂದ್ಯ ಆಡಿದ ಸೂಪರ್ ಕಿಂಗ್ಸ್‌ಗೆ ಇದು ನಾಲ್ಕನೇ ಜಯ. ಈ ತಂಡದ ಒಟ್ಟು ಪಾಯಿಂಟುಗಳು ಈಗ ಎಂಟು.
ಮತ್ತೊಂದು ಪಂದ್ಯದಲ್ಲಿ ದೋನಿ ಪಡೆಯು ಹೀಗೆ ಉತ್ಸಾಹದೊಂದಿಗೆ ಬೆಳೆದು ನಿಲ್ಲುವುದಕ್ಕೆ ಮುಖ್ಯ ಕಾರಣ ಫಾಫ್ ಡು ಪ್ಲೆಸ್ಸಿಸ್ (73; 78 ನಿಮಿಷ, 52 ಎಸೆತ, 6 ಬೌಂಡರಿ, 2 ಸಿಕ್ಸರ್). `ಪಂದ್ಯ ಶ್ರೇಷ್ಠ~ ಗೌರವ ತಮ್ಮದಾಗಿಸಿಕೊಂಡ ಅವರು ಆರಂಭದಲ್ಲಿಯೇ ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕಿದರು. ಆದರೂ ದೋನಿ ಪಡೆಯು ಕೊನೆಯ ಕ್ಷಣದಲ್ಲಿ ಒತ್ತಡದ ಸುಳಿಯಲ್ಲಿ ಸಿಲುಕಿ ಸಿಡಿದೇಳುವ ಸಾಹಸ ಮಾಡುವುದು ತಪ್ಪಲಿಲ್ಲ. ಹಾಗೆ ಆಗಿದ್ದರಿಂದ ಕ್ರಿಕೆಟ್ ಪ್ರೇಮಿಗಳಿಗೆ ಪ್ರಿಯವೆನಿಸುವ ರೋಮಾಂಚಕ ಕ್ಷಣವೂ ಬಂತು. ಮತ್ತೊಮ್ಮೆ `ಸೂಪರ್~ ಆಟಕ್ಕೆ ಭಾರಿ ಚಪ್ಪಾಳೆ!
`ಟಾಸ್~ ಗೆದ್ದ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ದೊಡ್ಡ ಮೊತ್ತವನ್ನು ಪೇರಿಸುವ ಆಶಯದೊಂದಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ನುವಾನ್ ಕುಲಶೇಖರ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಬಿಗುವಿನ ದಾಳಿಯಲ್ಲಿ ಸುಲಭವಾಗಿ ರನ್ ಗಳಿಸಲು ಆಗಲಿಲ್ಲ. ಪರಿಣಾಮ ರಾಯಲ್ಸ್ ತನ್ನ ಪಾಲಿನ ಇಪ್ಪತ್ತು ಓವರುಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಗಳಿಸಿದ್ದು 146 ರನ್. ದ್ರಾವಿಡ್ ಮಂದಗತಿಯಲ್ಲಿ ಆಡಿದರು ಆದರೆ ಓವೈಸ್ ಷಾ (52; 68 ನಿ., 43 ಎ., 4 ಬೌಂಡರಿ, 3 ಸಿಕ್ಸರ್) ಆಕ್ರಮಣಕಾರಿ ಆಟವಾಡುವ ಸಾಹಸ ಮಾಡಿದರು. ಆದರೂ ಸೂಪರ್ ಕಿಂಗ್ಸ್‌ಗೆ ಭಾರಿ ಕಷ್ಟದ್ದೆನಿಸುವ ಗುರಿ ನೀಡಲು ಮಾತ್ರ ಸಾಧ್ಯವಾಗಲಿಲ್ಲ.
ಸೂಪರ್ ಕಿಂಗ್ಸ್ ತಂಡದವರು ಎಂಥ ಸವಾಲಿಗೂ ತಿರುಗೇಟು ನೀಡುವುದಕ್ಕೆ ತಾವೇ ಮಾದರಿ ಎನ್ನುವಂಥ ಆಟವಾಡಿದರು. ಒತ್ತಡವನ್ನು ನಿವಾರಿಸಿಕೊಂಡು ಕೊನೆಯ ಎಸೆತದಲ್ಲಿ ಗುರಿ ಮುಟ್ಟಿದರು. 147 ರನ್ ಗಳಿಸಿದ ವಿಜಯಿಗಳು ಕಳೆದುಕೊಂಡಿದ್ದು ಮೂರು ವಿಕೆಟ್. ಬ್ರಾಡ್ ಹಾಗ್ ಹಾಗೂ ಸಿದ್ದಾರ್ಥ್ ತ್ರಿವೇದಿ ಬೌಲಿಂಗ್ ದಾಳಿಯು ಮಾತ್ರ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟಕರ ಎನಿಸಿತು. ಹಾಗ್ ಬೌಲಿಂಗ್ ಮಾಡಿದಾಗಲೆಲ್ಲ ರನ್ ಗತಿ ಕುಸಿದಿದ್ದೂ ಗಮನ ಸೆಳೆದ ಅಂಶ.
ಸ್ಕೋರ್ ವಿವರ:
ರಾಜಸ್ತಾನ್ ರಾಯಲ್ಸ್: 20 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 146
ರಾಹುಲ್ ದ್ರಾವಿಡ್ ಸಿ ಡಗ್ ಬೊಲಿಂಜರ್ ಬಿ ಶದಾಬ್ ಜಕಾತಿ 26
ಅಜಿಂಕ್ಯಾ ರಹಾನೆ ಸಿ ನುವಾನ್ ಕುಲಶೇಖರ ಬಿ ರವಿಚಂದ್ರನ್ ಅಶ್ವಿನ್ 15
ಓವೈಸ್ ಷಾ ಸಿ ಮಹೇಂದ್ರ ಸಿಂಗ್ ದೋನಿ ಬಿ ನುವಾನ್ ಕುಲಶೇಕರ 52
ಅಶೋಕ್ ಮೆನಾರಿಯಾ ಸಿ ಶದಾಬ್ ಜಕಾತಿ ಬಿ ಡಗ್ ಬೊಲಿಂಜರ್ 36
ಬ್ರಾಡ್ ಹಾಡ್ಜ್ ಔಟಾಗದೆ 03
ಇತರೆ: (ಬೈ-1, ಲೆಗ್‌ಬೈ-2, ವೈಡ್-11) 14
ವಿಕೆಟ್ ಪತನ: 1-36 (ಅಜಿಂಕ್ಯಾ ರಹಾನೆ; 4.4), 2-50 (ರಾಹುಲ್ ದ್ರಾವಿಡ್; 7.6), 3-142 (ಅಶೋಕ್ ಮೆನಾರಿಯಾ; 18.5), 4-146 (ಓವೈಸ್ ಷಾ; 19.6).
ಬೌಲಿಂಗ್: ನುವಾನ್ ಕುಲಶೇಖರ 4-0-17-1, ಡಗ್ ಬೊಲಿಂಜರ್ 4-0-31-1 (ವೈಡ್-1), ಡ್ವೇನ್ ಬ್ರಾವೊ 3-0-32-0, ರವಿಚಂದ್ರನ್ ಅಶ್ವಿನ್ 4-0-19-1, ಶದಾಬ್ ಜಕಾತಿ 2-0-12-1, ರವೀಂದ್ರ ಜಡೇಜಾ 3-0-32-0 (ವೈಡ್-2).
ಚೆನ್ನೈ ಸೂಪರ್ ಕಿಂಗ್ಸ್: 20 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 147
ಎಸ್.ಬದರೀನಾಥ್ ಸ್ಟಂಪ್ಡ್ ಶ್ರೀವತ್ಸ ಗೋಸ್ವಾಮಿ ಬಿ ಬ್ರಾಡ್ ಹಾಗ್ 15
ಫಾಫ್ ಡು ಪ್ಲೆಸ್ಸಿಸ್ ಸಿ ಶ್ರೀವತ್ಸ ಗೋಸ್ವಾಮಿ ಬಿ ಕೆವೊನ್ ಕೂಪರ್ 73
ಸುರೇಶ್ ರೈನಾ ಸಿ ಅಜಿಂಕ್ಯಾ ರಹಾನೆ ಬಿ ಕೆವೊನ್ ಕೂಪರ್ 26
ಮಹೇಂದ್ರ ಸಿಂಗ್ ದೋನಿ ಔಟಾಗದೆ 15
ಡ್ವೇನ್ ಬ್ರಾವೊ ಔಟಾಗದೆ 16
ಇತರೆ: (ಲೆಗ್‌ಬೈ-1, ವೈಡ್-1) 02
ವಿಕೆಟ್ ಪತನ: 1-55 (ಎಸ್.ಬದರೀನಾಥ್; 7.3), 2-116 (ಫಾಫ್ ಡು ಪ್ಲೆಸ್ಸಿಸ್; 16.1), 3-117 (ಸುರೇಶ್ ರೈನಾ; 16.3).
ಬೌಲಿಂಗ್: ಅಶೋಕ್ ಮೆನಾರಿಯಾ 2-0 -10-0, ಸ್ಟುವರ್ಟ್ ಬಿನ್ನಿ 2-0-20-0, ಅಮಿತ್ ಸಿಂಗ್ 4-0-45-0 (ವೈಡ್-1), ಕೆವೊನ್ ಕೂಪರ್ 4-0-23-2, ಬ್ರಾಡ್ ಹಾಗ್ 4-0-18-1, ಸಿದ್ದಾರ್ಥ್ ತ್ರಿವೇದಿ 4-0-30-0
ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 7 ವಿಕೆಟ್‌ಗಳ ಗೆಲುವು.
ಪಂದ್ಯ ಶ್ರೇಷ್ಠ: ಫಾಫ್ ಡು ಪ್ಲೆಸ್ಸಿಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.