ADVERTISEMENT

ಚೆಸ್: ಸ್ಟ್ಯಾನಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:35 IST
Last Updated 13 ಫೆಬ್ರುವರಿ 2011, 18:35 IST

ಮಂಗಳೂರು: ಶಿವಮೊಗ್ಗದ ಜಿ.ಎ. ಸ್ಟ್ಯಾನಿಗೆ ಎರಡು ತಿಂಗಳ ಅವಧಿಯಲ್ಲಿ ಎರಡನೇ ರಾಜ್ಯ ಚೆಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬೆಂಗಳೂರಿನಲ್ಲಿ ಕಳೆದ ತಿಂಗಳು ರಾಜ್ಯ ಚೆಸ್ (ಕ್ಲಾಸಿಕಲ್) ಚಾಂಪಿಯನ್‌ಷಿಪ್ ಜಯಿಸಿದ್ದ ಸ್ಟ್ಯಾನಿ, ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ರ್ಯಾಪಿಡ್ ಓಪನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲೂ ಮೊದಲಿಗರಾದರು.

ಸ್ಟ್ಯಾನಿ ಮತ್ತು ಮಂಗಳೂರಿನವರೇ ಆದ ಎಂ.ಜಿ.ಗಹನ್ 9 ಸುತ್ತುಗಳಿಂದ 8 ಪಾಯಿಂಟ್ಸ್ ಸಂಗ್ರಹಿಸಿದ್ದರು. ಆದರೆ ಟೈಬ್ರೇಕ್ ಆಧಾರದಲ್ಲಿ ಸ್ಟ್ಯಾನಿಗೆ ಅಗ್ರಸ್ಥಾನ ಒಲಿಯಿತು. ಸ್ಟ್ಯಾನಿ, ಹಾಲಿ ರಾಷ್ಟ್ರೀಯ 17 ವರ್ಷದೊಳಗಿನವರ ಚಾಂಪಿಯನ್ ಕೂಡ. ಸ್ಟ್ಯಾನಿ ಮತ್ತು ಗಹನ್, ರಾಷ್ಟ್ರೀಯ ರ್ಯಾಪಿಡ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅರ್ಹತೆ ಗಳಿಸಿದರು.

ಗಹನ್ ಎರಡನೇ ಸ್ಥಾನ ಪಡೆದರೆ, ಮೈಸೂರಿನ ಐಎಂ ಎಂ.ಎಸ್.ತೇಜಕುಮಾರ್ (7), ಮಂಗಳೂರಿನ ಅಂಟಾನಿಯೊ ವಿಯಾನಿ ಡಿಕುನ್ಹ ಮತ್ತು ಜೆ.ಮಂಜುನಾಥ್ ತಲಾ ಏಳು ಪಾಯಿಂಟ್ಸ್ ಸಂಗ್ರಹಿಸಿದರೂ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನ ಪಡೆದರು. ಅರವಿಂದ ಶಾಸ್ತ್ರಿ ಆರನೇ ಹಾಗೂ ಎನ್. ಸಂಜಯ್ ಏಳನೇ ಸ್ಥಾನ ಪಡೆದರು.

ಮಂಗಳೂರು ಚೆಸ್ ಅಕಾಡೆಮಿ ಮತ್ತು ಭಾರತೀಯ ವಿದ್ಯಾಭವನ ಜಂಟಿ ಆಶ್ರಯದಲ್ಲಿ ನಡೆದ ಎರಡು ದಿನಗಳ ಈ ಕೂಟದ ಅಂತಿಮ (9ನೇ) ಸುತ್ತಿನಲ್ಲಿ ಸ್ಟ್ಯಾನಿ, ಬೆಂಗಳೂರಿನ ವಿ.ರಾಘವೇಂದ್ರ (6.5) ಅವರನ್ನು ಮಣಿಸಿದರೆ, ಗಹನ್, ಇನ್ನೊಬ್ಬ ಸ್ಥಳೀಯ ಆಟಗಾರ ವಿಯಾನಿ ವಿರುದ್ಧ ಜಯಗಳಿಸಿದರು.

ಮೂರನೇ ಬೋಡ್‌ನಲ್ಲಿ ತೇಜ ಕುಮಾರ್, ಬೆಂಗಳೂರಿನ ಅರವಿಂದ ಶಾಸ್ತ್ರಿ (6.5) ವಿರುದ್ಧ ಜಯಗಳಿಸಿ ದರು. ಶಿವಮೊಗ್ಗದ ಶ್ರೀಕೃಷ್ಣ ಉಡುಪ (6) ಮತ್ತು ಅರ್ಜುನ ಯು.ಪ್ರಭು (6) ನಡುವೆ ಪಂದ್ಯ ಡ್ರಾ ಆಯಿತು. ಬೆಂಗಳೂರಿನ ದುರ್ಗೇಶ್ ಕೆ. (6), ಮಂಗಳೂರಿನ ಜೆ.ಮಂಜು ನಾಥ್‌ಗೆ ಮಣಿದರು.

ವೈಯಕ್ತಿಕ ಪ್ರಶಸ್ತಿ: ಆರ್.ಕ್ಷಿತಿಜ್ (5.5), ಕೆ.ಎನ್.ರಜತ್ ರಾವ್ (4.5) 10 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ; ಸ್ವಾತಿ ಭಟ್ (4.5) ಮತ್ತು ಓಜಸಿ ಗೋಪಾಲ ಕೃಷ್ಣ  (3) 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ; ಶರಣ್ ರಾವ್ (6) ಮತ್ತು ಬೆಂಗಳೂರಿನ ಅರವಿಂದ ರಾಮನಾಥ ಅಯ್ಯರ್ (5).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.