ರಿಯೊ ಡಿ ಜನೈರೊ (ರಾಯಿಟರ್ಸ್): ಜಿಮ್ನಾಸ್ಟಿಕ್ಸ್‌ನಲ್ಲಿ ತಮಗೆ ಸರಿಸಾಟಿಯಾಗಿ ನಿಲ್ಲುವವರು ಯಾರೂ ಇಲ್ಲ ಎಂಬುದನ್ನು ಅಮೆರಿಕದ ಮಹಿಳೆಯರು ಮತ್ತೊಮ್ಮೆ ತೋರಿಸಿಕೊಟ್ಟರು.
ರಿಯೊ ಒಲಿಂಪಿಕ್ ಕೂಟದಲ್ಲಿ ಮೈನವಿರೇಳಿಸುವ ಪ್ರದರ್ಶನ ನೀಡಿದ ಅಮೆರಿಕದ ಮಹಿಳೆಯರು ತಂಡ ವಿಭಾಗದ ಚಿನ್ನವನ್ನು ತಮ್ಮದಾಗಿಸಿಕೊಂಡರು.
ವಿಶ್ವಚಾಂಪಿಯನ್ ಸಿಮೊನ್ ಬೈಲ್ಸ್, ಗ್ಯಾಬಿ ಡಗ್ಲಾಸ್, ಆ್ಯಲಿ ರೈಸ್‌ಮನ್, ಲಾರೆನ್ ಹೆರ್ನಾಂಡೆಜ್ ಮತ್ತು ಮ್ಯಾಡಿಸನ್ ಕೊಸಿಯಾನ್ ಅವರನ್ನೊಳಗೊಂಡ ಅಮೆರಿಕ ಒಟ್ಟು 184.897 ಪಾಯಿಂಟ್‌ಗಳನ್ನು ಗಳಿಸಿ ಅಗ್ರಸ್ಥಾನ ಪಡೆಯಿತು.
ಲಂಡನ್ ಒಲಿಂಪಿಕ್ಸ್‌ನಲ್ಲೂ ಈ ವಿಭಾಗದ ಚಿನ್ನ ಅಮೆರಿಕದ ಪಾಲಾಗಿತ್ತು. ಅಮೆರಿಕ ಮಹಿಳೆಯರ ತಂಡ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಜಯಿಸಿದ್ದು ಇದೇ ಮೊದಲು.
176.688 ಪಾಯಿಂಟ್ ಪಡೆದ ರಷ್ಯಾ ಮತ್ತು 176.003 ಪಾಯಿಂಟ್ ಕಲೆಹಾಕಿದ ಚೀನಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿತು.
ಅಮೆರಿಕ 8.209 ಪಾಯಿಂಟ್‌ಗಳ ಭಾರಿ ಅಂತರದಿಂದ ಚಿನ್ನ ಗೆದ್ದದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ. ಜಿಮ್ನಾಸ್ಟಿಕ್ಸ್‌ನಲ್ಲಿ ಇಷ್ಟೊಂದು ಅಂತರ ಕಾಯ್ದುಕೊಳ್ಳುವುದು ಸುಲಭವಲ್ಲ. ರಷ್ಯಾ ಮತ್ತು ಚೀನಾ ತಂಡಗಳ ನಡುವಿನ ಪಾಯಿಂಟ್‌ಗಳ ಅಂತರ ಕೇವಲ 0.685 ಆಗಿದೆ.
ಬೆಳ್ಳಿ ಗೆದ್ದ ರಷ್ಯಾ ಮತ್ತು ಫೈನಲ್‌ನಲ್ಲಿ ಕೊನೆಯ ಸ್ಥಾನ ಪಡೆದ ಬ್ರೆಜಿಲ್ ತಂಡಗಳ ನಡುವಿನ ಪಾಯಿಂಟ್‌ಗಳ ವ್ಯತ್ಯಾಸ 4.601 ಆಗಿದೆ. ಅಮೆರಿಕದ ಸ್ಪರ್ಧಿಗಳ ಪ್ರದರ್ಶನ ಎಷ್ಟೊಂದು ಆಕರ್ಷವಾಗಿತ್ತು ಎಂಬುದಕ್ಕೆ ಅವರು ಕಲೆಹಾಕಿದ ಪಾಯಿಂಟ್‌ಗಳೇ ಸಾಕ್ಷಿ.
ಸಿಮೊನ್ ಬೈಲ್ಸ್ ರಿಯೊ ಕೂಟದಲ್ಲಿ ಐದು ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಮೊದಲ ಚಿನ್ನವನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.