ADVERTISEMENT

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಭಾರತ ತಂಡ ಇಲ್ಲಿ ಆರಂಭವಾದ 10ನೇ ಎಫ್‌ಐಎಚ್‌ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ವೀರೋಚಿತ ಸೋಲು ಅನುಭವಿಸಿತು.

ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 2-3 ರಲ್ಲಿ ಪ್ರಬಲ ಹಾಲೆಂಡ್‌ ಕೈಯಲ್ಲಿ ಪರಾಭವಗೊಂಡಿತು.
ಎರಡು ಗೋಲುಗಳನ್ನು ತಂದಿತ್ತ ಮಿಲಾನ್‌ ವಾಲ್‌ ಬಾಲ್‌ (3 ಮತ್ತು 28ನೇ ನಿಮಿಷ) ಹಾಲೆಂಡ್‌ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಮತ್ತೊಂದು ಗೋಲನ್ನು ಮಾರ್ಕ್‌ ರಿಜ್‌ಕೆರ್ಸ್‌ (25) ತಂದಿತ್ತರು.

ಗುರ್ಜಿಂದರ್‌ ಸಿಂಗ್‌ 13ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಆತಿಥೇಯರಿಗೆ ಮೊದಲ ಗೋಲು ತಂದಿತ್ತರು. ಮತ್ತೊಂದು ಗೋಲು ಆಕಾಶ್‌ದೀಪ್‌ ಸಿಂಗ್ (42) ಸ್ಟಿಕ್‌ನಿಂದ ದಾಖಲಾಯಿತು. ಪಂದ್ಯದ ಆರಂಭದ ಕೆಲವು ನಿಮಿಷಗಳಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಆ ಬಳಿಕ ಹಾಲೆಂಡ್‌ ಆಟಗಾರರು ಪ್ರಭುತ್ವ ಮೆರೆದರು.

ಶನಿವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ಕೆನಡಾ ಜೊತೆ ಪೈಪೋಟಿ ನಡೆಸಲಿದೆ. ಹಾಲೆಂಡ್‌ ತಂಡ ಕೊರಿಯಾದ ಸವಾಲನ್ನು ಎದುರಿಸಲಿದೆ.
ಮೊದಲ ದಿನದ ಇತರ ಪಂದ್ಯಗಳಲ್ಲಿ ಪಾಕಿಸ್ತಾನ 3-2 ರಲ್ಲಿ ಈಜಿಪ್ಟ್‌ ಎದುರೂ, ಸ್ಪೇನ್‌ ಇದೇ ಅಂತರದಲ್ಲಿ ಫ್ರಾನ್ಸ್‌ನ ಮೇಲೂ ಜಯ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.