ADVERTISEMENT

ಜೊಕೊವಿಚ್‌– ನಡಾಲ್‌ ಪೈಪೋಟಿ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ನಲ್ಲಿ ಎಡವಿದ ವಾವ್ರಿಂಕಾ, ಗ್ಯಾಸ್ಕೆಟ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ನ್ಯೂಯಾರ್ಕ್‌ (ಎಎಫ್‌ಪಿ):ವಿಶ್ವದ ಅಗ್ರ ರಿ್ಯಾಂಕ್‌ನ ಆಟಗಾರ ನೊವಾಕ್‌ ಜೊಕೊವಿಚ್‌ ಮತ್ತು ಸ್ಪೇನ್‌ನ ರಫೆಲ್‌ ನಡಾಲ್‌ ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೋಮವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸುವರು.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ನಡಾಲ್‌ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕೆಟ್‌ ಅವರನ್ನು ಸುಲಭವಾಗಿ ಮಣಿಸಿದರೆ, ಸರ್ಬಿಯದ ಜೊಕೊವಿಚ್‌ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ ವಿರುದ್ಧ ಪ್ರಯಾಸದ ಗೆಲುವು ಪಡೆದು ಫೈನಲ್‌ ಪ್ರವೇಶಿಸಿದರು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ನಡಾಲ್‌ 6–4, 7–6, 6–2 ರಲ್ಲಿ ಗೆಲುವು ಸಾಧಿಸಿದರು. ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಆಟ ಪ್ರದರ್ಶಿಸಿರುವ ನಡಾಲ್‌ ಎರಡು ಗಂಟೆ 21 ನಿಮಿಷಗಳ ಹೋರಾಟದ ಬಳಿಕ ಜಯ ತಮ್ಮದಾಗಿಸಿಕೊಂಡರು.

ನಡಾಲ್‌ ಎರಡನೇ ಸೆಟ್‌ನಲ್ಲಿ ಮಾತ್ರ ಅಲ್ಪ ಪ್ರತಿರೋಧ ಎದುರಿಸಿದರು. ಈ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಸ್ಪೇನ್‌ನ ಆಟಗಾರ ಸರ್ವ್‌ ಕಳೆದುಕೊಂಡರು. ಆದರೆ ತಿರುಗೇಟು ನೀಡಿ ಟೈಬ್ರೇಕರ್‌ನಲ್ಲಿ ಗೆಲುವು ಒಲಿಸಿಕೊಂಡರು. ಮೂರನೇ ಸೆಟ್‌ನಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದ ಅವರು ಎದುರಾಳಿಗೆ ಕೇವಲ ಎರಡು ಗೇಮ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು.

ಜೊಕೊವಿಚ್‌ ಜಯ ಸಾಧಿಸಲು ಸಾಕಷ್ಟು ಪರಿಶ್ರಮಪಟ್ಟರು. ಒಂಬತ್ತನೇ ಶ್ರೇಯಾಂಕದ ಆಟಗಾರ ವಾವ್ರಿಂಕಾ ಒಡ್ಡಿದ ಸವಾಲನ್ನು ಕೊನೆಗೂ ಮೆಟ್ಟಿನಿಂತು 2–6, 7–6, 3–6, 6–3, 6–4 ರಲ್ಲಿ ಗೆಲುವು ಪಡೆದರು. ಈ ಪಂದ್ಯ ನಾಲ್ಕು ಗಂಟೆ ಒಂಬತ್ತು ನಿಮಿಷಗಳ ಕಾಲ ನಡೆಯಿತು. ಸರ್ಬಿಯದ ಆಟಗಾರ ಸತತ ನಾಲ್ಕನೇ ಬಾರಿ ಇಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

‘ವಾವ್ರಿಂಕಾ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಪ್ರಯಾಸಪಟ್ಟೆ. ಆದರೆ ನಿರ್ಣಾಯಕ ಸಂದರ್ಭಗಳಲ್ಲಿ ಶ್ರೇಷ್ಠ ಆಟ ತೋರಲು ಸಾಧ್ಯವಾದದ್ದು ನನ್ನ ಅದೃಷ್ಟ ಎನ್ನಬೇಕು’ ಎಂದು ಪಂದ್ಯದ ಬಳಿಕ ಜೊಕೊವಿಚ್‌ ಪ್ರತಿಕ್ರಿಯಿಸಿದ್ದಾರೆ.

ಮೊದಲ ಹಾಗೂ ಮೂರನೇ ಸೆಟ್‌ನಲ್ಲಿ ಸೋಲು ಅನುಭವಿಸಿದ ಜೊಕೊವಿಚ್‌ ಕೊನೆಯ ಎರಡು ಸೆಟ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಐದನೇ ಸೆಟ್‌ನ ಮೂರನೇ ಗೇಮ್‌ನಲ್ಲಿ ತುರುಸಿನ ಪೈಪೋಟಿ ಕಂಡುಬಂತು. 21 ನಿಮಿಷಗಳ ಕಾಲ ನಡೆದ ಈ ಗೇಮ್‌ ವಾವ್ರಿಂಕಾ ಗೆದ್ದುಕೊಂಡರು. ಆ ಬಳಿಕ ಎಚ್ಚರಿಕೆಯ ಪ್ರದರ್ಶನ ನೀಡಿದ ಅಗ್ರ ಶ್ರೇಯಾಂಕದ ಆಟಗಾರ ಸೆಟ್‌ ಹಾಗೂ ಪಂದ್ಯ ತಮ್ಮದಾಗಿಸಿಕೊಂಡರು.

ನಡಾಲ್‌ ಹಾಗೂ ಜೊಕೊವಿಚ್‌ ನಡುವಿನ ಫೈನಲ್‌ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಇವರಿಬ್ಬರು ಒಟ್ಟು 36 ಸಲ ಪರಸ್ಪರ ಎದುರಾಗಿದ್ದು, ಸ್ಪೇನ್‌ನ ಆಟಗಾರ ಎದುರಾಳಿಯ ವಿರುದ್ಧ 21–15ರ ಗೆಲುವಿನ ದಾಖಲೆ ಹೊಂದಿದ್ದಾರೆ. ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಐದು ಸೆಟ್‌ಗಳ ಹೋರಾಟದ ಬಳಿಕ ನಡಾಲ್‌ ಗೆಲುವು ಸಾಧಿಸಿದ್ದರು.

2010ರ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ನಡಾಲ್‌ ಸರ್ಬಿಯದ ಆಟಗಾರನನ್ನು ಮಣಿಸಿದ್ದರೆ, 2011ರ ಫೈನಲ್‌ನಲ್ಲಿ ಇದೇ ಆಟಗಾರನ ಕೈಯಲ್ಲಿ ಸೋಲು ಅನುಭವಿಸಿದ್ದರು. ಇದೀಗ ಫ್ಲಶಿಂಗ್‌ ಮೆಡೋಸ್‌ನಲ್ಲಿ ಫೈನಲ್‌ನಲ್ಲಿ ಇವರು ಮೂರನೇ ಬಾರಿ ಎದುರಾಗುತ್ತಿದ್ದು, ಗೆಲುವು ಯಾರಿಗೆ ಒಲಿಯುತ್ತದೆ ಎಂಬ ಕುತೂಹಲದಲ್ಲಿ ಟೆನಿಸ್‌ ಪ್ರೇಮಿಗಳು ಇದ್ದಾರೆ.

‘ನೊವಾಕ್‌ ಒಬ್ಬ ಚಾಂಪಿಯನ್‌. ಕಠಿಣ ಪ್ರತಿಸ್ಪರ್ಧಿಯೂ ಹೌದು. ಆದ್ದರಿಂದ ಫೈನಲ್‌ ಪಂದ್ಯ ಸವಾಲಿನಿಂದ ಕೂಡಿರಲಿದೆ. ಆದರೆ ತಕ್ಕ ರೀತಿಯಲ್ಲಿ ಸಜ್ಜಾಗುವ ವಿಶ್ವಾಸ ನನ್ನದು’ ಎಂದು ನಡಾಲ್‌ ಹೇಳಿದ್ದಾರೆ. ನಡಾಲ್‌ ವೃತ್ತಿಜೀವನದ 13ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ಜೊಕೊವಿಚ್‌ ತಮ್ಮ ಏಳನೇ ಕಿರೀಟದ ಕನಸಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT