ADVERTISEMENT

ಜೊಕೊವಿಚ್ `ಹ್ಯಾಟ್ರಿಕ್' ಸಾಧನೆ

ಆಸ್ಟ್ರೇಲಿಯಾ ಓಪನ್: ಮೆಲ್ಬರ್ನ್ ಪಾಕ್‌ನಲ್ಲಿ ಸರ್ಬಿಯಾ ಆಟಗಾರನ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2013, 19:59 IST
Last Updated 27 ಜನವರಿ 2013, 19:59 IST
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ನೊವಾಕ್ ಜೊಕೊವಿಚ್ ಟ್ರೋಫಿಯೊಂದಿಗೆ
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ನೊವಾಕ್ ಜೊಕೊವಿಚ್ ಟ್ರೋಫಿಯೊಂದಿಗೆ   

ಮೆಲ್ಬರ್ನ್ (ರಾಯಿಟರ್ಸ್):  ಮೆಲ್ಬರ್ನ್ ಪಾರ್ಕ್‌ನಲ್ಲಿ ಮತ್ತೆ ಪಾರಮ್ಯ ಸಾಧಿಸಿದ್ದು ನೊವಾಕ್ ಜೊಕೊವಿಚ್. 40 ವರ್ಷಗಳ ಬಳಿಕ ಸತತ ಮೂರು ಬಾರಿ ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್ ಜಯಿಸಿದ ಸಾಧನೆಗೆ ಸರ್ಬಿಯಾದ ಈ ಆಟಗಾರ ಪಾತ್ರರಾದರು.

ಅದೊಂದು ಅದ್ಭುತ ಹೋರಾಟ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಸಾಗಿದ ಪಂದ್ಯವದು. ಆದರೆ ಕೊನೆಯಲ್ಲಿ ಗೆಲುವಿನ ನಗು ಬೀರಿದ್ದು ಜೊಕೊವಿಚ್. ಭಾನುವಾರ ಇಲ್ಲಿ ಕೊನೆಗೊಂಡ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಜೊಕೊವಿಚ್ ಮತ್ತೆ ಚಾಂಪಿಯನ್ ಆದರು.

ರಾಡ್ ಲೆವೆರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜೊಕೊವಿಚ್ 6-7, 7-6, 6-3, 6-2ರಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಅವರನ್ನು ಪರಾಭವಗೊಳಿಸಿದರು.

171 ನಿಮಿಷಗಳ ಹೋರಾಟದಲ್ಲಿ ಅಷ್ಟೇ ಅದ್ಭುತ ಪ್ರದರ್ಶನ ತೋರಿದ್ದು ಮರ‌್ರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಹಾಗೂ ಅಮೆರಿಕ ಓಪನ್ ಚಾಂಪಿಯನ್ ಆಗಿದ್ದ ಮರ್ರೆ ಈ ಬಾರಿ ಅಂತಿಮ ಘಟ್ಟದಲ್ಲಿ ಎಡವಿದರು. ಆಡಿದ ಆರು ಗ್ರ್ಯಾನ್‌ಸ್ಲಾಮ್ ಫೈನಲ್‌ಗಳಲ್ಲಿ ಅವರು ಐದರಲ್ಲಿ ಸೋಲು ಕಂಡಿದ್ದಾರೆ. ಮರ್ರೆ ಈ ಪಂದ್ಯದ ವೇಳೆ ಗಾಯಕ್ಕೆ ಒಳಗಾದರು.

ಹಾಲಿ ಚಾಂಪಿಯನ್ ಕೂಡ ಆಗಿರುವ ಜೊಕೊವಿಚ್ ಈ ಮೂಲಕ ಮೆಲ್ಬರ್ನ್ ಪಾರ್ಕ್‌ನಲ್ಲಿ ಹ್ಯಾಟ್ರಿಕ್ ಗ್ರ್ಯಾನ್‌ಸ್ಲಾಮ್ ಸಾಧನೆಗೆ ಕಾರಣರಾದರು. 1965ರಲ್ಲಿ ರಾಯ್ ಎಮರ್ಸನ್ ನಿರ್ಮಿಸಿದ್ದ ದಾಖಲೆ ಬಳಿಕ ಯಾರೂ ಇಂತಹ ಸಾಧನೆ ಮಾಡಿರಲಿಲ್ಲ. ಎಮರ್ಸನ್ ಸತತ ಐದು ಬಾರಿ ಗೆದ್ದಿದ್ದರು.

ವಿಶ್ವ ಟೆನಿಸ್‌ನ ಅಗ್ರ ರ್‍ಯಾಂಕಿಂಗ್‌ನ ಆಟಗಾರ ಜೊಕೊವಿಚ್ ಅವರನ್ನು ಮೊದಲ ಸೆಟ್‌ನಲ್ಲಿಯೇ ನಿಯಂತ್ರಿಸಿದ ಮರ್ರೆ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದರು. ಈ ಸೆಟ್ ಟೈಬ್ರೇಕರ್ ತಲುಪಿತ್ತು. ಆದರೆ ನಂತರದ ಸೆಟ್‌ಗಳಲ್ಲಿ ಅದೇ ಮಟ್ಟದ ಪ್ರದರ್ಶನ ತೋರುವಲ್ಲಿ ಮೂರನೇ ಶ್ರೇಯಾಂಕದ ಮರ‌್ರೆಗೆ ಸಾಧ್ಯವಾಗಲಿಲ್ಲ.

25 ವರ್ಷ ವಯಸ್ಸಿನ ಜೊಕೊವಿಚ್‌ಗೆ ಇದು ಒಟ್ಟಾರೆ ಆರನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಕಿರೀಟವಾಗಿದೆ. `ಇದು ನನ್ನ ಪಾಲಿನ ಸ್ಮರಣೀಯ ಕ್ಷಣ. ನನಗೆ ಪ್ರಿಯವಾದ ಗ್ರ್ಯಾನ್‌ಸ್ಲಾಮ್ ಇದು' ಎಂದು ಅವರು ನುಡಿದಿದ್ದಾರೆ.

ಜರ್ಮಿಳಾ-ಎಬ್ಡೆನ್‌ಗೆ ಪ್ರಶಸ್ತಿ: ಆಸ್ಟ್ರೇಲಿಯಾದ ಜರ್ಮಿಳಾ ಗಜೊಸೋವಾ ಹಾಗೂ ಮಟ್ ಎಬ್ಡೆನ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. ಅವರು ಫೈನಲ್‌ನಲ್ಲಿ 6-3, 7-5ರಲ್ಲಿ ಜೆಕ್ ಗಣರಾಜ್ಯದ ಫ್ರಾಂಟಿಸೆಕ್ ಸೆರಾಮಿಕ್ ಹಾಗೂ ಲೂಸಿ ಹ್ರಾಡೆಕಾ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.