ADVERTISEMENT

ಟೆನಿಸ್‌: ನಿಕ್ಷೇಪ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಭರವಸೆಯ ಆಟಗಾರ ಕರ್ನಾಟಕದ ಬಿ.ಆರ್‌. ನಿಕ್ಷೇಪ್ ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ನಡೆಯುತ್ತಿರುವ ಡಿ.ಎಸ್‌. ಮ್ಯಾಕ್ಸ್‌ ಎಐಟಿಎ ಟೆನಿಸ್‌ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದರು.

‘ವೈಲ್ಡ್‌ ಕಾರ್ಡ್‌’ ಪ್ರವೇಶ ಪಡೆದಿರುವ ನಿಕ್ಷೇಪ್‌ ಬುಧವಾರ ನಡೆದ ಪಂದ್ಯದಲ್ಲಿ 6–4, 6–4ರಲ್ಲಿ ಆತಿಥೇಯ ರಾಜ್ಯದ ಸಾಗರ್‌ ಮಂಜಣ್ಣ ಎದುರು ಗೆಲುವು ಸಾಧಿಸಿದರು. ಆದರೆ, ಮೂರನೇ ಶ್ರೇಯಾಂಕದ ಸೌರವ್‌ ಸುಕುಲ್‌  ನಿರಾಸೆ ಅನುಭವಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಈ ಆಟಗಾರ 6–7, 5–7ರಲ್ಲಿ ಶೇಖ್‌ ಅಬ್ದುಲ್ಲಾ ಎದುರು ಆಘಾತಕ್ಕೆ ಒಳಗಾದರು.

ಕ್ವಾರ್ಟರ್‌ ಫೈನಲ್‌ಗೆ ಪ್ರಗತಿ: ಮೂಲತಃ ಕರ್ನಾಟಕದವರಾದರೂ ತಮಿಳುನಾಡು ತಂಡವನ್ನು ಪ್ರತಿನಿಧಿಸುವ ಪ್ರಗತಿ ನಟರಾಜನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಪ್ರೀ  ಕ್ವಾರ್ಟರ್‌ ಫೈನಲ್‌ ಸೆಣಸಾಟದಲ್ಲಿ ಪ್ರಗತಿ 6–7, 6–2, 6–3ರಲ್ಲಿ ಕರ್ನಾಟಕದ ವಾರುಣ್ಯ ಚಂದ್ರಶೇಖರ್‌ ಮೇಲೆ ಜಯ ಪಡೆದರು.

ಇದೇ ವಿಭಾಗದ ಇನ್ನಷ್ಟು ಪಂದ್ಯಗಳಲ್ಲಿ ಕರ್ನಾಟಕದ ಆಶಾ ನಂದಕುಮಾರ್‌ 6–2, 6–3ರಲ್ಲಿ ದಾಮಿನಿ ಶರ್ಮಾ ಮೇಲೂ, ಅಮೃತಾ ಮುಖರ್ಜಿ 6–3, 6–0ರಲ್ಲಿ ಪ್ರೀತಿ ಉಜ್ಜಯಿನಿ ವಿರುದ್ಧವೂ, ಆದ್ಯ್ನಾ ನಾಯ್ಕ್‌ 6–1, 6–4ರಲ್ಲಿ ಮೌಲಿಕಾ ರಾಮ್‌ ಮೇಲೂ, ನಿತ್ಯರಾಜ್‌ ಬಾಬುರಾಜ್‌ 6–7, 6–3, 6–4ರಲ್ಲಿ ಅರುಷಿ ಭೂಷಣ್‌ ವಿರುದ್ಧವೂ, ರಿಯಾ ಭಾಟಿಯಾ 6–0, 6–3ರಲ್ಲಿ ಅಮಲಾ ಅಮೊಲ್‌ ವಾವ್ರಿಕ್‌ ಎದುರು ಜಯ ಸಾಧಿಸಿ ಎಂಟರ ಘಟ್ಟ ತಲುಪಿದರು.

ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಇನ್ನಷ್ಟು ಪಂದ್ಯಗಳಲ್ಲಿ ವಿನೋದ್‌ ಶ್ರೀಧರ್‌ 6–2, 6–2ರಲ್ಲಿ ಸೌರಭ್‌ ಪಾಟೀಲ್ ಮೇಲೂ, ವಿಜಯ್‌ ಕಣ್ಣನ್‌ 6–3, 7–5ರಲ್ಲಿ ಸಾಗರ್‌ ಅಜುಹಾ ವಿರುದ್ಧವೂ, ರಮೇಶ್‌ ವಿಘ್ನೇಶ್ವರನ್‌ 6–3, 6–2ರಲ್ಲಿ ರಿಷಿಬ್‌ ದೇವ್‌ ತಹಾ ಕಪಾಡಿಯಾ ಮೇಲೂ, ಸೂರಜ್‌ ಆರ್‌. ಪ್ರಬೋಧ್‌್ 6–1, 6–3ರಲ್ಲಿ ಕುಮಾರ್‌ ಪಿ. ಶ್ರದ್ಧಾ ವಿರುದ್ಧವೂ, ಮೋಹಿತ್‌ ಮಯೂರ್‌ 6–1, 7–6ರಲ್ಲಿ ಎಲ್‌. ಬಾಲಾಜಿ ಮೇಲೂ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.