ADVERTISEMENT

ಟೆನಿಸ್‌: ಪ್ರಧಾನ ಹಂತಕ್ಕೆ ದೇವವರ್ಮನ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಕೌಲಾಲಂಪುರ (ಪಿಟಿಐ): ಭಾರತದ ಅಗ್ರಮಾನ್ಯ ಟೆನಿಸ್‌ ಆಟಗಾರ ಸೋಮದೇವ್‌ ದೇವವರ್ಮನ್‌ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಧಾನ ಹಂತ ಪ್ರವೇಶಿಸಿದ್ದಾರೆ.

ಅರ್ಹತಾ ಹಂತದ ಮೂರನೇ ಪಂದ್ಯದಲ್ಲಿ ಸೋಮ್‌ 7-5, 7-5ರಲ್ಲಿ ಹಾಲೆಂಡ್‌ನ ಜೀನ್‌ ಜೂಲಿಯನ್‌ ರೋಜರ್‌ ಎದುರು ಗೆಲುವು ಸಾಧಿಸಿದರು.

ಕ್ರಮಾಂಕ‌: ಮೇಲೇರಿದ ಸೋಮದೇವ್‌
ನವದೆಹಲಿ (ಪಿಟಿಐ):
ಸೋಮದೇವ್‌ ದೇವವರ್ಮನ್‌ ಎಟಿಪಿ ಟೆನಿಸ್‌ ಸಿಂಗಲ್ಸ್ ಕ್ರಮಾಂಕದಲ್ಲಿ‌ ಮತ್ತೆ 100 ರೊಳಗೆ ಸ್ಥಾನ ಪಡೆದಿದ್ದಾರೆ. ಸೋಮವಾರ ಪ್ರಕಟಿಸಲಾ­ಗಿರುವ ಪಟ್ಟಿಯಲ್ಲಿ ಅವರು 98ನೇ ಕ್ರಮಾಂಕ‌ ಪಡೆದಿದ್ದಾರೆ.

20 ತಿಂಗಳ ಬಳಿಕ ಈ ಸಾಧನೆ ಮಾಡಿದ್ದಾರೆ. ಗಾಯದ ಕಾರಣ ಅವರು ಹೋದ ವರ್ಷ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಕ್ರಮಾಂಕದಲ್ಲಿ ಕುಸಿತ ಕಂಡಿದ್ದರು. ಈ ವರ್ಷ ಪಾಲ್ಗೊಂಡ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಚೇತರಿಕೆ ಕಂಡಿದ್ದಾರೆ. ಅಮೆರಿಕ ಓಪನ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದರು.

ಸೋಮದೇವ್‌ 2011ರಲ್ಲಿ 62ನೇ ಕ್ರಮಾಂಕ‌ ತಲುಪಿದ್ದರು. ಅದು ಅವರ ಶ್ರೇಷ್ಠ ಸಾಧನೆ. ಯೂಕಿ ಭಾಂಬ್ರಿ ಕೂಡ ಕ್ರಮಾಂಕದಲ್ಲಿ ಮೇಲೇರಿದ್ದಾರೆ. ತೈವಾನ್‌ ಚಾಲೆಂಜರ್ಸ್‌ ಟೂರ್ನಿಯಲ್ಲಿ ರನ್ನರ್ ಅಪ್‌ ಆಗಿದ್ದ ಅವರು 190 ಸ್ಥಾನ ಮೇಲೇರಿದ್ದಾರೆ. ಸದ್ಯ ಅವರು 287ನೇ ಕ್ರಮಾಂಕ‌ ಹೊಂದಿದ್ದಾರೆ.

ಡಬಲ್ಸ್‌ನಲ್ಲಿ ಅಮೆರಿಕ ಓಪನ್‌ ಚಾಂಪಿಯನ್‌ ಲಿಯಾಂಡರ್‌ ಪೇಸ್‌ (5), ರೋಹನ್‌ ಬೋಪಣ್ಣ (7) ಹಾಗೂ ಮಹೇಶ್‌ ಭೂಪತಿ (10) ತಮ್ಮ ಸ್ಥಾನ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT