ಆಕ್ಲೆಂಡ್, ನ್ಯೂಜಿಲೆಂಡ್ (ಪಿಟಿಐ): ಭಾರತ ಕ್ರಿಕೆಟ್ ತಂಡ ಮತ್ತೆ ಕಳಪೆ ಪ್ರದರ್ಶನ ಮುಂದುವರಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಸೊನ್ನೆ ಸುತ್ತಿದರೇ ಚೇತೇಶ್ವರ ಪೂಜಾರ ಗಳಿಸಿದ್ದು ಕೇವಲ ಒಂದು ರನ್. ವಿರಾಟ್ ಕೊಹ್ಲಿ ಬ್ಯಾಟಿನಿಂದ ಸಿಡಿದಿದ್ದು ಏಕೈಕ ಬೌಂಡರಿ...
ಇದು ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡದ ಸ್ಥಿತಿ.
ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ 4 ವಿಕೆಟ್ ನಷ್ಟಕ್ಕೆ 329 ರನ್‌ಗಳಿಂದ ಆಟ ಆರಂಭಿಸಿದ ಆತಿಥೇಯ ಕಿವೀಸ್, ಅದಕ್ಕೆ 174 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಯಿತು. ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ ಆಟ ಆರಂಭಿಸಿರುವ ಭಾರತ, ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿದೆ.
ಮಿಂಚಿದ ಮೆಕ್ಲಮ್: ಮೊದಲ ದಿನ 143 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದ ಬ್ರೆಂಡನ್ ಮೆಕ್ಲಮ್, ಎರಡನೇ ದಿನ ದ್ವಿಶತಕ ಸಾಧನೆ ಮಾಡಿದರು. 113.6 ಓವರನಲ್ಲಿ ರವೀಂದ್ರ ಜಡೇಜ ಎಸೆತದಲ್ಲಿ ಅವರು ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ (202ರನ್, 280 ಎಸೆತ) ಈ ಸಾಧನೆ ತೋರಿದರು. ಬಳಿಕ ಅವರು ಇಶಾಂತ್ ಎಸೆತದಲ್ಲಿ ಜಡೇಜಗೆ ವಿಕೆಟ್ ಒಪ್ಪಿಸಿದರು (224ರನ್, 307 ಎ, 29 ಬೌ, 5ಸಿ).
ವೇಗಿ ಇಶಾಂತ್ ವೇಗ: ಗುರುವಾರ ಎರಡು ವಿಕೆಟ್ ಪಡೆದು ಸಂಭ್ರಮಿಸಿದ್ದ ಇಶಾಂತ್ ಶರ್ಮ, ಶುಕ್ರವಾರ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಎರಡನೇ ದಿನ ಅವರು ಕೋರಿ ಆ್ಯಂಡರ್‌ಸನ್, ಬಿ.ಜೆ.ವಾಟ್ಲಿಂಗ್, ಇಸ್ ಸೋಧಿ, ಹಾಗೂ ಮೆಕ್ಲೆಮ್ ವಿಕೆಟ್ ಕಬಳಿಸಿದರು. ಜಡೇಜ ಹಾಗೂ ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.
ಆರಂಭಿಕ ಕುಸಿತ: ಕಿವೀಸ್ ತಂಡದ 503 ರನ್‌ಗಳಿಗೆ ಉತ್ತರವಾಗಿ ಆಟ ಆರಂಭಿಸಿರುವ ಭಾರತ, 10 ರನ್ ಕಲೆಹಾಕುವಷ್ಟರಲ್ಲಿ ಅಮೂಲ್ಯ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದೋನಿ ಬಳಗ ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಾಗ ( ಮುರಳಿ ವಿಜಯ್; 26 ರನ್, 5 ಬೌಂಡರಿ) ತಂಡದ ಒಟ್ಟು ಮೊತ್ತ 51 ರನ್.
ಅರ್ಧ ಶತಕ ಗಳಿಸಿರುವ ರೋಹಿತ್ ಶರ್ಮ (67 ರನ್, 8 ಬೌ, 1ಸಿ) ಹಾಗೂ ಅಜಿಂಕ್ಯಾ ರಹಾನೆ ಸದ್ಯ ಕ್ರೀಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.