ADVERTISEMENT

ಟೆಸ್ಟ್ ಕ್ರಿಕೆಟ್ ರ‌್ಯಾಂಕಿಂಗ್: ಅಗ್ರಸ್ಥಾನದಲ್ಲಿ ಸಚಿನ್, ಜಾಕ್ ಕಾಲಿಸ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ದುಬೈ (ಐಎಎನ್‌ಎಸ್): ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ ಟೆಸ್ಟ್ ಕ್ರಿಕೆಟ್‌ನ ರ‌್ಯಾಂಕಿಂಗ್ ಪಟ್ಟಿಯ ಬ್ಯಾಟಿಂಗ್ ವಿಭಾಗದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಜಾಕ್ ಕಾಲಿಸ್ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಈ ಮೊದಲು ಸಚಿನ್ ಹಾಗೂ ಜಾಲಿಸ್ ಜಂಟಿ ಅಗ್ರಸ್ಥಾನದಲ್ಲಿದ್ದರು. ಶುಕ್ರವಾರ ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯುಲ್ಲಿಯೂ ಅದೇ ಅಗ್ರ ಕ್ರಮಾಂಕವನ್ನು ಉಳಿಸಿಕೊಳ್ಳುವಲ್ಲಿ ಇಬ್ಬರೂ ಆಟಗಾರರು ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್‌ನ ಜೊನಾಥನ್ ಟ್ರಾಟ್ ಹಾಗೂ ಶ್ರೀಲಂಕಾ ತಂಡದ ಉಪ ನಾಯಕ ಕುಮಾರ ಸಂಗಕ್ಕಾರ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಪಡೆದರೆ, ಇಂಗ್ಲೆಂಡ್ ತಂಡದ ಅಲಿಸ್ಟರ್ ಕುಕ್ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ರ‌್ಯಾಂಕಿಂಗ್‌ನಲ್ಲಿ ಕುಸಿತ ಕಂಡಿರುವ ವೀರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಜಂಟಿಯಾಗಿ ಆರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಎ.ಬಿ. ಡಿವಿಲಿಯರ್ಸ್ (ಒಂಬತ್ತನೇ ಸ್ಥಾನ) ಇದೇ ದೇಶದ ಹಾಶೀಮ್ ಆಮ್ಲಾ ಹತ್ತನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಪಾರಮ್ಯ ಮೆರೆದಿರುವ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಗ್ರೇಮ್ ಸ್ವಾನ್ ಮತ್ತು ಜೇಮ್ಸ ಆ್ಯಂಡರ್‌ಸನ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ.

ಈ ವಿಭಾಗದಲ್ಲಿ ಭಾರತದ ಬೌಲರ್‌ಗಳಿಗೆ ಸಿಕ್ಕ ಸ್ಥಾನ ಐದನೇಯದು. ಅದು ವೇಗಿ ಜಹೀರ್ ಖಾನ್ ಅವರಿಗೆ. ಸ್ಪಿನ್ನರ್ ಹರಭಜನ್ ಸಿಂಗ್ ಏಳನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬಾಂಗ್ಲಾ ತಂಡದ ನಾಯಕ ಶಕೀಬ್-ಅಲ್-ಹಸನ್ ಹಾಗೂ ಡೇನಿಯಲ್ ವೆಟೋರಿ ಕ್ರಮವಾಗಿ ಎಂಟು ಹಾಗೂ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಲಂಕಾದ ಸ್ಪಿನ್ನರ್ ರಂಗನಾ ಹೇರತ್ ಈ ಮೊದಲು 23ನೇ ಸ್ಥಾನದಲ್ಲಿದ್ದರು. ಇತ್ತೀಚಿಗೆ ನಡೆದ  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರಿಂದ 19ನೇ ಸ್ಥಾನಕ್ಕೆ ಅವರು ಬಡ್ತಿ ಪಡೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.