ADVERTISEMENT

ಡೇವಿಸ್‌ ಕಪ್‌: ಹಿಂದೆ ಸರಿದ ಯೂಕಿ

ಪಿಟಿಐ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಯೂಕಿ ಭಾಂಬ್ರಿ
ಯೂಕಿ ಭಾಂಬ್ರಿ   

ನವದೆಹಲಿ: ಸಿಂಗಲ್ಸ್‌ ವಿಭಾಗದ ಆಟಗಾರ ಯೂಕಿ ಭಾಂಬ್ರಿ, ಗಾಯದ ಕಾರಣ ಚೀನಾ ವಿರುದ್ಧದ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 107ನೇ ಸ್ಥಾನ ಹೊಂದಿರುವ ಯೂಕಿ, ಇಂಡಿಯಾನ ವೇಲ್ಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಪೈಪೋಟಿಯಲ್ಲಿ ಲುಕಾಸ್‌ ಪೌವಿಲ್ಲೆಗೆ ಆಘಾತ ನೀಡಿದ್ದರು. ಲುಕಾಸ್‌, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿದ್ದರು. ಮಿಯಾಮಿ ಓಪನ್‌ನಲ್ಲಿ ಯೂಕಿ, ಎರಡನೇ ಸುತ್ತು ಪ್ರವೇಶಿಸಿದ್ದರು.

ಎಐಟಿಎ ಆಯ್ಕೆ ಸಮಿತಿ, ಯೂಕಿ ಬದಲಿಗೆ ಪ್ರಜ್ಞೇಶ್‌ ಗುಣೇಶ್ವರನ್‌ಗೆ ತಂಡದಲ್ಲಿ ಸ್ಥಾನ ನೀಡಿದೆ. ಪ್ರಜ್ಞೇಶ್‌, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 246ನೇ ಸ್ಥಾನ ಹೊಂದಿದ್ದಾರೆ. ರಾಮಕುಮಾರ್‌ ರಾಮನಾಥನ್‌ ಮತ್ತು ಸುಮಿತ್‌ ನಗಾಲ್‌ ಅವರೂ ಸಿಂಗಲ್ಸ್‌ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ.

ADVERTISEMENT

ಅನುಭವಿಗಳಾದ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಅವರು ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ವಿಶ್ವ ಗುಂಪಿನ ‘ಪ್ಲೇ ಆಫ್‌’ ಹೋರಾಟದಲ್ಲಿ ಭಾರತ ತಂಡ 2–3ರಿಂದ ಕೆನಡಾ ವಿರುದ್ಧ ಸೋತಿತ್ತು.

ಏಷ್ಯಾ ಒಸೀನಿಯಾ ಗುಂಪು–1ರ ತನ್ನ ಎರಡನೇ ಹೋರಾಟದಲ್ಲಿ ಭಾರತ ತಂಡ ಚೀನಾ ವಿರುದ್ಧ ಸೆಣಸಲಿದೆ. ಈ ಪಂದ್ಯ ಏಪ್ರಿಲ್‌ 6 ಮತ್ತು 7ರಂದು ತಿಯಾಂಜಿನ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.