ADVERTISEMENT

ಡ್ಯಾನಿಯಲ್‌ ವೈಟ್‌ ಶತಕದ ಮಿಂಚು

ವಿಶ್ವ ದಾಖಲೆ ಬರೆದ ಇಂಗ್ಲೆಂಡ್‌

ಪಿಟಿಐ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಡ್ಯಾನಿಯಲ್‌ ವೈಟ್‌
ಡ್ಯಾನಿಯಲ್‌ ವೈಟ್‌   

ಮುಂಬೈ: ಆರಂಭಿಕ ಆಟ ಗಾರ್ತಿ ಡ್ಯಾನಿಯಲ್‌ ವೈಟ್‌ (124; 64ಎ, 15ಬೌಂ, 5ಸಿ) ಅವರ ಮನ ಮೋಹಕ ಶತಕದ ನೆರವಿನಿಂದ ಇಂಗ್ಲೆಂಡ್‌ ತಂಡದವರು ತ್ರಿಕೋನ ಟ್ವೆಂಟಿ–20 ಸರಣಿಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭಾರತವನ್ನು ಮಣಿ ಸಿದ್ದಾರೆ. ಈ ಮೂಲಕ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೊತ್ತ ಬೆನ್ನಟ್ಟಿ ಗೆಲುವು ಪಡೆದ ತಂಡ ಎಂಬ ವಿಶ್ವದಾಖಲೆ ತಮ್ಮದಾಗಿಸಿ ಕೊಂಡಿದ್ದಾರೆ.

2017ರಲ್ಲಿ ಕ್ಯಾನೆಬೆರಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌, ಗರಿಷ್ಠ ಮೊತ್ತ ಬೆನ್ನಟ್ಟಿತ್ತು. ಈಗ ತನ್ನದೇ ಸಾಧನೆ ಉತ್ತಮ ಪಡಿಸಿಕೊಂಡಿದೆ.

ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 198ರನ್‌ ಕಲೆಹಾಕಿತು. ಟ್ವೆಂಟಿ–20 ಮಾದರಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ದಾಖಲಿಸಿದ ಗರಿಷ್ಠ ಮೊತ್ತ ಇದು.

ADVERTISEMENT

ಆಂಗ್ಲರ ನಾಡಿನ ತಂಡಕ್ಕೆ ಈ ಮೊತ್ತ ಅಷ್ಟೇನು ಸವಾಲು ಅನಿಸಲಿಲ್ಲ. ಪ್ರವಾಸಿ ಪಡೆ 18.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಡ್ಯಾನಿಯಲ್‌ ಮತ್ತು ಬ್ರೈಯೊನಿ ಸ್ಮಿತ್‌ (15;11ಎ,2ಬೌಂ) ಸ್ಫೋಟಕ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 32 ಎಸೆತಗಳಲ್ಲಿ 61ರನ್‌ ಸೇರಿಸಿದರು.

ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಗಳಿಸಿದ ಡ್ಯಾನಿಯಲ್‌, ನಂತರವೂ ಭಾರತದ ಬೌಲರ್‌ಗಳನ್ನು ಕಾಡಿದರು. 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ತಾವೆದುರಿಸಿದ 52ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಶತಕದ ಸಂಭ್ರಮ ಆಚರಿಸಿದರು. ಈ ಮೂಲಕ ಟ್ವೆಂಟಿ–20 ಮಾದರಿಯಲ್ಲಿ ಎರಡನೇ ಶತಕ ಗಳಿಸಿದ ಹಿರಿಮೆಗೂ ಪಾತ್ರರಾದರು. ಅವರು ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ್ತಿ. ವೆಸ್ಟ್‌ ಇಂಡೀಸ್‌ನ ಡಿಯಾಂಡ್ರ ದೊತ್ತಿನ್‌ ಮೊದಲು ಈ ಸಾಧನೆ ಮಾಡಿದ್ದರು.

ಮೂರಂಕಿಯ ಗಡಿ ದಾಟಿದ ನಂತರವೂ ಡ್ಯಾನಿಯಲ್‌ ಅಬ್ಬರಿಸಿದರು. ಬೌಂಡರಿ (15) ಮತ್ತು ಸಿಕ್ಸರ್‌ (5) ಮೂಲಕವೇ 90ರನ್‌ ಗಳಿಸಿದ್ದು ಇದಕ್ಕೆ ಸಾಕ್ಷಿ. ವೈಟ್‌ ಔಟಾದ ನಂತರ ನಟಾಲಿಯ ಶೀವರ್‌ (ಔಟಾಗದೆ 12) ಮತ್ತು ಹೀಥರ್‌ ನೈಟ್‌ (ಔಟಾಗದೆ 8) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮಂದಾನ ಮಿಂಚು: ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಮಿಥಾಲಿ ರಾಜ್‌ (53; 43ಎ, 7ಬೌಂ) ಮತ್ತು ಸ್ಮೃತಿ ಮಂದಾನ (76; 40ಎ, 12ಬೌಂ, 2ಸಿ) ಅಬ್ಬರದ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 129ರನ್‌ ಸೇರಿಸಿತು.


   ಸ್ಮೃತಿ ಮಂದಾನ

ಎಡಗೈ ಆಟಗಾರ್ತಿ ಮಂದಾನ, 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು ಟ್ವೆಂಟಿ–20 ಮಾದರಿಯಲ್ಲಿ ಅತಿ ವೇಗವಾಗಿ ಅರ್ಧಶತಕ ದಾಖಲಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಮೊದಲ 10 ಓವರ್‌ಗಳು ಮುಗಿದಾಗ ಭಾರತದ ಖಾತೆಯಲ್ಲಿ 96ರನ್‌ಗಳಿದ್ದವು. ಮಂದಾನ ಮತ್ತು ಮಿಥಾಲಿ 61 ಎಸೆತಗಳಲ್ಲಿ ಶತಕದ ಜೊತೆಯಾಟ ಪೂರೈಸಿದರು.

13ನೇ ಓವರ್‌ನಲ್ಲಿ ಮಂದಾನ, ನಟಾಲಿಯಾ ಶೀವರ್‌ಗೆ ವಿಕೆಟ್‌ ನೀಡಿ ದರು. ಇದರ ಬೆನ್ನಲ್ಲೇ ಮಿಥಾಲಿ ಕೂಡ ಔಟಾದರು. ನಂತರ ಹರ್ಮನ್‌ಪ್ರೀತ್‌ ಕೌರ್‌ (30; 22ಎ, 3ಬೌಂ, 1ಸಿ) ಮತ್ತು ಪೂಜಾ ವಸ್ತ್ರಕರ್‌ (ಔಟಾಗದೆ 22; 10ಎ, 4ಬೌಂ) ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ, 20 ಓವರ್‌ಗಳಲ್ಲಿ 4 ವಿಕೆಟ್‌ಗೆ 198 (ಮಿಥಾಲಿ ರಾಜ್‌ 53, ಸ್ಮೃತಿ ಮಂದಾನ 76, ಹರ್ಮನ್‌ಪ್ರೀತ್‌ ಕೌರ್‌ 30, ವೇದಾ ‌ಕೃಷ್ಣಮೂರ್ತಿ 3, ಪೂಜಾ ವಸ್ತ್ರಕರ್‌ ಔಟಾಗದೆ 22, ಅನುಜಾ ಪಾಟೀಲ್‌ ಔಟಾಗದೆ 2; ತ್ಯಾಸ್‌ ಫಾರಂಟ್‌ 32ಕ್ಕೆ2, ಸೋಫಿ ಎಕ್ಸಲೆಸ್ಟೋನ್‌ 29ಕ್ಕೆ1, ನಟಾಲಿಯ ಶೀವರ್‌ 24ಕ್ಕೆ1).

ಇಂಗ್ಲೆಂಡ್‌: 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 199 (ಡ್ಯಾನಿಯಲ್‌ ವೈಟ್‌ 124, ಬ್ರೈಯೊನಿ ಸ್ಮಿತ್‌ 15, ಟಾಮಿ ಬ್ಯೂಮೊಂಟ್‌ 35, ನಟಾಲಿಯ ಶೀವರ್‌ ಔಟಾಗದೆ 12; ಜೂಲನ್‌ ಗೋಸ್ವಾಮಿ 32ಕ್ಕೆ1, ದೀಪ್ತಿ ಶರ್ಮಾ 36ಕ್ಕೆ2).

ಫಲಿತಾಂಶ: ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಡೇನಿಯೆಲ್ಲೆ ವ್ಯಾಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.