ADVERTISEMENT

ತಿರುಗೇಟು ನೀಡಿದ ವೆಸ್ಟ್ ಇಂಡೀಸ್‌

ಆಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯ

ಏಜೆನ್ಸೀಸ್
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ತಿರುಗೇಟು ನೀಡಿದ ವೆಸ್ಟ್ ಇಂಡೀಸ್‌
ತಿರುಗೇಟು ನೀಡಿದ ವೆಸ್ಟ್ ಇಂಡೀಸ್‌   

ಗ್ರಾಸ್‌ ಐಲೆಟ್‌, ಸೇಂಟ್‌ ಲೂಸಿಯಾ (ಎಎಫ್‌ಪಿ):  ಮೊದಲ ಪಂದ್ಯದಲ್ಲಿ  ಅನಿರೀಕ್ಷಿತ ಸೋಲು ಕಂಡರೂ ಮೈಕೊಡವಿ ನಿಂತ ವೆಸ್ಟ್ ಇಂಡೀಸ್‌ ಜಯದ ಹಾದಿಗೆ ಮರಳಿತು.

ಡ್ಯಾರೆನ್ ಸಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು. ಇದೇ ಕ್ರೀಡಾಂಗಣದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 63 ರನ್‌ಗಳ ಸೋಲು ಕಂಡಿತ್ತು.

ಭಾನುವಾರ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನವನ್ನು ಇನ್ನೂ ಹತ್ತು ಓವರ್‌ ಬಾಕಿ ಇರುವಾಗಲೇ ಆಲೌಟ್ ಮಾಡಿದ ಆತಿಥೇಯರು ಸುಲಭ ಗುರಿ ಬೆನ್ನತ್ತಿ 40ನೇ ಓವರ್‌ನಲ್ಲಿ ಜಯದ ನಗೆ ಬೀರಿದರು.

ADVERTISEMENT

ವೆಸ್ಟ್‌ ಇಂಡೀಸ್ ವೇಗಿಗಳ ದಾಳಿಗೆ ನಲುಗಿದ ಪ್ರವಾಸಿ ತಂಡ ಮೊದಲ 17 ಓವರ್‌ಗಳು ಮುಗಿಯುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ತಂಡದ ಖಾತೆಯಲ್ಲಿ ಇದ್ದದ್ದು 51 ರನ್‌. ಏಳನೇ ವಿಕೆಟ್‌ಗೆ ಅಫ್ಜರ್‌ ಜಜಾಯ್‌ ಮತ್ತು ಗುಲ್ಬದೀನ್ ನಯೀಬ್‌ 30 ರನ್‌ ಸೇರಿಸಿದರೆ ನಯೀಬ್‌ ಮತ್ತು ದೌಲತ್‌ ಜಡ್ರಾನ್‌ ಒಂಬತ್ತನೇ ವಿಕೆಟ್‌ಗೆ 31 ರನ್‌ ಸೇರಿಸಿದರು.

ಈ ಜೊತೆಯಾಟ ಗಳಿಂದಾಗಿ ಆಫ್ಘಾನಿಸ್ತಾನದ ಮೊತ್ತ ಮೂರಂಕಿ ದಾಟಿತು. ವೇಗಿಗಳಾದ ಶಾನನ್ ಗೇಬ್ರಿಯೆಲ್‌, ಜೇಸನ್‌ ಹೋಲ್ಡರ್‌, ಅಲ್ಜಮಿ ಜೋಸೆಫ್‌ ಮತ್ತು ಆಫ್‌ ಸ್ಪಿನ್ನರ್‌ ಆಶ್ಲೆ ನರ್ಸೆ ಗಮನಾರ್ಹ ದಾಳಿ ನಡೆಸಿ ತಲಾ 2ಎರಡು ವಿಕೆಟ್‌ ಕಬಳಿಸಿದರು. ಎದುರಾಳಿಗಳ ಪರಿಣಾಮ ಕಾರಿ ದಾಳಿಯನ್ನು ದಿಟ್ಟವಾಗಿ ಎದುರಿ ಸಿದ್ದು ಎಂಟನೇ ಕ್ರಮಾಂಕದ ಬ್ಯಾಟ್ಸ್‌ ಮನ್‌ ಗುಲ್‌ಬದೀನ್ ನಯೀಬ್‌ ಮಾತ್ರ. 73 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ಸ್ ಮತ್ತು ಬೌಂಡರಿ ಸಿಡಿಸಿದ ಅವರು 51 ರನ್‌ ಗಳಿಸಿ ಕೊನೆಯವರಾಗಿ ಔಟಾದರು.

ಗುರಿ ಬೆನ್ನತ್ತಿದ ಕೆರಿಬಿಯನ್ ನಾಡಿನ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಎವಿನ್‌ ಲೂವಿಸ್‌ ಮತ್ತು ಕೀರನ್‌ ಪೊಲಾರ್ಡ್‌ ಮೊದಲ ವಿಕೆಟ್‌ಗೆ 40 ರನ್‌ ಸೇರಿಸಿದರು. ನಂತರ ಇನಿಂಗ್ಸ್‌ನಲ್ಲಿ ಉತ್ತಮ ಜೊತೆಯಾಟಗಳು ಕಂಡುಬರ ಲಿಲ್ಲ. ಆದರೆ ಮೂರನೇ ಕ್ರಮಾಂಕದ ಶಾಯಿ ಹೋಪ್‌ ಕ್ರೀಸ್‌ಗೆ ಅಂಟಿಕೊಂಡು ಔಟಾಗದೆ 48 ರನ್‌ ಗಳಿಸಿದರು. ಹೀಗಾಗಿ ತಂಡ ಸುಲಭವಾಗಿ ದಡ ಸೇರಿತು.

ಸಂಕ್ಷಿಪ್ತ ಸ್ಕೋರ್‌: ಆಫ್ಘಾನಿಸ್ತಾನ:  37.3 ಓವರ್‌ಗಳಲ್ಲಿ 135ಕ್ಕೆ ಆಲೌಟ್‌ (ಅಸ್ಗರ್‌ ಸ್ಟಾನಿಕ್‌ಜಾಯ್‌ 11, ಮಹಮ್ಮದ್ ನಬಿ 13; ಗುಲ್ಬದೀನ್ ನಯೀಬ್‌ 51, ಶಾನನ್‌ ಗಾಬ್ರಿಯೆಲ್‌ 25ಕ್ಕೆ2, ಜೇಸನ್ ಹೋಲ್ಡರ್‌ 38ಕ್ಕೆ2, ಅಲ್ಜರಿ ಜೋಸೆಫ್  15ಕ್ಕೆ2, ಆಶ್ಲೆ ನರ್ಸೆ 33ಕ್ಕೆ2);

ವೆಸ್ಟ್ ಇಂಡೀಸ್‌: 39.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 138 (ಎವಿನ್‌ ಲೂವಿಸ್‌ 33, ಶಾಯ್ ಹೋಪ್‌ ಔಟಾಗದೆ 48; ರಶೀದ್‌ ಖಾನ್‌ 26ಕ್ಕೆ3 ಗುಲ್ಬದಿಣ್ ನಯೀಬ್‌ 15ಕ್ಕೆ2).

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ನಾಲ್ಕು ವಿಕೆಟ್‌ಗಳ ಜಯ; ಮೂರು ಪಂದ್ಯಗಳ ಸರಣಿ 1–1ರಲ್ಲಿ ಸಮ.
ಪಂದ್ಯಶ್ರೇಷ್ಠ: ಶಾಯ್‌ ಹೋಪ್‌ (ವೆಸ್ಟ್ ಇಂಡೀಸ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.