ADVERTISEMENT

ತ್ರಿಕೋನ ಸರಣಿಗೆ ಭಾರತ ತಂಡ: ರೋಹಿತ್‌ ಶರ್ಮಾಗೆ ನಾಯಕತ್ವ

ಏಜೆನ್ಸೀಸ್
Published 27 ಫೆಬ್ರುವರಿ 2018, 20:49 IST
Last Updated 27 ಫೆಬ್ರುವರಿ 2018, 20:49 IST
ತ್ರಿಕೋನ ಸರಣಿಗೆ ಭಾರತ ತಂಡ: ರೋಹಿತ್‌ ಶರ್ಮಾಗೆ ನಾಯಕತ್ವ
ತ್ರಿಕೋನ ಸರಣಿಗೆ ಭಾರತ ತಂಡ: ರೋಹಿತ್‌ ಶರ್ಮಾಗೆ ನಾಯಕತ್ವ   

ನವದೆಹಲಿ: ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಮುಂದಿನ ತಿಂಗಳು ನಡೆಯುವ ನಿದಹಾಸ್‌ ಟ್ರೋಫಿ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ, ಭಾನುವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಕೆ.ಎಲ್‌.ರಾಹುಲ್‌ ಅವರೂ ತಂಡದಲ್ಲಿದ್ದಾರೆ.

ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ, ರೋಹಿತ್‌ಗೆ ನಾಯಕತ್ವದ ಜವಾಬ್ದಾರಿ ಸಿಕ್ಕಿದೆ. ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟ್ವೆಂಟಿ–20 ಪಂದ್ಯದಲ್ಲೂ ರೋಹಿತ್‌ ತಂಡದ ಸಾರಥ್ಯ ವಹಿಸಿದ್ದರು. ಆ ಪಂದ್ಯದಲ್ಲಿ ಭಾರತ 7ರನ್‌ನಿಂದ ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು.

ADVERTISEMENT

ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಉಪನಾಯಕರಾಗಿದ್ದಾರೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ದೋನಿ, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಮಧ್ಯಮ ವೇಗದ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ, ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌ ಯಾದವ್‌ ಅವರಿಗೂ ವಿಶ್ರಾಂತಿ ನೀಡಲಾಗಿದೆ.  ಮಹಮ್ಮದ್‌ ಸಿರಾಜ್‌, ವಿಕೆಟ್‌ ಕೀಪರ್‌ ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌ ಮತ್ತು ದೀಪಕ್‌ ಹೂಡ ಅವಕಾಶ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಿಂಚಿದ್ದ ಸುರೇಶ್‌ ರೈನಾ ಅವರು ಸ್ಥಾನ ಉಳಿಸಿಕೊಂಡಿದ್ದಾರೆ.

‘ಮುಂದೆ ತಂಡ ಸಾಕಷ್ಟು ಸರಣಿಗಳಲ್ಲಿ ಭಾಗವಹಿಸಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಆಟಗಾರರಿಗೆ ವಿಶ್ರಾಂತಿ ಕೊಟ್ಟಿದ್ದೇವೆ ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ತಿಳಿಸಿದ್ದಾರೆ.

ತ್ರಿಕೋನ ಕ್ರಿಕೆಟ್‌ ಸರಣಿ ಮಾರ್ಚ್‌ 6ರಿಂದ ಕೊಲಂಬೊದಲ್ಲಿರುವ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ತಂಡ ಇಂತಿದೆ: ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌ (ಉಪ ನಾಯಕ), ಕೆ.ಎಲ್‌.ರಾಹುಲ್‌, ಸುರೇಶ್‌ ರೈನಾ, ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌ (ವಿಕೆಟ್‌ ಕೀಪರ್‌), ದೀಪಕ್‌ ಹೂಡಾ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಾಹಲ್‌, ಅಕ್ಷರ್‌ ಪಟೇಲ್‌, ವಿಜಯಶಂಕರ್‌, ಶಾರ್ದೂಲ್‌ ಠಾಕೂರ್‌, ಜಯದೇವ್‌ ಉನದ್ಕತ್‌, ಮಹಮ್ಮದ್‌ ಸಿರಾಜ್‌ ಮತ್ತು ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.