ADVERTISEMENT

ದೋನಿಗೆ ಎಐಪಿಎಸ್ ಗೌರವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ನವದೆಹಲಿ (ಪಿಟಿಐ): ಕ್ರೀಡಾ ಸ್ಫೂರ್ತಿ ಮೆರೆದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ `ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಪ್ರೆಸ್ ಅಸೋಸಿಯೇಷನ್~ (ಎಐಪಿಎಸ್) ಪ್ರಶಸ್ತಿ ಲಭಿಸಿದೆ.

`ಕ್ರೀಡಾ ಸ್ಫೂರ್ತಿ ಮೆರೆದ ದೋನಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾನುವಾರ ರಾತ್ರಿ ಸಿಡ್ನಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು~ ಎಂದು ಎಐಪಿಎಸ್‌ನ ಪ್ರಧಾನ ಕಾರ್ಯದರ್ಶಿ ಆರ್. ಮೊರಿಸ್ ಸಿಡ್ನಿಯಿಂದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಮೂಲಕ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಆಟಗಾರ ಎನ್ನುವ ಕೀರ್ತಿಯನ್ನು ದೋನಿ ತಮ್ಮದಾಗಿಸಿಕೊಂಡರು.

`ಜಗತ್ತಿನಲ್ಲಿ  ಫುಟ್‌ಬಾಲ್ ಕ್ರೀಡೆ ಯನ್ನು ಹೊರತು ಪಡಿಸಿದರೆ, ಕ್ರಿಕೆಟ್ ಹೆಚ್ಚು ಪ್ರಚಾರದಲ್ಲಿದೆ. ಈ ರಂಗದಲ್ಲಿ ದೋನಿ ಪ್ರಶಸ್ತಿ ಪಡೆದಿರುವುದು ಸಂತಸದ ವಿಚಾರ. ಅವರು ಕ್ರೀಡಾ ಮನೋಭಾವದ ಗುಣವನ್ನು ಮೆಕೊಳ್ಳುತ್ತೇನೆ~ ಎಂದು ಮೊರಿಸ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ಚೆಂಡನ್ನು ಬೌಂಡರಿಗಟ್ಟಿದ್ದ ಇಯಾನ್ ಬೆಲ್ ಚೆಂಡು ಬೌಂಡರಿಯ ಗೆರೆ ಮುಟ್ಟಿದೆಯೆಂದು ನಿಧಾನವಾಗಿ ಕ್ರಿಸ್‌ನತ್ತ ತೆರಳುತ್ತಿದ್ದರು. ಆದರೆ, ಚೆಂಡು ಬೌಂಡರಿ ಗೆರೆ ಮುಟ್ಟಿರಲಿಲ್ಲ. ಆಗ ವಿಕೆಟ್ ಕೀಪರ್ ದೋನಿ ರನ್ ಔಟ್ ಮಾಡಿದ್ದರು. ಅಂಪೈರ್ `ಔಟ್~ ಎಂದು ತೀರ್ಪು ನೀಡಿದ್ದರು.
 
ಇದರಿಂದ ಇಂಗ್ಲೆಂಡ್‌ನ ಆಟಗಾರ ಗೊಂದಲಕ್ಕೆ ಒಳಗಾದರು. ಈ ವೇಳೆ ಕ್ರೀಡಾ ಸ್ಫೂರ್ತಿ ಮೆರೆದ ದೋನಿ ಇಂಗ್ಲೆಂಡ್‌ನ ಆಟಗಾರನಿಗೆ ಮತ್ತೆ ಆಡಲು ಅವಕಾಶ ಮಾಡಿಕೊಟ್ಟಿದ್ದರು. ಆದ್ದರಿಂದ ಭಾರತದ ಆಟಗಾರನಿಗೆ ಈ ಗೌರವ ಲಭಿಸಿದೆ.

30 ವರ್ಷದ ಆಟಗಾರ ದೋನಿ 2008 ಮತ್ತು 09ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡುವ `ವರ್ಷದ ಆಟಗಾರ~ ಗೌರವ ಸಹ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.