ADVERTISEMENT

ದೋನಿ, ಸಚಿನ್ ನೆರವಿಲ್ಲ: ಸಮಸ್ಯೆಗಳ ನಡುವೆ ಗೆಲುವಿನ ತುಡಿತ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಬ್ರಿಸ್ಬೇನ್: ಫೈನಲ್‌ನಲ್ಲಿ ಸ್ಥಾನ ಖಚಿತ ಮಾಡಿಕೊಳ್ಳಬೇಕು. ಪಾಯಿಂಟುಗಳ ಪಟ್ಟಿಯಲ್ಲಿ ಶ್ರೀಲಂಕಾಕ್ಕಿಂತ ಭಾರತದ ಸ್ಥಿತಿ ಸ್ವಲ್ಪವೇ ಉತ್ತಮ. ಆದ್ದರಿಂದ ನಿರಾತಂಕವಾಗಿ ಇರಲು ಸಾಧ್ಯವಿಲ್ಲ. ಗೆಲುವಿನ ಹಾದಿಯಲ್ಲಿ ನಡೆಯಬೇಕು.

ಕಳೆದ ಪಂದ್ಯದಲ್ಲಿ ಲಂಕಾ ಎದುರು `ಟೈ~ಗೆ ಸಮಾಧಾನ ಪಟ್ಟಿದ್ದರೂ, ಈಗ ಒತ್ತಡದ ಸ್ಥಿತಿ. ಆಸ್ಟ್ರೇಲಿಯಾ ಎದುರು ಭಾನುವಾರದ ಪಂದ್ಯದಲ್ಲಿ ನಿರಾಸೆ ಕಾಡಿತು. ಆದ್ದರಿಂದ ಈಗ ಸಿಂಹಳೀಯರು ಭಾರತಕ್ಕೆ ನಿಕಟ ಪೈಪೋಟಿ ನೀಡುವ ಸ್ಥಿತಿಯಲ್ಲಿದ್ದಾರೆ. ಮಂಗಳವಾರ ನಡೆಯುವ ತ್ರಿಕೋನ ಸರಣಿಯ ಎಂಟನೇ ಪಂದ್ಯದಲ್ಲಿನ ಫಲಿತಾಂಶ ಮಹತ್ವದ್ದು. ಸರಣಿಯ ಮಹತ್ವದ ಘಟ್ಟವಿದು. ಈಗಲೇ ಸ್ಥಿತಿಯನ್ನು ಉತ್ತಮವಾದರೆ ಒಳಿತು. ಇಲ್ಲದಿದ್ದರೆ ಕೊನೆಯ ಎರಡು ಪಂದ್ಯಗಳಲ್ಲಿ ಭಾರಿ ಒತ್ತಡದ ನಡುವೆ ಆಡುವಂಥ ಸಂಕಷ್ಟ ಎದುರಾಗುತ್ತದೆ.

ಗೆಲುವು ಅಗತ್ಯ ಎನ್ನುವಂಥ ಸ್ಥಿತಿ ಭಾರತಕ್ಕೆ ಮಾತ್ರವಲ್ಲ ಶ್ರೀಲಂಕಾಕ್ಕೂ ಇದೆ. ಲೀಗ್ ಪಟ್ಟಿಯಲ್ಲಿ ಇವೆರಡೂ ತಂಡಗಳಿಗಿಂತ ಆತಿಥೇಯ ಆಸ್ಟ್ರೇಲಿಯಾ ಎತ್ತರದಲ್ಲಿದೆ. ಹದಿನಾಲ್ಕು ಪಾಯಿಂಟುಗಳನ್ನು ಸಂಗ್ರಹಿಸಿರುವ ಕಾಂಗರೂಗಳ ನಾಡಿನವರು ಯಾವುದೇ ಪರಿಸ್ಥಿತಿಯಲ್ಲಿ ಫೈನಲ್‌ನಲ್ಲಿ ಸ್ಥಾನ ಪಡೆಯುವ ಶಕ್ತಿ ಹೊಂದಿದ್ದಾರೆ. ಈಗ ಸವಾಲು ಎದುರಾಗಿರುವುದು ಶ್ರೀಲಂಕಾ ಹಾಗೂ ಭಾರತಕ್ಕೆ. ಲಂಕಾ ಏಳು ಪಾಯಿಂಟುಗಳನ್ನು ಹೊಂದಿದೆ. ಅದಕ್ಕಿಂತ ಭಾರತ ಮೂರು ಪಾಯಿಂಟುಗಳಿಂದ ಮೇಲಿದೆ. ಆದರೂ ಅಪಾಯದ ಅನುಮಾನ ತಪ್ಪಿಲ್ಲ.

ADVERTISEMENT

ಆದ್ದರಿಂದ ಸ್ವಲ್ಪವಾದರೂ ಸುರಕ್ಷಿತ ಎನಿಸುವ ಮಟ್ಟವನ್ನು ಮುಟ್ಟಲು ಮಂಗಳವಾರ ಇಲ್ಲಿ ನಡೆಯುವ ಪಂದ್ಯದಲ್ಲಿ ಜಯ ಪಡೆಯಬೇಕು. ಹೀಗೆ ಗೆಲುವು ಅನಿವಾರ್ಯ ಎನ್ನುವ ಸಂಕಷ್ಟ ಎದುರಿಗೆ ಇರುವಾಗಲೇ ಭಾರತ ತಂಡಕ್ಕೆ ನಾಯಕ ಮಹೇಂದ್ರ ಸಿಂಗ್ ದೋನಿ ನೆರವಿಲ್ಲ. ಕಳೆದ ಪಂದ್ಯದಲ್ಲಿನ ಓವರ್ ಮಂದಗತಿಗಾಗಿ ಒಂದು ಪಂದ್ಯದ ನಿಷೇಧ ಶಿಕ್ಷೆ ಅನುಭವಿಸಿದ್ದಾರೆ `ಮಹಿ~. ಈಗ ತಂಡ ನೇತೃತ್ವದ ಹೊಣೆಯನ್ನು ವೀರೇಂದ್ರ ಸೆಹ್ವಾಗ್ ಹೊತ್ತುಕೊಂಡಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಎಸೆತದಲ್ಲಿ ತಲೆಗೆ ಪೆಟ್ಟು ತಿಂದಿರುವ ಸಚಿನ್ ತೆಂಡೂಲ್ಕರ್ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್ಚರಿಕೆ ಕ್ರಮವಾಗಿ ಅವರು ಸೋಮವಾರ ಎಂಆರ್‌ಐ  ಸ್ಕ್ಯಾನ್ ಕೂಡ ಮಾಡಿಸಿಕೊಂಡಿದ್ದಾರೆ. ಚೆಂಡು ವೇಗವಾಗಿ ಬಡಿದಿದ್ದರಿಂದ ನೋವು ಇದೆ. ಆದ್ದರಿಂದ `ಲಿಟಲ್ ಚಾಂಪಿಯನ್~ ವಿಶ್ರಾಂತಿ ಪಡೆಯುವುದು ಅಗತ್ಯ. ಆದ್ದರಿಂದ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಹಳಷ್ಟು ವ್ಯತ್ಯಾಸ ಮಾಡುಬೇಕು. ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳ ಸ್ಥಾನವನ್ನು ತುಂಬುವುದು ಸುಲಭವಂತೂ ಅಲ್ಲ.

ದೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ಪಾರ್ಥಿವ್ ಪಟೇಲ್ ಅವರದ್ದು. `ವೀರೂ~ ಹಾಗೂ ಇನ್ನೊಬ್ಬ ದೆಹಲಿಯ   ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಇನಿಂಗ್ಸ್ ಆರಂಭಿಸುವುದು ಖಚಿತ. ದೋನಿ ಹಾಗೂ ಸಚಿನ್ ಇಲ್ಲದ ಕಾರಣ ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ರೋಹಿತ್ ಶರ್ಮ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ. ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಅವರು ಯಶಸ್ವಿಯಾದರೆ ಶ್ರೀಲಂಕಾ ಎದುರು ಭಾರತವು ಆಗ ಯಶಸ್ಸಿನ ನಿರೀಕ್ಷೆ ಮಾಡಬಹುದು.

ಸ್ಪಿನ್ ದಾಳಿಯಿಂದ ಎದುರಾಳಿಯನ್ನು ಒತ್ತಡದಲ್ಲಿ ಇಡುವ ಉದ್ದೇಶದಿಂದ ರವಿಚಂದ್ರನ್ ಅಶ್ವಿನ್‌ಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಲಂಕಾ ಎದುರು ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಅವರು ನಿರಾಸೆ ಮಾಡಿಲ್ಲ. ವೇಗಿಗಳ ಪಾತ್ರವೂ ಮುಖ್ಯವಾದದ್ದು. ಆದರೆ ಜಹೀರ್ ಖಾನ್, ಉಮೇಶ್ ಯಾದವ್, ವಿನಯ್ ಕುಮಾರ್ ಹಾಗೂ ಇರ್ಫಾನ್ ಪಠಾಣ್ ಲಭ್ಯವಾಗಿದ್ದಾರೆ. ಈ ನಾಲ್ವರಲ್ಲಿ ಮೂವರಿಗೆ ಅವಕಾಶ ನೀಡಬಹುದು. ಜಹೀರ್ ಹಾಗೂ ಪಠಾಣ್ ಅವರನ್ನು ಕಡೆಗಣಿಸಲಾಗದು. ವಿನಯ್ ಹಾಗೂ ಉಮೇಶ್ ನಡುವೆ ಸ್ಪರ್ಧೆ ಇದೆ. ಅವರಲ್ಲಿ ಯಾರು ಸೂಕ್ತವೆಂದು `ವೀರೂ~ ನಿರ್ಧರಿಸುತ್ತಾರೆಂದು ಕಾಯ್ದು ನೋಡಬೇಕು.

ತಂಡಗಳು

ಭಾರತ: ವೀರೇಂದ್ರ ಸೆಹ್ವಾಗ್ (ನಾಯಕ), ಗೌತಮ್    ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮ, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜಾ, ಇರ್ಫಾನ್ ಪಠಾಣ್, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಆರ್.ವಿನಯ್ ಕುಮಾರ್ ಮತ್ತು ಉಮೇಶ್ ಯಾದವ್.

ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಉಪುಲ್ ತರಂಗ, ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ, ದಿನೇಶ್ ಚಂಡಿಮಾಲ, ಲಾಹಿರು ತಿರುಮನ್ನೆ, ಮಾಹೇಲ ಜಯವರ್ಧನೆ, ತಿಸಾರ ಪೆರೆರಾ, ಆ್ಯಂಜೆಲೊ ಮ್ಯಾಥ್ಯೂಸ್, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ಫರ್ವೀಜ್ ಮಹಾರೂಫ್ ಮತ್ತು ರಂಗನ ಹೆರಾತ್.

ಅಂಪೈರ್‌ಗಳು: ಬಿಲಿ ಬೌವ್ಡೆನ್ (ನ್ಯೂಜಿಲೆಂಡ್) ಮತ್ತು ಪಾಲ್ ರೀಫೆಲ್ (ಆಸ್ಟ್ರೇಲಿಯಾ); ಸ್ಟೀವ್ ಡೆವಿಸ್ (ಆಸ್ಟ್ರೇಲಿಯಾ).

ಮ್ಯಾಚ್‌ರೆಫರಿ: ಕ್ರಿಸ್ ಬ್ರಾಡ್ (ಇಂಗ್ಲೆಂಡ್).

ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 8.50ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.