ADVERTISEMENT

`ನಮ್ಮನ್ನ ಕೇಳೋರು ಯಾರು ಹೇಳಿ'

ಚೊಚ್ಚಲ ಅಂಧರ ವಿಶ್ವಕಪ್ ಗೆದ್ದ ಭಾರತ; ಮಾತು ಮರೆತ ಸರ್ಕಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: `ಕಷ್ಟಪಟ್ಟು ವಿಶ್ವಕಪ್ ಗೆದ್ದಿರಬಹುದು. ನಮ್ಮ ಸಾಧನೆಗೆ ನಾವೇ ಚಪ್ಪಾಳೆ ತಟ್ಟಿಕೊಳ್ಳಬೇಕು. ಆದರೆ, ಭರವಸೆ ಕೊಟ್ಟ ಸರ್ಕಾರ ಮಾತ್ರ ಸುಮ್ಮನೆ ಕುಳಿತಿದೆ. ನಮ್ಮನ್ನು ಕೇಳೋರು ಯಾರು ಹೇಳಿ..'
-ಅಂಧರ ಚೊಚ್ಚಲ ವಿಶ್ವಕಪ್ ಟಿ-20ಯಲ್ಲಿ ಚಾಂಪಿಯನ್ ಆಗಿ ಸಂಭ್ರಮದಲ್ಲಿದ್ದ ಭಾರತ ತಂಡದ ನಾಯಕ ಕನ್ನಡಿಗ ಶೇಖರ್ ನಾಯ್ಕ ನೋವಿನಿಂದ ಹೇಳಿದ ಮಾತಿದು.

ಅಂಧರ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಕರ್ನಾಟಕದ ಆಟಗಾರರಿಗೆ ಐದು ಲಕ್ಷ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಭರವಸೆ ನೀಡಿದ್ದರು. ಶೇಖರ್ ನಾಯ್ಕ, ಪ್ರಕಾಶ್ ಜಯರಾಮಯ್ಯ ಮತ್ತು ರವಿ ಎಸ್. ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಅಕ್ಟೋಬರ್ 7ರಿಂದ 9ರ ವರೆಗೆ ಧಾರವಾಡದಲ್ಲಿ ನಡೆದ ಭಾರತ ತಂಡದ ಆಯ್ಕೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿಯವರು ಕರ್ನಾಟಕದ ಆಟಗಾರರಿಗೆ ಈ ಭರವಸೆ ನೀಡಿದ್ದರು. ಮೂವರು ಆಟಗಾರರು ಸ್ಥಾನ ಪಡೆದು, ವಿಶ್ವಕಪ್ ಗೆದ್ದರೂ ಮುಖ್ಯಮಂತ್ರಿಗಳು ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ.

`ಮನೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಲು ಅಥ್ಲೀಟ್‌ಗಳಿಗೆ ಹಣ ನೀಡಿ ಬೆಂಬಲಿಸಲಾಗಿದೆ. ಅದೇ ರೀತಿಯ ಪ್ರೋತ್ಸಾಹ ನಮಗೂ ಬೇಕು. ಆಗ ನಾವೂ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈಗಲಾದರೂ ಸರ್ಕಾರ ಗಮನ ಹರಿಸಬೇಕು' ಎಂದು ಶೇಖರ್ ಮನವಿ ಮಾಡಿಕೊಂಡರು.

`ಭಾರತದಲ್ಲಿ ಕ್ರಿಕೆಟ್‌ಗೆ ಪ್ರೋತ್ಸಾಹವಿದೆ. ಇದೀಗ ಅಂಧರ ಕ್ರಿಕೆಟ್ ಸಹ ಈ ಸಾಲಿಗೆ ಸೇರಿಕೊಳ್ಳುತ್ತಿದೆ. ಸರ್ಕಾರದಿಂದ ಬೆಂಬಲ ಸಿಕ್ಕರೆ, ಆಟಗಾರರ ಸ್ಥಿತಿ ಇನ್ನಷ್ಟು ಉತ್ತಮವಾಗುತ್ತದೆ. ಬದುಕೇ ಕತ್ತಲು ಎಂದುಕೊಳ್ಳುವ ಅಂಧರಲ್ಲಿ ಇದರಿಂದ ಬದುಕಿನ ಭರವಸೆ ಹೆಚ್ಚಿಸಿದಂತಾಗುತ್ತದೆ' ಎನ್ನುತ್ತಾರೆ ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ನಾಗೇಶ್.

ಇಲಾಖೆ ವತಿಯಿಂದ ಬಹುಮಾನ
ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಅಪ್ಪಚ್ಚು ರಂಜನ್ ಅಭಿನಂದನೆ ಸಲ್ಲಿಸಿದ್ದಾರೆ.`ವಿಶ್ವಕಪ್ ಗೆದ್ದ ಭಾರತ ತಂಡದವರು ನಿಜಕ್ಕೂ ಅಭಿನಂದನೆಗೆ ಅರ್ಹರು. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಲಿ.

ಭಾರತ ತಂಡದಲ್ಲಿದ್ದ ಮೂವರು ಆಟಗಾರರಿಗೆ ಶೀಘ್ರದಲ್ಲಿಯೇ ಇಲಾಖೆ ವತಿಯಿಂದ ಸನ್ಮಾನಿಸಿ ಬಹುಮಾನ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ' ಎಂದೂ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ಭಾರತದ ಸಾಧನೆಗೆ ಪ್ರಶಂಸೆ...
*`ಭಾರತ ಅಂಧರ ತಂಡದವರ ಸಂಭ್ರಮವನ್ನು ನೋಡಿದರೆ, 1983ರಲ್ಲಿ ನಾವು ಗೆದ್ದ ಚೊಚ್ಚಲ ವಿಶ್ವಕಪ್‌ನ ನೆನಪು ಮತ್ತೆ ಮತ್ತೆ ಕಾಡುತ್ತದೆ. ಅಂಧರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ'
ಸಯ್ಯದ್ ಕೀರ್ಮಾನಿ, ಮಾಜಿ ಕ್ರಿಕೆಟಿಗ

*`ಕ್ರಿಕೆಟ್‌ನಿಂದ ನಿವೃತ್ತನಾಗಿ 12 ವರ್ಷ ಉರುಳಿವೆ. ಮತ್ತೆ ಈಗ ಅಂಧರ ಆಟವನ್ನು ನೋಡಿದ್ದಕ್ಕೆ ಖುಷಿಯಾಗಿದೆ. ಭಾರತದ ಈ ಸಾಧನೆ ಮೆಚ್ಚುವಂತದ್ದು'
-ಅರ್ಜುನ್ ರಣತುಂಗಾ,ಶ್ರೀಲಂಕಾದ ಮಾಜಿ ನಾಯಕ

*`ಈ ಕ್ಷಣಕ್ಕೆ ಬದುಕು ಸಾರ್ಥಕವೆನಿಸುತ್ತಿದೆ. ಸಾಕಷ್ಟು ಆತಂಕದ ನಡುವೆಯೂ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಿದ ಖುಷಿಯ ಜೊತೆ ಭಾರತದ ಸಾಧನೆ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ'
ಜಿ.ಕೆ. ಮಹಾಂತೇಶ್, ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ

*ಅಮ್ಮನ ಕನಸನ್ನು ನನಸು ಮಾಡಿದ ಖುಷಿಯಿದೆ. ನಾಯಕನಾಗಬೇಕು ಎನ್ನುವ ಅವರ ಕನಸು ಕೈಗೂಡಿದೆ. ನನ್ನ ನಾಯಕತ್ವದಲ್ಲಿ ವಿಶ್ವಕಪ್ ಸಹ ಗೆದ್ದಿದ್ದೇವೆ. ಆದರೆ, ಇದನ್ನೆಲ್ಲಾ ನೋಡಲು ಅಮ್ಮ ಬದುಕಿರಬೇಕಿತ್ತು'
-ಶೇಖರ್ ನಾಯ್ಕ, ಭಾರತ ತಂಡದ ನಾಯಕ

*`ಭಾರತದ ಈ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಬೇಕು. ಉಳಿದ ಅಂಧರೂ ಸಹ ಯಾವುದಾದರೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರಬೇಕು.'
- ಪಿತಾಂಬರನ್, ಸಮರ್ಥನಂ ಸಂಸ್ಥೆಯ ದೆಹಲಿಯ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT