ADVERTISEMENT

ನಿಗದಿಯ ಓವರ್‌ಗಳ ಸರಣಿ ಮೊದಲು

ಬಿಸಿಸಿಐ ಸಭೆಯಲ್ಲಿ ಹೊರದೇಶಗಳ ಸರಣಿ ಕುರಿತು ನಿರ್ಧಾರ

ಪಿಟಿಐ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST

ಮುಂಬೈ: ಭಾರತ ಕ್ರಿಕೆಟ್ ತಂಡವು ಇನ್ನು ಮುಂದೆ ಹೊರದೇಶಗಳಲ್ಲಿ ಭಾಗವಹಿಸುವ ಸರಣಿಗಳಲ್ಲಿ ಮೊದಲು ನಿಗದಿಯ ಓವರ್‌ಗಳ ಮಾದರಿಯ ಪಂದ್ಯಗಳನ್ನು ಆಡಲಿದೆ. ನಂತರ ಟೆಸ್ಟ್ ಸರಣಿ ಆಡಲಿದೆ.

ಈಚೆಗೆ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು 1–2ರಿಂದ ಟೆಸ್ಟ್ ಸರಣಿ ಸೋತಿತ್ತು. ನಂತರ ನಡೆದಿದ್ದ ಏಕದಿನ ಮತ್ತು ಟ್ವೆಂಟಿ –20 ಸರಣಿಗಳಲ್ಲಿ ಗೆದ್ದಿತ್ತು. ಹೊರದೇಶಗಳಲ್ಲಿ ಸರಣಿ ಆಡುವಾಗ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ನಿಗದಿಯ ಓವರ್‌ಗಳ ಪಂದ್ಯಗಳನ್ನು ಮೊದಲು ಆಡುವುದು ಉತ್ತಮ ಎಂಬ ನಿರ್ಧಾರಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬಂದಿದೆ.

ಶನಿವಾರ ನಡೆದ ಸಭೆಯ ನಂತರ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದರು. ‘ದಕ್ಷಿಣ ಆಫ್ರಿಕಾದಿಂದ ತಂಡವು ಮರಳಿದ ನಂತರವ್ಯವಸ್ಥಾಪಕರು ನೀಡಿರುವ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿತ್ತು. ಈ ಕುರಿತು ಗಂಭೀರವಾಗಿ ಚರ್ಚೆ ನಡೆಸಲಾಯಿತು.

ADVERTISEMENT

ಈ ವರ್ಷ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ಸರಣಿ ಆಡಲು ತೆರಳಲಿದೆ. ಅಲ್ಲಿ ಟೆಸ್ಟ್‌ಗಿಂತ ಮುನ್ನ ಏಕದಿನ ಮತ್ತು ಟ್ವೆಂಟಿ–20 ಮಾದರಿ ಸರಣಿ ಆಡಲಾಗುವುದು. ಅದಕ್ಕೆ ತಕ್ಕಂತೆ ವೇಳಾಪಟ್ಟಿ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ರಾಹುಲ್ ಹೇಳಿದರು. ‘ಮೊದಲ ಬಾರಿಗೆ ಎಫ್‌.ಟಿ.ಪಿ (ಫ್ಯೂಚರ್ ಟೂರ್‌ ಪ್ರೊಗ್ರಾಂ) ವೇಳಾಪಟ್ಟಿ ನಮ್ಮ ಕೈಸೇರಲಿದೆ. 2019 ರಿಂದ 2023ರವರೆಗಿನ ಸರಣಿಗಳ ಕುರಿತು ಮುಂಚಿತವಾಗಿ ತಿಳಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.