ಧರ್ಮಶಾಲಾ (ಪಿಟಿಐ): ಉತ್ತರ ವಲಯ ತಂಡವನ್ನು 113 ರನ್‌ಗಳಿಂದ ಮಣಿಸಿದ ಪಶ್ಚಿಮ ವಲಯ ತಂಡ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ಪಶ್ಚಿಮ ವಲಯ ಆಲ್‌ರೌಂಡ್ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 355 ರನ್ ಪೇರಿಸಿತಲ್ಲದೆ, ಎದುರಾಳಿ ತಂಡವನ್ನು 42.2 ಓವರ್‌ಗಳಲ್ಲಿ 242 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.
ಭಾರತ ತಂಡಕ್ಕೆ ಮರಳುವ ಪ್ರಯತ್ನದಲ್ಲಿರುವ ಮುನಾಫ್ ಪಟೇಲ್ (34ಕ್ಕೆ 4) ಹಾಗೂ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ (68ಕ್ಕೆ 4) ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲು ಉತ್ತರ ವಲಯದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಉತ್ತರ ವಲಯ ತಂಡದ ನಾಯಕ ಹರಭಜನ್ ಸಿಂಗ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿ ದೊಡ್ಡ ತಪ್ಪು ಮಾಡಿದರು. ಅಜಿಂಕ್ಯ ರಹಾನೆ (118, 122 ಎಸೆತ, 15 ಬೌಂ, 1 ಸಿಕ್ಸರ್) ಗಳಿಸಿದ ಶತಕ ಹಾಗೂ ಪಾರ್ಥಿವ್ ಪಟೇಲ್ (78, 63 ಎಸೆತ, 14 ಬೌಂ), ಚೇತೇಶ್ವರ ಪೂಜಾರ (71, 67 ಎಸೆತ, 8 ಬೌಂ) ಮತ್ತು ಕೇದಾರ್ ಜಾದವ್ (ಅಜೇಯ 67, 43 ಎಸೆತ, 7 ಬೌಂ, 3 ಸಿಕ್ಸರ್) ಅವರ ಅರ್ಧಶತಕದ ನೆರವಿನಿಂದ ಪಶ್ಚಿಮ ವಲಯ ಬೃಹತ್ ಮೊತ್ತ ಪೇರಿಸಿತು.
ಸಂಕ್ಷಿಪ್ತ ಸ್ಕೋರ್: ಪಶ್ಚಿಮ ವಲಯ: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 355 (ಪಾರ್ಥಿವ್ ಪಟೇಲ್ 78, ಅಜಿಂಕ್ಯ ರಹಾನೆ 118, ಚೇತೇಶ್ವರ ಪೂಜಾರ 71, ಕೇದಾರ್ ಜಾಧವ್ ಅಜೇಯ 67, ಪ್ರದೀಪ್ ಸಂಗ್ವಾನ್ 63ಕ್ಕೆ 2, ಬಿಪುಲ್ ಶರ್ಮ 49ಕ್ಕೆ 1, ಹರಭಜನ್ ಸಿಂಗ್ 56ಕ್ಕೆ 1). ಉತ್ತರ ವಲಯ: 42.2 ಓವರ್‌ಗಳಲ್ಲಿ 242 (ಮನ್‌ದೀಪ್ ಸಿಂಗ್ 46, ಬಿಪುಲ್ ಶರ್ಮಾ 68, ಹರಭಜನ್ ಸಿಂಗ್ 30, ಮನ್‌ಪ್ರೀತ್ ಗೋನಿ 28, ರಿಶಿ ಧವನ್ ಔಟಾಗದೆ 25, ಮುನಾಫ್ ಪಟೇಲ್ 34ಕ್ಕೆ 4, ಇಕ್ಬಾಲ್ ಅಬ್ದುಲ್ಲಾ 68ಕ್ಕೆ 4). ಫಲಿತಾಂಶ: ಪಶ್ಚಿಮ ವಲಯಕ್ಕೆ 113 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.