ADVERTISEMENT

ಪಾಕ್‌–ಲಂಕಾ ಪಂದ್ಯ ಡ್ರಾ

ಕ್ರಿಕೆಟ್‌: ಶೆಹ್ಜಾದ್‌, ಹಫೀಜ್‌ ಅರ್ಧ ಶತಕ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಅಬುಧಾಬಿ (ಎಎಫ್‌ಪಿ): ಅಹ್ಮದ್‌ ಶೆಹ್ಜಾದ್‌ ಹಾಗೂ ಮೊಹಮ್ಮದ್‌ ಹಫೀಜ್‌ ಅವರ ಅರ್ಧ ಶತಕಗಳ ನೆರವಿನಿಂದ ಪಾಕಿಸ್ತಾನ ತಂಡದವರು ಶನಿವಾರ ಇಲ್ಲಿ ಕೊನೆಗೊಂಡ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 302 ರನ್‌ಗಳ ಗುರಿಗೆ ಉತ್ತರವಾಗಿ ಪಾಕ್‌ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಅಂತಿಮ ದಿನ 52 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 158 ರನ್‌ ಗಳಿಸಿತು.

ಈ ತಂಡ ಮನ್ಸೂರ್‌ ಅವರ ವಿಕೆಟ್‌ ಬೇಗನೇ ಕಳೆದುಕೊಂಡಿತು. ಆದರೆ ಶೆಹ್ಜಾದ್‌ ಹಾಗೂ ಹಫೀಜ್‌ ಎರಡನೇ ವಿಕೆಟ್‌ಗೆ 101 ಸೇರಿಸಿ ತಂಡಕ್ಕೆ ಆಸರೆಯಾದರು. 136 ಎಸೆತಗಳನ್ನು ಎದುರಿಸಿದ ಹಫೀಜ್‌ 11 ಬೌಂಡರಿಗಳ ಸಮೇತ ಅಜೇಯ 80 ರನ್‌ ಗಳಿಸಿದರು.

ಇದಕ್ಕೂ ಮೊದಲು ಲಂಕಾ ತಂಡದವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ 480 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡರು. ನಾಯಕ ಏಂಜೆಲೊ ಮ್ಯಾಥ್ಯೂಸ್‌ 157 ರನ್‌ ಗಳಿಸಿ ಅಜೇಯರಾಗುಳಿದರು. 343 ಎಸೆತಗಳ ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 16 ಬೌಂಡರಿಗಳಿವೆ. ಮೊದಲ ಇನಿಂಗ್ಸ್‌ನಲ್ಲಿ 179 ರನ್‌ಗಳ ಹಿನ್ನಡೆ ಅನುಭವಿಸಿದ್ದ ಸಿಂಹಳೀಯ ಪಡೆ ಮ್ಯಾಥ್ಯೂಸ್‌ ಅವರ ಆಟದ ನೆರವಿನಿಂದಾಗಿ ಸೋಲಿನಿಂದ ಪಾರಾಯಿತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: ಮೊದಲ ಇನಿಂಗ್ಸ್‌ 204 ಮತ್ತು 168.3  ಓವರ್‌ಗಳಲ್ಲಿ 480 ಡಿಕ್ಲೇರ್ಡ್‌ (ಏಂಜೆಲೊ ಮ್ಯಾಥ್ಯೂಸ್‌ ಔಟಾಗದೆ 157, ಪ್ರಸನ್ನ ಜಯವರ್ಧನೆ ಔಟಾಗದೆ 63; ಜುನೈದ್‌ ಖಾನ್‌ 93ಕ್ಕೆ3, ಬಿಲವಾಲ್‌ ಭಟ್ಟಿ 146ಕ್ಕೆ2); ಪಾಕಿಸ್ತಾನ ಪ್ರಥಮ ಇನಿಂಗ್ಸ್‌್ 129.1 ಓವರ್‌ಗಳಲ್ಲಿ 383 ಹಾಗೂ 52 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 158 (ಅಹ್ಮದ್‌ ಶೆಹ್ಜಾದ್‌ 55, ಮೊಹಮ್ಮದ್‌ ಹಫೀಜ್‌ ಔಟಾಗದೆ 80; ಸುರಂಗಾ ಲಕ್ಮಲ್‌ 43ಕ್ಕೆ1, ರಂಗನಾ ಹೆರತ್‌ 37ಕ್ಕೆ1).
ಫಲಿತಾಂಶ: ಡ್ರಾ. ಪಂದ್ಯ ಶ್ರೇಷ್ಠ: ಏಂಜೆಲೊ ಮ್ಯಾಥ್ಯೂಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.