ADVERTISEMENT

ಪ್ರಣಯ್‌, ಶ್ರೀಕಾಂತ್‌ಗೆ ದುಬಾರಿ ಬೆಲೆ

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ ಆಟಗಾರರ ಹರಾಜು

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಕಿದಂಬಿ ಶ್ರೀಕಾಂತ್‌
ಕಿದಂಬಿ ಶ್ರೀಕಾಂತ್‌   

ಹೈದರಾಬಾದ್: ಭಾರತದ ಅಗ್ರಗಣ್ಯ ಆಟಗಾರ ಕಿದಂಬಿ ಶ್ರೀಕಾಂತ್‌, ಹಾಗೂ ಎಚ್‌.ಎಸ್ ಪ್ರಣಯ್‌ ಪ್ರೀಮಿಯರ್ ಬ್ಯಾಡ್ಮಿಂಟನ್‌ ಲೀಗ್ ಆಟಗಾರರ ಹರಾಜಿನಲ್ಲಿ ಸೋಮವಾರ ಅತಿ ಹೆಚ್ಚು ಬೆಲೆ ಪಡೆದುಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಆಟಗಾರ ಶ್ರೀಕಾಂತ್‌ ಅವರನ್ನು ಅವಧೆ ವಾರಿಯರ್ಸ್ ತಂಡ ಉಳಿಸಿಕೊಂಡಿದೆ. ಇಂಡೊನೇಷ್ಯಾ ಹಾಗೂ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಅಪೂರ್ವ ಫಾರ್ಮ್‌ನಲ್ಲಿರುವ ಶ್ರೀಕಾಂತ್‌ ಅವರನ್ನು ₹56.10 ಲಕ್ಷಕ್ಕೆ ಕೊಂಡುಕೊಳ್ಳಲಾಗಿದೆ. ಎಚ್‌.ಎಸ್‌.ಪ್ರಣಯ್‌ ಅವರನ್ನು ₹ 62 ಲಕ್ಷಕ್ಕೆ ಅಹಮದಾಬಾದ್‌ ಸ್ಮ್ಯಾಷ್‌ ಮಾಸ್ಟರ್ಸ್‌ ಖರೀದಿಸಿದೆ.

ಭಾರತದ ಅಗ್ರಗಣ್ಯ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಅವರನ್ನು ಕ್ರಮವಾಗಿ ಹಾಲಿ ಚಾಂಪಿಯನ್ ಚೆನ್ನೈ ಸ್ಮ್ಯಾಷರ್ಸ್ ಹಾಗೂ ಅವಧೆ ವಾರಿಯರ್ಸ್ ತಂಡಗಳು ಉಳಿಸಿಕೊಂಡಿವೆ. ಸಿಂಧು ₹ 48.75ಲಕ್ಷ ಪಡೆದರೆ, ಸೈನಾಗೆ 41.25ಲಕ್ಷ ಬೆಲೆ ಲಭಿಸಿದೆ.

ADVERTISEMENT

ನಿಯಮದ ಪ್ರಕಾರ ಒಂದು ತಂಡ ಕೇವಲ ಒಬ್ಬ ಸ್ಪರ್ಧಿಯನ್ನು ಮಾತ್ರ ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯ. ಉಳಿಸಿಕೊಂಡ ಸ್ಪರ್ಧಿಗೆ ಹೋದ ವರ್ಷದ ಹರಾಜಿನ ಬೆಲೆಗಿಂತ ಶೇ 25ರಷ್ಟು ಹೆಚ್ಚು ಸಂಭಾವನೆ ನೀಡಬೇಕು. ‘ರೈಟ್‌ ಟು ಮ್ಯಾಚ್‌‘ ನಿಯಮದ ಪ್ರಕಾರ ಖರೀದಿಸಿದ ಇನ್ನೊಬ್ಬ ಸ್ಪರ್ಧಿಗೆ ಹೋದ ವರ್ಷದ ಬೆಲೆಗಿಂತ ಶೇ 10ರಷ್ಟು ಹೆಚ್ಚು ಸಂಬಳ ನೀಡಬೇಕು.

ಸಿಂಧುಗೆ ಹೋದ ವರ್ಷದ ಹರಾಜಿನಲ್ಲಿ ₹ 39 ಲಕ್ಷ ಸಿಕ್ಕಿದ್ದರೆ ಈ ಬಾರಿ ಅವರು 48.75ಲಕ್ಷ ಪಡೆದಿದ್ದಾರೆ. ಸೈನಾ ಹೋದ ವರ್ಷ 33 ಲಕ್ಷ ಪಡೆದಿದ್ದರು.

ಡಬಲ್ಸ್ ವಿಭಾಗದ ಆಟಗಾರರಲ್ಲಿ ಭಾರತದ ಸಾತ್ವಿಕ್ ಸೈರಾಜ್‌, ಕೊರಿಯಾದ ಲೀ ಯಂಗ್ ಡಿ ಮತ್ತು ರಷ್ಯಾದ ವ್ಲಾದಿಮಿರ್ ಇವಾನೊವ್‌ ಅವರು ತಮ್ಮ ಹಳೆಯ ತಂಡಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇವರು ಹರಾಜಿಗೆ ಲಭ್ಯರಿರಲಿಲ್ಲ.

ಪ್ರತೀ ಫ್ರಾಂಚೈಸ್‌ನಲ್ಲಿ 11 ಆಟಗಾರರು ಇರುತ್ತಾರೆ. ಗರಿಷ್ಠ ಐದು ವಿದೇಶಿ ಆಟಗಾರರು ಇರಬಹುದು. ಜೊತೆಗೆ ಕನಿಷ್ಟ ಮೂರು ಮಹಿಳಾ ಸ್ಪರ್ಧಿಗಳು ಇರಬೇಕು. ಒಂದು ತಂಡ ₹ 2.12ಕೋಟಿ ಹಣವನ್ನು ಮಾತ್ರ ಖರ್ಚು ಮಾಡಬಹುದು.

ಹರಾಜಿನ ಆಕರ್ಷಣೆ: ಎರಡು ತಾಸು ತಡವಾಗಿ ಆರಂಭವಾದ ಹರಾಜಿನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತೈ ಜು ಯಿಂಗ್‌ ಪ್ರಮುಖ ಆಕರ್ಷಣೆ ಎನಿಸಿದ್ದರು. ಅಹಮದಾಬಾದ್‌ ಸ್ಮ್ಯಾಷ್ ಮಾಸ್ಟರ್ಸ್ ತಂಡ ಅವರನ್ನು ₹ 52ಲಕ್ಷಕ್ಕೆ ಖರೀದಿಸಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರಿಗೆ ಹೈದರಾಬಾದ್ ಹಂಟರ್ಸ್ ತಂಡ ₹50 ಲಕ್ಷ ನೀಡಿದೆ.

ಪುರುಷರ ಸಿಂಗಲ್ಸ್ ವಿಭಾಗದ ಅಗ್ರ ರ‍್ಯಾಂಕಿಂಗ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸನ್ ಅವರನ್ನು ₹50 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ಖರೀದಿಸಿದೆ. ಅಕ್ಸೆಲ್‌ಸನ್‌ ಹೋದ ವರ್ಷ ಕೂಡ ಇದೇ ತಂಡದಲ್ಲಿ ಆಡಿದ್ದರು.

ಎರಡನೇ ರ‍್ಯಾಂಕ್ ಆಟಗಾರ ಸನ್‌ ವಾನ್ ಹೊ ಹಾಗೂ ಐದನೇ ರ‍್ಯಾಂಕ್‌ನ ಸಂಗ್‌ ಜಿ ಹುಯಾನ್ ಅವರನ್ನು ದೆಹಲಿ ಏಸರ್ಸ್ ತಂಡ ₹50ಲಕ್ಷಕ್ಕೆ ಕೊಂಡುಕೊಂಡಿದೆ. ಚೀನಾ ತೈಪೆಯ ತೈಜು ವಿ ವಾಂಗ್ ಅವರಿಗೆ ನಾರ್ತ್ ಈಸ್ಟರ್ನ್ ವಾರಿಯರ್ಸ್ ತಂಡ ₹ 52 ಲಕ್ಷ ನೀಡಿದೆ. ಪುರುಷರ ಸಿಂಗಲ್ಸ್ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ತೈಜು ವಾಂಗ್ ಹತ್ತನೇ ಸ್ಥಾನದಲ್ಲಿ ಇದ್ದಾರೆ. ವಾರಿಯರ್ಸ್ ತಂಡ ತೈಜು ಅವರನ್ನು ‘ಐಕಾನ್’ ಆಟಗಾರನಾಗಿ ಖರೀದಿಸಿದೆ.

ಡಬಲ್ಸ್‌ನಲ್ಲಿ ಕ್ರಿಸ್ಟಿನಾ ದುಬಾರಿ: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಕ್ರಿಸ್ಟಿನಾ ಪೆಡರ್ಸನ್‌ ಡಬಲ್ಸ್ ವಿಭಾಗದಲ್ಲಿ ಹರಾಜಾದ ದುಬಾರಿ ಆಟಗಾರ್ತಿ ಎನಿಸಿದರು. ಅವಧೆ ವಾರಿಯರ್ಸ್ ₹42ಲಕ್ಷಕ್ಕೆ ಈ ಆಟಗಾರ್ತಿಯನ್ನು ಖರೀದಿಸಿದೆ. ಕ್ರಿಸ್ಟಿನಾ ಅವರ ಜೋಡಿ ಕಾಮಿಲ್ಲಾ ರ‍್ಯಾಟರ್‌ ಅವರನ್ನು ಅಹಮದಾಬಾದ್ ಸ್ಮ್ಯಾಷ್ ತಂಡ ₹35 ಲಕ್ಷಕ್ಕೆ ಖರೀದಿಸಿದೆ.

ಡಬಲ್ಸ್ ಪರಿಣಿತ ಆಟಗಾರ್ತಿ ಪ್ರಜಕ್ತಾ ಸಾವಂತ್‌ ಮತ್ತು ಚಿರಾಗ್ ಶೆಟ್ಟಿ ಅವರನ್ನು ನಾರ್ತ್ ಈಸ್ಟರ್ನ್‌ ವಾರಿಯರ್ಸ್ ಕ್ರಮವಾಗಿ ₹7 ಹಾಗೂ ₹5 ಲಕ್ಷಕ್ಕೆ ಕೊಂಡುಕೊಂಡಿದೆ.

ಅಶ್ವಿನಿಗೆ ಹೆಚ್ಚು ಮೊತ್ತ: ಭಾರತದ ಅಗ್ರಗಣ್ಯ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ದೆಹಲಿ ಏಸರ್ಸ್ ತಂಡದಲ್ಲಿ ₹20 ಲಕ್ಷ ಪಡೆದಿದ್ದಾರೆ. ಮನು ಅತ್ರಿ ಬೆಂಗಳೂರು ಬ್ಲಾಸ್ಟರ್ಸ್ ಪಾಲಾಗಿದ್ದಾರೆ. ಈ ತಂಡ ಅವರಿಗೆ ₹17ಲಕ್ಷ ನೀಡಿದೆ.

ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರಿ ಚೋಪ್ರಾ ದೆಹಲಿ ಏಸರ್ಸ್ ತಂಡದಲ್ಲಿ ₹18 ಲಕ್ಷ ಪಡೆದಿದ್ದಾರೆ. ಡಬಲ್ಸ್ ಆಟ ಗಾರ್ತಿ ಆರತಿ ಸಾರಾ ಸುನಿಲ್ ಅವರಿಗೆ ದೆಹಲಿ ತಂಡದಲ್ಲಿ ₹ 3ಲಕ್ಷ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.