ADVERTISEMENT

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌: ಭಾರತಕ್ಕೆ ಅಮೆರಿಕ ತಂಡ

ಪಿಟಿಐ
Published 2 ಅಕ್ಟೋಬರ್ 2017, 19:53 IST
Last Updated 2 ಅಕ್ಟೋಬರ್ 2017, 19:53 IST
ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌: ಭಾರತಕ್ಕೆ ಅಮೆರಿಕ ತಂಡ
ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌: ಭಾರತಕ್ಕೆ ಅಮೆರಿಕ ತಂಡ   

ಕೋಲ್ಕತ್ತ/ನವದೆಹಲಿ: ಭಾರತದಲ್ಲಿನ ಫಿಫಾ 17 ವರ್ಷದೊಳಗಿನವರ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇರಾಕ್ ಹಾಗೂ ಅಮೆರಿಕ ತಂಡಗಳು ಕ್ರಮವಾಗಿ ಕೋಲ್ಕತ್ತ ಹಾಗೂ ನವದೆಹಲಿಗೆ ಸೋಮವಾರ ಬಂದಿಳಿದಿವೆ.

ಅಕ್ಟೋಬರ್ 6ರಿಂದ ಆರಂಭವಾಗುವ ಟೂರ್ನಿಗೆ ಸಜ್ಜುಗೊಳ್ಳಲು ಇರಾಕ್ ತಂಡ ಇಲ್ಲಿನ ಸ್ಥಳೀಯ ಆಟಗಾರರೊಂದಿಗೆ ಅಭ್ಯಾಸ ಪಂದ್ಯ ಆಡಲಿದೆ. ಬೆಳಿಗ್ಗೆ 2.10ಕ್ಕೆ 21 ಆಟಗಾರರನ್ನು ಒಳಗೊಂಡ ಇರಾಕ್ ತಂಡ ಕೋಲ್ಕತ್ತ ವಿಮಾನ ನಿಲ್ದಾಣ ತಲುಪಿದೆ. ಕೋಚ್ ಕಹತಾನ್ ಜಾತಿರ್ ಅವರೊಂದಿಗೆ ಆರು ಸಹ ಸಿಬ್ಬಂದಿ ಕೂಡ ಇದ್ದಾರೆ. ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಈ ತಂಡ ‘ಎಫ್‌’ ಗುಂಪಿನ ಮೊದಲ ಪಂದ್ಯವನ್ನು ಅಕ್ಟೋಬರ್‌ 8ರಂದು ಮೆಕ್ಸಿಕೊ ಎದುರು ಆಡಲಿದೆ.

2016ರ ಎಎಫ್‌ಸಿ ಚಾಂಪಿಯನ್‌ಷಿಪ್‌ನಲ್ಲಿ ಇರಾಕ್‌ನ 16 ವರ್ಷದೊಳಗಿನವರ ತಂಡ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಈ ತಂಡ ಇರಾನ್ ಎದುರು ಜಯದಾಖಲಿಸಿತ್ತು. ಈ ತಂಡದ ಪ್ರಮುಖ ಆಟಗಾರ ಮೊಹಮ್ಮದ್ ದಾವೂದ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ADVERTISEMENT

ಅಮೆರಿಕ ಹಾಗೂ ಘಾನ ತಂಡಗಳು ನವದೆಹಲಿಗೆ ಬಂದಿಳಿದಿವೆ. ದುಬೈನಲ್ಲಿ ಏಳು ದಿನಗಳ ತರಬೇತಿ ಶಿಬಿರವನ್ನು ನಡೆಸಿದ್ದ ಅಮೆರಿಕ ತಂಡ ನೇರವಾಗಿ ಭಾರತಕ್ಕೆ ಬಂದಿದೆ. ಘಾನ ತಂಡ ಕೂಡ ಅಬುಧಾಬಿಯಲ್ಲಿ ತರಬೇತಿ ಶಿಬಿರ ನಡೆಸಿದೆ. ಅಮೆರಿಕ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್‌ 6ರಂದು ಭಾರತದ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.