ADVERTISEMENT

ಫುಟ್‌ಬಾಲ್: ಜೆಎಸ್‌ಡಬ್ಲ್ಯು ಜೊತೆ ಒಸಾನೊ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST
ಐ ಲೀಗ್ ಟೂರ್ನಿಯಲ್ಲಿ ಆಡಲು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಕ್ಲಬ್‌ನೊಂದಿಗೆ      ಒಪ್ಪಂದ ಮಾಡಿಕೊಂಡ ಕರ್ಟಿಸ್ ಒಸಾನೊ
ಐ ಲೀಗ್ ಟೂರ್ನಿಯಲ್ಲಿ ಆಡಲು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಕರ್ಟಿಸ್ ಒಸಾನೊ   

ಬೆಂಗಳೂರು:  ಐ ಲೀಗ್ ಟೂರ್ನಿಗೆ ಹೊಸದಾಗಿ ಸೇರ್ಪಡೆಯಾಗಿರುವ ಬೆಂಗಳೂರು ಮೂಲದ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಕ್ಲಬ್ ಜೊತೆ ಆಡುವ ಒಪ್ಪಂದಕ್ಕೆ ಇಂಗ್ಲೆಂಡ್ ಮೂಲದ ಇಬ್ಬರು ಆಟಗಾರರು ಸಮ್ಮತಿಸಿದ್ದಾರೆ. ಇದು ತಂಡದ ಬಲವನ್ನು ಇನ್ನಷ್ಟು ಹೆಚ್ಚಿಸಿದೆ.

ಡಿಫೆಂಡರ್ಸ್‌ ಜಾನ್ ಜಾನ್ಸನ್ ಹಾಗೂ ಕರ್ಟಿಸ್ ಒಸಾನೊ ಅವರೊಂದಿಗೆ ಜೆಎಸ್‌ಡಬ್ಲ್ಯು ಮಂಗಳವಾರ ಒಪ್ಪಂದ ಮಾಡಿಕೊಂಡಿದೆ. 24 ವರ್ಷದ ಜಾನ್ಸನ್ ಇಂಗ್ಲೆಂಡ್ ಪ್ರಿಮಿಯರ್ ಲೀಗ್‌ನ ಒಂದು ಋತುವಿನಲ್ಲಿ ಮಿಡಲ್ಸ್‌ಬ್ರೋ ಪರ ಹಾಗೂ ಒಸಾನೊ ರೀಡಿಂಗ್ ಅಕಾಡೆಮಿ ಕ್ಲಬ್ ಪರ ಆಡಿದ್ದಾರೆ.

`ನಿಜವಾಗಿಯೂ ಇದೊಂದು ದೊಡ್ಡ ಬದಲಾವಣೆ. ಆದರೆ ಕ್ಲಬ್, ಅದರ ದೂರದೃಷ್ಟಿ, ಯೋಜನೆಗಳ ಬಗ್ಗೆ ಮ್ಯಾನೇಜರ್ ವಿವರಿಸಿದಾಗ ಒಪ್ಪಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಐ ಲೀಗ್‌ನಲ್ಲಿ ಆಡಲು ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದೇನೆ' ಎಂದು ಜಾನ್ಸನ್ ಪ್ರತಿಕ್ರಿಯಿಸಿದ್ದಾರೆ.

`ಜಾನ್ಸನ್ ಹಾಗೂ ಒಸಾನೊ ಜೊತೆಗೂ ಹಾಗೂ ವಿರುದ್ಧವೂ ಪಂದ್ಯಗಳನ್ನು ಆಡಿದ್ದೇನೆ. ಉಭಯ ಆಟಗಾರರು 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಿದ್ದಾರೆ' ಎಂದು ತಂಡದ ಕೋಚ್ ಆ್ಯಶ್ಲೆ ವೆಸ್ಟ್‌ವುಡ್ ತಿಳಿಸಿದ್ದಾರೆ.

`ಉಭಯ ಆಟಗಾರರು ಉಷ್ಣತೆ ಹೆಚ್ಚಿರುವ ರಾಷ್ಟ್ರಗಳಲ್ಲಿ ಸಮರ್ಥವಾಗಿ ಆಡಿರುವ ಅನುಭವ ಹೊಂದಿದ್ದು, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುವುದಿಲ್ಲ' ಎಂದು ವೆಸ್ಟ್‌ವುಡ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. `ಸವಾಲುಗಳೆಂದರೆ ನನಗಿಷ್ಟ. ತುಂಬಾ ವಿಭಿನ್ನ ಶೈಲಿಯ   ಲೀಗ್‌ವೊಂದರಲ್ಲಿ ಪಾಲ್ಗೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ' ಎಂದು 26 ವರ್ಷದ ಒಸಾನೊ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.